ಬ್ಯೂನಸ್ ಐರಿಸ್: ಅರ್ಜೆಂಟೀನಾ ಫುಟ್ಬಾಲ್ ದಂತಕತೆ ಲಿಯೋನೆಲ್ ಮೆಸ್ಸಿ, ದಾಖಲೆಯ 7ನೇ ಬಾರಿಗೆ ಪ್ರತಿಷ್ಠಿತ ಬ್ಯಾಲನ್ ಡಿ’ಓರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಪ್ಯಾರಿಸ್’ನ ಚಾಟೆಲೆಟ್ ಥಿಯೇಟರ್’ನಲ್ಲಿ ಸೋಮವಾರ ತಡರಾತ್ರಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಕಿಕ್ಕಿರಿದು ಸೇರಿದ್ದ ವಿಶೇಷ ಅಹ್ವಾನಿತರೆದುರು 34ರ ಹರೆಯದ ಮೆಸ್ಸಿ ಪ್ರಶಸ್ತಿ ಸ್ವೀಕರಿಸಿದರು. ಸ್ಪೇನ್’ನ ಸೂಪರ್ ಸ್ಟಾರ್ ಅಲೆಕ್ಸಿಯಾ ಪುಟೆಲ್ಲಾಸ್ ಮಹಿಳಾ ವಿಭಾಗದ ಬ್ಯಾಲನ್ ಡಿ’ಓರ್ ಪ್ರಶಸ್ತಿಗೆ ಭಾಜನಾರದರು.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಮೆಸ್ಸಿ, 28 ವರ್ಷಗಳ ಬಳಿಕ ಕೋಪಾ ಅಮೆರಿಕಾ ಟೂರ್ನಿಯಲ್ಲಿ ಅರ್ಜೆಂಟೀನಾ ತಂಡ ಚಾಂಪಿಯನ್ ಪಟ್ಟಕ್ಕೇರಿದ್ದು, ನಾನು ಇಂದು ಬ್ಯಾಲನ್ ಡಿ’ಓರ್ ಪ್ರಶಸ್ತಿಯನ್ನು ಸ್ವೀಕರಿಸಲು ಮುಖ್ಯ ಕಾರಣ ಎಂದು ಹೇಳಿದರು. ಲಿಯೋನೆಲ್ ಮೆಸ್ಸಿ ಪತ್ನಿ ಆಂಟೊನೆಲ್ಲ ರೊಕುಝೋ ಮತ್ತು ಮೂವರು ಮಕ್ಕಳೊಂದಿಗೆ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು
ಈ ಬಾರಿ ಪ್ರಶಸ್ತಿ ರೇಸ್’ನಲ್ಲಿ ಮೆಸ್ಸಿಗೆ, ಬಯಾರ್ನ್ ಮ್ಯೂನಿಚ್ ತಂಡದ ರೊಬರ್ಟ್ ಲೆವಂಡೊಸ್ಕಿ ಹಾಗೂ ಫ್ರಾನ್ಸ್ ತಂಡದ ಕರೀಮ್ ಬೆನ್ಝೆಮಾ ಕಠಿಣ ಸವಾಲೊಡ್ಡಿದ್ದರು. ಆದರೆ ಎಲ್ಲಾ ಸವಾಲಗಳನ್ನು ಮೆಟ್ಟಿ ನಿಂತ ಮೆಸ್ಸಿ ದಾಖಲೆಯ 7ನೇ ಬಾರಿಗೆ ‘ಚಿನ್ನದ ಚೆಂಡು’ಅನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇದಕ್ಕೂ ಮೊದಲು ಮೆಸ್ಸಿ 2009, 2010, 2011, 2012, 2015 ಹಾಗೂ 2019ರಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯ ತನ್ನದಾಗಿಸಿಕೊಂಡಿದ್ದರು. ವೃತ್ತಿ ಜೀವನದಲ್ಲಿ ತನ್ನ ಎಂದಿನ ಪ್ರತಿಸ್ಪರ್ಧಿ ಪೋರ್ಚುಗಲ್’ನ ಕ್ರಿಸ್ಟಿಯಾನೋ ರೊನಾಲ್ಡೋ ಇದುವರೆಗೆ 5 ಬಾರಿ ಬ್ಯಾಲನ್ ಡಿ’ಓರ್ ಪ್ರಶಸ್ತಿಯನ್ನು ಗೆದ್ದ ಸಾಧನೆ ಮಾಡಿದ್ದಾರೆ.
ಫ್ರಾನ್ಸ್ ಫುಟ್ಬಾಲ್ ನಿಯತಕಾಲಿಕೆಯ ಬ್ಯಾಲನ್ ಡಿ’ಓರ್ ಪ್ರಶಸ್ತಿಯನ್ನು 1956ರಿಂದ ವಿಶ್ವದ ಅತ್ಯುತ್ತಮ ಫುಟ್ಬಾಲ್ ಆಟಗಾರನಿಗೆ ನೀಡಲಾಗುತ್ತಿದೆ. ಕರೋನಾ ಕಾರಣದಿಂದಾಗಿ ಕಳೆದ ವರ್ಷ (2020) ಪ್ರಶಸ್ತಿ ಸಮಾರಂಭವನ್ನು ರದ್ದುಗೊಳಿಸಲಾಗಿತ್ತು.