ಬೆಂಗಳೂರು: 16 ತಿಂಗಳುಗಳಾದರೂ ಕೋವಿಡ್ ಮೃತದೇಹಗಳು ಆಸ್ಪತ್ರೆಯ ಶವಾಗಾರದಲ್ಲಿಯೇ ಕೊಳೆತು ಹೋದ ಆಘಾತಕಾರಿ ಘಟನೆಯೊಂದು ರಾಜಾಜಿನಗರದ ESI ಆಸ್ಪತ್ರೆಯಲ್ಲಿ ನಡೆದಿದೆ.
2020ರ ಜುಲೈ ತಿಂಗಳಿನಲ್ಲಿ ಕೋವಿಡ್ ನಿಂದ ಮೃತಪಟ್ಟಿದ್ದ ಚಾಮರಾಜಪೇಟೆಯ ದುರ್ಗಾ (40) ಹಾಗೂ ಕೆಪಿ ಅಗ್ರಹಾರ ಮೂಲಕ ಮನಿರಾಜು (35) ಅವರ ಮೃತದೇಹಗಳನ್ನು ಆಸ್ಪತ್ರೆಯ ಹಳೆಯ ಶವಾಗಾರದ ಫ್ರೀಜರ್ನಲ್ಲಿ ಇರಿಸಲಾಗಿತ್ತು. ಕೊರೋನಾ 2ನೇ ಅಲೆ ವೇಳೆ ಸಾವಿನ ಸಂಖ್ಯೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಹೊಸ ಶವಾಗಾರವನ್ನು ನಿರ್ಮಿಸಿ ಅಲ್ಲಿ ಶವಗಳನ್ನು ಸಾಗಿಸಲಾಗಿತ್ತು. ಆದರೆ, ಸಿಬ್ಬಂದಿಗಳ ನಿರ್ಲಕ್ಷ್ಯ ವರ್ತನೆಯಿಂದಾಗಿ ಹಳೆಯ ಶವಾಗಾರದಲ್ಲಿ ಈ ಎರಡೂ ಮೃತದೇಹಗಳು ಉಳಿದು ಹೋಗಿವೆ. ಶವಗಳನ್ನು ಇರಿಸಿ 16 ತಿಂಗಳುಗಳಾದರೂ ಯಾರೊಬ್ಬರ ಗಮನಕ್ಕೂ ಈ ವಿಚಾರ ಬಂದಿಲ್ಲ.
ಆಸ್ಪತ್ರೆಯ ಕೆಲ ಸಿಬ್ಬಂದಿಗಳು ಶವಾಗಾರದ ಆವರಣ ಸ್ವಚ್ಛ ಮಾಡಲೆಂದು ಹೋದಾಗ ಸ್ಥಳದಲ್ಲಿ ದುರ್ವಾಸನೆ ಬರುವುದನ್ನು ಗಮನಿಸಿ ವೈದ್ಯಕೀಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ವೈದ್ಯಕೀಯ ಸಿಬ್ಬಂದಿಗಳು ಪರಿಶೀಲನೆ ನಡೆಸಿದಾಗ ಫ್ರೀಝರ್ ನಲ್ಲಿ ಎರಡು ಮೃತದೇಹಗಳಿರುವುದು ಕಂಡು ಬಂದಿದೆ. ನಂತರ ವೈದ್ಯಕೀಯ ಅಧೀಕ್ಷಕರು ಹಾಗೂ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದೀಗ ಎರಡೂ ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರಿಗೆ ಪತ್ರ ಬರೆದ ರಾಜಾಜಿ ನಗರ ಶಾಸಕ ಸುರೇಶ್ ಕುಮಾರ್ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.