ಬೆಂಗಳೂರು: ಟ್ರಾವೆಲ್ಸ್ ಹೆಸರಲ್ಲಿ ಕಾರು ಅಟ್ಯಾಚ್ ಮಾಡಿಸಿಕೊಂಡು ಸುಮಾರು 10 ಕೋಟಿ ರೂ. ಮೌಲ್ಯದ 130ಕ್ಕೂ ಹೆಚ್ಚು ಕಾರುಗಳ ಜತೆ ವಂಚಕರು ಪರಾರಿಯಾಗಿರುವ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಮಿಳುನಾಡು ಮೂಲದ ಶಿವಕುಮಾರ್ ಮಾಲೀಕತ್ವದ ನಾಗಸಂದ್ರದಲ್ಲಿದ್ದ ಆರ್ ಎಸ್ ಟ್ರಾವೆಲ್ಸ್ನಿಂದ ವಂಚನೆ ನಡೆದಿದ್ದು ಪ್ರಕರಣ ದಾಖಲಿಸಿರುವ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ ಎಂದು ಡಿಸಿಪಿ ವಸಂತರಾವ್ ಪಾಟೀಲ್ ತಿಳಿಸಿದ್ದಾರೆ.
ಮಾಲೀಕರುಗಳಿಂದ ಅಟ್ಯಾಚ್ ಮಾಡಿಸಿಕೊಂಡ 10 ಕೋಟಿಗೂ ಅಧಿಕ ಮೌಲ್ಯದ ಕಾರುಗಳ ಸಮೇತ ಮಾಲೀಕ ಶಿವಕುಮಾರ್ ಪರಾರಿಯಾಗಿದ್ದಾರೆ..ತಮಿಳುನಾಡು ಮೂಲದ ಶಿವಕುಮಾರ್, ಆರ್ ಎಸ್ ಟ್ರಾವೆಲ್ಸ್ ಹೆಸರಲ್ಲಿ ಕಂಪನಿ ತೆರೆದಿದ್ದು ಮಾಲೀಕರಿಂದ ಇನೋವಾ ಈಟಿಯೋಸ್ ಸ್ವಿಫ್ಟ್ ಕಾರುಗಳನ್ನು ಬಾಡಿಗೆಗೆ ಅಟ್ಯಾಚ್ ಮಾಡಿಕೊಳ್ಳುತ್ತಿದ್ದರು.
ಪ್ರತಿ ತಿಂಗಳ 8 ರಂದು ಅಟ್ಯಾಚ್ ಮಾಡಿದ್ದ ಕಾರು ಮಾಲೀಕರ ಅಕೌಂಟ್ ಗೆ ಬಾಡಿಗೆ ಹಣ ಹಾಕುತ್ತಿದ್ದರು. ಆದರೆ ಈ ತಿಂಗಳು ಹಣ ಹಾಕಿಲ್ಲ. ಬದಲಿಗೆ 130ಕ್ಕೂ ಹೆಚ್ಚು ಕಾರುಗಳ ಜೊತೆ ಪರಾರಿಯಾಗಿದ್ದಾರೆ. ನಾಗಸಂದ್ರದಲ್ಲಿದ್ದ ಟ್ರಾವೆಲ್ಸ್ ಕಚೇರಿಯಿಂದ ರಾತ್ರೋರಾತ್ರಿ ಖಾಲಿ ಮಾಡಿ ಪರಾರಿಯಾಗಿರುವ ಶಿವಕುಮಾರ್ ಪತ್ತೆಗೆ ಶೋಧ ನಡೆಸಲಾಗಿದ್ದು ಶಿವಕುಮಾರ್ ಕಂಪನಿಗೆ ಕಾರುಗಳನ್ನ ಅಟ್ಯಾಚ್ ಮಾಡಿದ್ದ ಮಾಲೀಕರು ಕಂಗಾಲಾಗಿದ್ದಾರೆ.