UAPA ಎಂಬ ದಮನಕಾರಿ ಕಾಯ್ದೆ ರದ್ದಾಗಲಿ

Prasthutha|

ನಾನು ಒಂದೇ ಒಂದು ದಿನ ನೆಮ್ಮದಿಯಿಂದ ಕಳೆದಿಲ್ಲ. ನಾನು ಕಳೆದ 8 ತಿಂಗಳುಗಳಿಂದ ಜೈಲಿನಲ್ಲಿ ಏಕಾಂಗಿಯಾಗಿದ್ದೇನೆ. ಬಹಳಷ್ಟು ಬಾರಿ ದಿನಕ್ಕೆ 20 ಗಂಟೆಗಳಿಗೂ ಅಧಿಕ ಸಮಯ ಸೆಲ್ ನ ಒಳಗೇ ಇರಬೇಕು. ಈಗ ಈ ಕೋವಿಡ್ ಕಾಲದಲ್ಲಿ ಜೈಲುವಾಸದ ಕಷ್ಟ ಹಲವು ಪಟ್ಟು ಹೆಚ್ಚಾಗಿ ಅತ್ಯಂತ ಭೀಕರವಾಗಿ ಮಾರ್ಪಾಡಾಗಿದೆ. ಕೋವಿಡ್ 2ನೇ ಅಲೆ ಇಡೀ ದೇಶವನ್ನು ಕಂಗಾಲು ಮಾಡಿದ ಕಳೆದ ಒಂದು ತಿಂಗಳಲ್ಲಿ ಒಂದೇ ಒಂದು ಹಗಲು ಅಥವಾ ರಾತ್ರಿ ನಾನು ನೆಮ್ಮದಿಯಿಂದ ಕಳೆದಿಲ್ಲ. ನನ್ನ ಕುಟುಂಬ ಮತ್ತು ಆತ್ಮೀಯರ ಕುರಿತು ನಾನು ತೀವ್ರ ಕಳವಳಕ್ಕೊಳಗಾಗಿದ್ದೇನೆ. ಬೇರೆ ಏನಾದರೂ ಯೋಚಿಸಿ ಗಮನ ಬೇರೆಡೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಿದರೂ ಪ್ರತೀ ದಿನ ಬೆಳಿಗ್ಗೆ ಪತ್ರಿಕೆಗಳಲ್ಲಿ ಬರುವ ಸಾವು ನೋವುಗಳ ಸುದ್ದಿಗಳನ್ನು ನೋಡಿ ತಲ್ಲಣಿಸುತ್ತೇನೆ. ಕೆಟ್ಟ ಯೋಚನೆಗಳೆಲ್ಲವೂ ಬೇಡ ಬೇಡ ಎಂದರೂ ನನ್ನನ್ನು ಅದು ಆವರಿಸಿಕೊಳ್ಳುತ್ತಿತ್ತು. ಈ ಜೈಲಿನ ಕೋಣೆಯೇ ಕಿರಿದಾಗುತ್ತಾ ಬಂದು ನನ್ನ ದೇಹವನ್ನು ಮತ್ತು ಮನಸ್ಸನ್ನು ಉಸಿರುಗಟ್ಟಿಸಿ ಬಿಡುತ್ತದೆ ಎಂದು ಭಾಸವಾಗುತ್ತದೆ.ಈ ಸಂಕಷ್ಟದ ನಡುವೆಯೇ ಒಂದು ದಿನ ಬೆಳಿಗ್ಗೆ ಏಳುವಾಗ ನನಗೆ ಜ್ವರ ಮತ್ತು ತೀವ್ರ ಮೈ ಕೈ ನೋವು ಕಾಡುತ್ತಿತ್ತು. ಜೈಲಿನ ಒಪಿಡಿ (ಹೊರರೋಗಿ ವಿಭಾಗ)ಗೆ ಪರೀಕ್ಷೆಗಾಗಿ ಹೋದರೆ ಅವರು ಕೆಲವು ಔಷಧಿ ಕೊಟ್ಟು ವಾಪಸು ಕಳಿಸಿಬಿಟ್ಟರು. ಆರು ದಿನ ರೋಗಲಕ್ಷಣಗಳೊಂದಿಗೆ ಹಾಗೆಯೇ ಕಳೆದು ಕೊನೆಗೆ ಕೋರ್ಟ್ ಆದೇಶ ಪಡೆದ ಬಳಿಕ ಪರೀಕ್ಷೆ ಮಾಡಿಸಿದರು. ನನಗೆ ಕೊರೋನಾ ಪಾಸಿಟಿವ್ ಬಂತು. ಪಾಸಿಟಿವ್ ಆದ ಬಳಿಕ ನನಗೆ ಎಲ್ಲಾ ಅಗತ್ಯ ವೈದ್ಯಕೀಯ ಚಿಕಿತ್ಸೆ ಸಿಕ್ಕಿತು.

- Advertisement -

ನನ್ನನ್ನು ಕ್ವಾರಂಟೈನ್ ಮಾಡಿಸಿದರು. ಸಹಜವಾಗಿ ಕ್ವಾರಂಟೈನ್ ನಿಂದಾಗಿ ವಾರಕ್ಕೊಮ್ಮೆ ಬರುತ್ತಿದ್ದ ಮನೆಯವರ ಫೋನ್ ಕರೆ, ವೀಡಿಯೋ ಕಾಲ್ ಬಂದಾಯಿತು. ಸೆಲ್ ನೊಳಗೆ ಅಸಹಾಯಕನಾಗಿ ಬಿದ್ದುಕೊಂಡು ಮನೆಯವರ ಪರಿಸ್ಥಿತಿ ಏನಾಗಿದೆಯೋ ಎಂಬ ಆತಂಕದಲ್ಲೇ ಕೊರೋನಾದಿಂದ ಗುಣಮುಖನಾಗುತ್ತಾ ಬಂದೆ. ದಿಲ್ಲಿ ಹೈಕೋರ್ಟ್ ಉನ್ನತ ಮಟ್ಟದ ಸಮಿತಿ ರಚಿಸಿ ಕಳೆದ ವರ್ಷದಂತೆ ಈ ಬಾರಿಯೂ ಕೋವಿಡ್ ಕಾರಣಕ್ಕಾಗಿ ಬಂಧಿತರನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ನೋಡಲು ಹೇಳಿದ್ದನ್ನು ಕ್ವಾರಂಟೈನ್ ನಡುವೆಯೇ ಓದಿದ್ದೆ. ಆದರೆ ಕಳೆದ ವರ್ಷದ ಅನುಭವದಿಂದ ಯುಎಪಿಎ ಕಾಯ್ದೆಯಡಿ ಬಂಧಿತರಿಗೆ ಅಂತಹ ರಿಯಾಯಿತಿ ಸಿಗುವುದಿಲ್ಲ ಎಂದು ಗೊತ್ತಿತ್ತು. ಕೊನೆಗೆ ಇದೇ ಖಚಿತವಾಯಿತು.

ಆದರೆ ಯುಎಪಿಎ ಅಡಿಯಲ್ಲಿ ಬಂಧಿತರಾದವರಿಗೆ ಜಾಮೀನು ಸಿಗುವುದು ಹೆಚ್ಚು ಕಡಿಮೆ ಅಸಾಧ್ಯ ಅಥವಾ ತೀರಾ ಕಷ್ಟ. “Bail is a rule, Jail is an exception” ಜಾಮೀನು ಕೊಡಬೇಕು, ತೀರಾ ಅನಿವಾರ್ಯವಾದರೆ ಮಾತ್ರ ಜೈಲು ಎಂಬ ಸುಪ್ರೀಂ ಕೋರ್ಟ್ ಹೇಳಿಕೆಯನ್ನೇ ಯುಎಪಿಎ ಕಾನೂನು ಉಲ್ಲಂಘಿಸುತ್ತದೆ.

- Advertisement -

ಇದು ಬನೋಜ್ಯೊತಿಸ್ ನ ಲಾಹಿರಿ ಮತ್ತು ಅನಿರ್ಭನ್ ಭಟ್ಟಾಚಾರ್ಯರವರಿಗೆ ಉಮರ್ ಖಾಲಿದ್ ತಿಹಾರ್ ಜೈಲ್ ನಿಂದ ಬರೆದ ಪತ್ರ. ಉಮರ್ ಖಾಲಿದ್ ಸಾಮಾಜಿಕ ಕಾರ್ಯಕರ್ತ ಹಾಗೂ ಜೆಎನ್ ಯು ಮಾಜಿ ವಿದ್ಯಾರ್ಥಿ. 2020 ಸೆಪ್ಟೆಂಬರ್ 13ರಂದು ಯುಎಪಿಎ ಕಾಯ್ದೆಯಡಿ ಅವರನ್ನು ದಿಲ್ಲಿ ಪೊಲೀಸರು ಬಂಧಿಸಿದ್ದರು. ಆ ಬಳಿಕ ಅವರು ತಿಹಾರ್ ಜೈಲಿನಲ್ಲಿದ್ದಾರೆ.
1960ರಲ್ಲಿ ಭಾರತ -ಚೀನಾ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ಕೆಲವು ಭಾರತೀಯರು ಚೀನಾಕ್ಕೆ ಬೆಂಬಲ ಸೂಚಿಸುತ್ತಿದ್ದರು. ಅದೇ ಸಮಯದಲ್ಲಿ ತಮಿಳುನಾಡಿನ ಡಿಎಂಕೆ ಪಕ್ಷವು ಒಂದು ವೇಳೆ ನಮ್ಮ ಸರಕಾರ ಬಂದರೆ ನಾವು ಬೇರೆ ದೇಶವನ್ನು ರಚಿಸುತ್ತೇವೆ ಎಂದು ಅಧಿಕೃತವಾಗಿ ಹೇಳಿಕೆ ನೀಡಿತು. ಈ ಪ್ರಮುಖ ಕಾರಣವನ್ನಿಟ್ಟು ದೇಶದ ವಿರುದ್ಧ ಕೆಲಸ ಮಾಡುವ ಸಂಘಟನೆಗಳನ್ನು ನಿಷೇಧಿಸಿ ಅದರ ಸಕ್ರಿಯ ಕಾರ್ಯಕರ್ತರನ್ನು ಬಂಧಿಸುವ ಉದ್ದೇಶದಿಂದ 1967ರಲ್ಲಿ ಯುಎಪಿಎ ಕಾಯ್ದೆಯನ್ನು ಜಾರಿಗೊಳಿಸಲಾಯಿತು. ಭಯೋತ್ಪಾದನೆ ಎನ್ನುವ ಹೊಸ ಅಪರಾಧಗಳು ಆರಂಭವಾದಾಗ, ಅದು ಒಂದು ದೇಶದ, ಇಡೀ ನಾಗರಿಕ ಸಮಾಜದ ಮೇಲೆ ದುಷ್ಪರಿಣಾಮ ಬೀರುವುದರಿಂದ ಅದನ್ನು ಘನ ಗಂಭೀರವೆಂದು ಪರಿಗಣಿಸಿ ಐಪಿಸಿಯಿಂದ ಆಚೆಗೆ ಹಲವಾರು ವಿಶೇಷ ಅಧಿಕಾರಗಳನ್ನು ಪೊಲೀಸರಿಗೆ ನೀಡುವ TADA (Terrorist and Desruptive Act) ಕಾನೂನು ಜಾರಿಯಾಯಿತು. ಇದರಡಿ ಬಂಧಿತರಾದ ನಿಜವಾದ ಭಯೋತ್ಪಾದಕರು ಸುಮಾರು 1000 ಇದ್ದರೆ, ಒಂದು ಲಕ್ಷಕ್ಕೂ ಹೆಚ್ಚು ಬಂಧಿತರಾದವರು ಅಮಾಯಕ ಆದಿವಾಸಿಗಳು, ದಲಿತರು ಮತ್ತು ಅಲ್ಪಸಂಖ್ಯಾತರು. ಆ ಸಮಯದಲ್ಲಿ ಬಿಜೆಪಿ ಸೇರಿದಂತೆ ಎಲ್ಲರೂ ಧ್ವನಿಗೂಡಿಸಿ ಈ ಕಾಯ್ದೆ ರದ್ದಾಗಬೇಕು ಎಂದು ದೊಡ್ಡ ಹೋರಾಟ ಮಾಡಿದ್ದರು. ಪರಿಣಾಮವಾಗಿ 1995ರಲ್ಲಿ TADA ರದ್ದಾಯಿತು.
1999ರಲ್ಲಿ ಎನ್ ಡಿಎ ಸರಕಾರ ಅಧಿಕಾರಕ್ಕೆ ಬಂದಾಗ ವಾಜಪೇಯಿಯ ನೇತೃತ್ವದಲ್ಲಿ POTA (Prevention of Terrorist Act) ಕಾಯ್ದೆ ಬಂತು. ಅದರಲ್ಲಿ ಜಗತ್ತಿನಲ್ಲಿ ಅತ್ಯಂತ ಸರ್ವಾಧಿಕಾರಗಳಲ್ಲಿ ಇರುವಂತಹ ಎಲ್ಲಾ ಜನವಿರೋಧಿ, ಪ್ರಜಾತಂತ್ರ ವಿರೋಧಿ, ಮಾನವ ವಿರೋಧಿಯಾದಂತಹ ಹಲವಾರು ಅಂಶಗಳಿದ್ದವು. ಇವೆಲ್ಲ ವಿಶೇಷ ಕಾಯ್ದೆಗಳಾದ್ದರಿಂದ ಪ್ರತೀ ಎರಡು ವರ್ಷಗಳಿಗೊಮ್ಮೆ ಪಾರ್ಲಿಮೆಂಟ್ ನಲ್ಲಿ ಅದನ್ನು ನವೀಕರಿಸಬೇಕು. 2004ರಲ್ಲಿ ಬಿಜೆಪಿ ಸರಕಾರ ಸೋತಿದ್ದರಿಂದ ಪೋಟಾ ರದ್ದಾಯಿತು.
ಆದರೆ 2004ರಲ್ಲಿ ಈ ವಿಶೇಷವಾದ ಕಾಯ್ದೆಗಳು (UAPA, POTA, TADA ಇತ್ಯಾದಿ) ಪ್ರತಿಸಲ ಪಾರ್ಲಿಮೆಂಟ್ ನಲ್ಲಿ ನವೀಕರಿಸಲ್ಪಡುವುದನ್ನು ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ತಪ್ಪಿಸಿತು. ಅದು ಮೇಲಿನ ಎಲ್ಲಾ ಕಾಯ್ದೆಗಳಲ್ಲಿದ್ದ ಭಯೋತ್ಪಾದನಾ ದಮನದ ಎಲ್ಲಾ ಅಂಶಗಳನ್ನು ಸೇರಿಸಿ ಯುಎಪಿಎ ಯನ್ನು ಶಾಶ್ವತ ಕಾಯ್ದೆಯನ್ನಾಗಿ ಮಾಡಿಬಿಟ್ಟಿತು. ಆಗ ಇದೊಂದು IPC (Indian Penal Code) ತರಹ ಶಾಶ್ವತ ಕಾಯ್ದೆಯಾಯಿತು.
UAPA (Unlawful Activities Prevention Act) ಕಾಯ್ದೆಯು ಜಗತ್ತಿನ ಅತ್ಯಂತ ಕರಾಳ ಕಾನೂನುಗಳಲ್ಲಿ ಒಂದಾಗಿದೆ. ಈ ಕಾಯ್ದೆಯ ಸೆಕ್ಷನ್ 15 ಮತ್ತು 18ರ ಪ್ರಕಾರ ಭಯೋತ್ಪಾದನೆ ಹಾಗೂ ಭಯೋತ್ಪಾದನಾ ಚಟುವಟಿಕೆಗಳೆಂದರೆ ದೇಶದ ಭದ್ರತೆಗೆ ಹಾಗೂ ಸಮಗ್ರತೆಗೆ ಧಕ್ಕೆ ತರುವ ಉದ್ದೇಶವಿರುವ ಕೃತ್ಯಗಳು ಮಾತ್ರವಲ್ಲ, ಸರಕಾರದ ಬಗ್ಗೆ ಅವಿಶ್ವಾಸ ಮೂಡಿಸುವ ಯಾವುದೇ ಕೃತ್ಯಗಳು, ಬರಹ ಹಾಗೂ ಭಾಷಣಗಳು ಕೂಡಾ ಭಯೋತ್ಪಾದನೆಯಾಗುತ್ತದೆ. ಅಷ್ಟು ಮಾತ್ರವಲ್ಲ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಒಂದು ಭಯೋತ್ಪಾದನಾ ಕೃತ್ಯದ ತಯಾರಿಗೆ ಪೂರಕವಾದ ಸಹಕಾರಗಳನ್ನು ಭಯೋತ್ಪಾದನೆಯೆಂದೇ ಪರಿಗಣಿಸಲಾಗುತ್ತದೆ. ಅಂತಹ ಸಂಘಟನೆಗಳ ಸದಸ್ಯರಾಗುವುದು ಅಥವಾ ಅದರ ಸಭೆಗಳಲ್ಲಿ ಭಾಗವಹಿಸುವುದೂ ಭಯೋತ್ಪಾದನೆಯೆಂದು ಈ ಕಾಯ್ದೆ ಹೇಳುತ್ತದೆ.
ಯುಎಪಿಎ ಕಾಯ್ದೆಯಡಿ ಯಾರನ್ನಾದರೂ ಬಂಧಿಸಲು ಪೊಲೀಸರಿಗೆ ವಾರೆಂಟಿನ ಅಗತ್ಯವಿಲ್ಲ. ಇತರ ಕಾನೂನುಗಳಲ್ಲಿ ಪೊಲೀಸ್ ಕಸ್ಟಡಿಗೆ ಗರಿಷ್ಠ ಅವಧಿ 14 ದಿನಗಳಾಗಿದ್ದರೆ, ಯುಎಪಿಎ ಅಡಿ 30 ದಿನಗಳ ಕಾಲ ಆರೋಪಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಳ್ಳಬಹುದು. ಇತರ ಕಾನೂನುಗಳಲ್ಲಿ ಚಾರ್ಜ್ ಶೀಟ್ ದಾಖಲಿಸಲು ಪೊಲೀಸರಿಗೆ ಹೆಚ್ಚೆಂದರೆ 90 ದಿನಗಳ ಕಾಲ ಅವಕಾಶವಿದ್ದರೆ ಯುಎಪಿಎ ಅಡಿ 180 ದಿನಗಳ ಕಾಲ ಅವಕಾಶ ಒದಗಿಸಲಾಗಿದೆ. ಇತರ ಅಪರಾಧಗಳಲ್ಲಿ ನ್ಯಾಯಾಲಯವು ಜಾಮೀನು ನೀಡುವಾಗ ಮೇಲ್ನೋಟಕ್ಕೆ ಆರೋಪಿಯ ಅಪರಾಧ ಸಾಬೀತಾಗುವಂತಿದೆಯೇ ಹಾಗೂ ಆರೋಪಿಯು ರೂಢಿಗತ ಅಪರಾಧಿಯೇ, ಸಾಕ್ಷಿಯ ಪುರಾವೆಗಳನ್ನು ನಾಶ ಮಾಡಬಲ್ಲನೇ ಎಂಬುದನ್ನು ಮಾತ್ರ ಪರಿಗಣಿಸುತ್ತದೆ. ಆದರೆ ಯುಎಪಿಎ ಸೆಕ್ಷನ್ 43(5)ರಡಿಯ ಪ್ರಕಾರ ನ್ಯಾಯಾಲಯವು ಚಾರ್ಜ್ ಶೀಟ್ ಸಲ್ಲಿಕೆಯಾದ ನಂತರ ಅಥವಾ ಅದಕ್ಕೆ ಪೂರ್ವದಲ್ಲಿ ಜಾಮೀನು ಅರ್ಜಿಯನ್ನು ನಿರ್ವಹಿಸುವಾಗ ಸಾಕ್ಷಿ ನಾಶದ ಸಂಭಾವ್ಯತೆಯನ್ನು ಮಾತ್ರವಲ್ಲದೆ ಮೇಲ್ನೋಟಕ್ಕೆ ಆರೋಪಿಯ ಮೇಲೆ ಕೇಸಿದೆಯೋ ಎಂದು ಪರಿಶೀಲಿಸಬೇಕು. ಯುಎಪಿಎ ಅಡಿಯಲ್ಲಿ ನಿರೀಕ್ಷಣಾ ಜಾಮೀನು ಸಿಗುವುದಿಲ್ಲ. ನಿರೀಕ್ಷಣಾ ಜಾಮೀನು ಎಂದರೆ ತನ್ನನ್ನು ಪೊಲೀಸರು ಬಂಧಿಸಲು ಬರುತ್ತಾರೆಂದು ವಿಷಯ ತಿಳಿದ ತಕ್ಷಣ ಒಂದು ದಿವಸ ಮೊದಲೇ ಕೋರ್ಟಿನಿಂದ ಜಾಮೀನು ಪಡೆಯುವುದು. ಇತರ ಕಾನೂನುಗಳಡಿಯಲ್ಲಿ ಆರೋಪವನ್ನು ಸಾಬೀತು ಮಾಡಬೇಕಾದ ಜವಾಬ್ದಾರಿ ಪೊಲೀಸ್/ಸರಕಾರಿ ಅಭಿಯೋಜಕರದ್ದಾಗಿದ್ದರೆ ಯುಎಪಿಎ ಅಡಿ ತನ್ನ ಮೇಲಿನ ಆರೋಪವು ಸುಳ್ಳೆಂದು ಸಾಬೀತು ಮಾಡಬೇಕಾದ ಜವಾಬ್ದಾರಿ ಆರೋಪಿಯದ್ದೇ ಆಗಿರುತ್ತದೆ. ಇತರ ಕಾನೂನುಗಳಡಿ ಅಪರಾಧ ಸಾಬೀತಾಗುವ ತನಕ ಆರೋಪಿಯನ್ನು ನ್ಯಾಯಾಲಯ ನಿರಪರಾಧಿಯೆಂದೇ ಪರಿಗಣಿಸಿದರೆ ಯುಎಪಿಎ ಅಡಿ ಆರೋಪಿಯು ತನ್ನ ನಿರಪರಾಧಿತ್ವವನ್ನು ಸಾಬೀತು ಮಾಡುವ ತನಕ ನ್ಯಾಯಾಲಯ ಆತನನ್ನು ಅಪರಾಧಿ ಎಂಬ ಭಾವದಿಂದಲೇ ನಿರ್ವಹಿಸುತ್ತದೆ.
ಈ ಕಾಯ್ದೆಗೆ 2008ರಲ್ಲಿ ಮುಂಬೈ ಸ್ಫೋಟ ನಡೆದಾಗ ಒಂದು ತಿದ್ದುಪಡಿ ಮಾಡಲಾಯಿತು. ಆಮೇಲೆ 2012ರಲ್ಲೂ ಒಂದು ತಿದ್ದುಪಡಿ ಮಾಡಲಾಯಿತು. ಮೋದಿಯವರು ಎರಡನೆಯ ಬಾರಿ ಅಧಿಕಾರಕ್ಕೆ ಬಂದಾಗ 2019ರಲ್ಲಿ ಕೇವಲ ಸಂಘಟನೆಗಳು ಮಾತ್ರವಲ್ಲ, ವ್ಯಕ್ತಿಗಳನ್ನೂ ಕೂಡಾ Terrorist ಎಂದು ಯುಎಪಿಎ ಕೆಳಗಡೆ ಬಂಧಿಸಬಹುದು ಎಂಬ ತಿದ್ದುಪಡಿ ತಂದರು. ಮೊದಲು Unlawful Activities ಎಂದು ಇದ್ದದ್ದನ್ನು ಈಗ Terrorist Activities ಎಂದು ಸೇರಿಸಲಾಯಿತು. ಸೆಕ್ಷನ್ 15ರಲ್ಲಿ ‘‘Whoever does any act with intent to threaten or likely to threaten the unity, integrity, security (Economic Security) or sovereignty of India or with intent to strike terror or likely to strike terror in the people or any section of the people in India or in any foreign country”. ಯಾರಾದರೂ ಒಬ್ಬ ವ್ಯಕ್ತಿ ದೇಶದ ಐಕ್ಯತೆ, ಭದ್ರತೆ, ಸಮಗ್ರತೆ ಮತ್ತು ಸಾರ್ವಭೌಮತೆಗೆ ವಿರುದ್ಧವಾಗಿ ಕೆಲಸ ಮಾಡುವ ಉದ್ಧೇಶದಿಂದ ಅಥವಾ ಅಂತಹ ಸಂಭಾವ್ಯತೆ ಇರುವಂತಹ ಕಾರಣದಿಂದ… ಇದರಲ್ಲಿ Likely” ಎಂಬುದನ್ನು 2008ರಲ್ಲಿ ಸೇರಿಸಲಾಯಿತು. ಅಂದರೆ ನಿಮ್ಮ ಉದ್ದೇಶ ಕಾನೂನುಬಾಹಿರವಾಗಬೇಕಾಗಿಲ್ಲ, ಒಂದು ವೇಳೆ ಅಂತಹ ಸಂಭಾವ್ಯತೆ ಇದ್ದರೂ ಕೂಡಾ ನೀವು ಮಾಡುವ ಯಾವುದೇ ಚಟುವಟಿಕೆಯನ್ನು Unity, Integrity (ಐಕ್ಯತೆ, ಸಮಗ್ರತೆ)ಯನ್ನು ಭಂಗ ಮಾಡುತ್ತದೆ ಮತ್ತು ನಿಮಗೆ ಆ ಪ್ರೇರಣೆ ಇದೆ ಅಂತ ಭಾವಿಸಬಹುದಾಗಿದೆ. ಪ್ರಾರಂಭದಲ್ಲಿ “By using Bombs, dynamite or other explosive” ಎಂದಿತ್ತು. ಆನಂತರ ಅದಕ್ಕೆ “any other means of whatever nature” ಎಂಬುದನ್ನು ಸೇರಿಸಿದರು. ಅಂದರೆ ನೀವು ಧಿಕ್ಕಾರ ಅಂತ ಕೂಗಿದರೂ ಕೂಡಾ ಭಯೋತ್ಪಾದನೆ ಎಂದು ಪರಿಗಣಿಸಬಹುದು. ಯಾವುದಾದರೊಂದು ಅರಣ್ಯ ಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ಆದಿವಾಸಿಗಳನ್ನು ಎತ್ತಂಗಡಿ ಮಾಡುತ್ತಾರೆ ಎಂದಾಗ ಅದನ್ನು ನೀವು ಭಾರತ ಸರಕಾರ ಮಾಡುವುದು ತಪ್ಪುಎಂದು ಹೇಳಿದರೆ ಇದು ಭಾರತ ಸರಕಾರವನ್ನು ನೀವು ವಿಮರ್ಶೆ ಮಾಡಿದಂತಾಗುತ್ತದೆ. ಇದು ಭಾರತ ದೇಶದ ಸಾರ್ವಭೌಮತೆಗೆ ಧಕ್ಕೆ ತರುವಂತಹದ್ದು ಎಂದು ಪರಿಗಣಿಸಲಾಗುವುದು. ಗುಂಪುಗೂಡಿ ಯಾವುದೇ ಸರಕಾರಿ ಅಧಿಕಾರಿಯನ್ನು ಆತನ ಕಾರ್ಯ ನಿರ್ವಹಿಸುವುದಕ್ಕೆ ಅಡ್ಡಿ ಪಡಿಸುವಂತಹ ಅಥವಾ ಯಾವುದೇ ಹಿಂಸಾತ್ಮಕ ಪ್ರತಿಭಟನೆ ಮಾಡುವಾಗ ಗಾಜುಗಳು ಒಡೆದು ಹೋಗುವಂತಹ ಅಪರಾಧ ಐಪಿಸಿ ಕಾಯ್ದೆಯಡಿ ಬರುತ್ತದೆ. ಆದರೆ 2008ರಲ್ಲಿ ಇದನ್ನು Loss of, or damage to, or destruction of, Property”: ಎಂಬ ಅಂಶವನ್ನು ಸೇರಿಸಿ ಐಪಿಸಿ ಕೆಳಗಡೆ ಬರುವ ಈ ಅಪರಾಧವನ್ನು ಯುಎಪಿಎ ಕಾಯ್ದೆ ಕೆಳಗಡೆ ಭಯೋತ್ಪಾದಕ ಅಪರಾಧ ಎಂದು ಪರಿಗಣಿಸಬಹುದಾದಂತಹ ತಿದ್ದುಪಡಿ ಮಾಡಲಾಯಿತು.
ಆದಿವಾಸಿಗಳನ್ನು ಅಥವಾ ರೈತರನ್ನು ಎತ್ತಂಗಡಿ ಮಾಡಲಿಕ್ಕೆ ಒಬ್ಬ ಸರಕಾರಿ ಅಧಿಕಾರಿ ಬಂದಾಗ ಪ್ರತಿಭಟಿಸುವವರು ‘ನಾವು ಹೋಗಲ್ಲ’ ಎಂದು ಅಲ್ಲಿ ಗಟ್ಟಿಯಾಗಿ ಕೂತಿರುತ್ತಾರೆ. ತಾನು ಎದ್ದೇಳಲ್ಲ, ಎಂದು ಅಹಿಂಸಾತ್ಮಕವಾಗಿ ಪ್ರತಿಭಟನೆ ಮಾಡುವಾಗ ಅಲ್ಲಿ ಎಳೆದಾಟ ನಡೆಯುತ್ತದೆ. ಈ ಎಳೆದಾಟವೇ Attempts to cause death of any public function ಎಂಬ ಯುಎಪಿಎ ಕಾಲಂ ಕೆಳಗಡೆ ಭಯೋತ್ಪಾದಕ ಎಂದು ಬಂಧಿಸಬಹುದು.

ಯುಎಪಿಎ ಸಹಜ ನ್ಯಾಯ ಸಿದ್ಧಾಂತದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಪೊಲೀಸರ/ಆಳುವ ಸರಕಾರದ ಸರ್ವಾಧಿಕಾರಕ್ಕೆ ಹಾಗೂ ತನ್ನದೇ ನಾಗರಿಕರ ಮೇಲೆ ಶಾಸನಬದ್ಧ ಭಯೋತ್ಪಾದನೆಗೆ ಅವಕಾಶ ಮಾಡಿಕೊಟ್ಟಿದೆ. ಹಿಂದಿನ ಸರಕಾರಗಳು ಹಾಗೂ ವಿಶೇಷವಾಗಿ ಇಂದು ಅಧಿಕಾರದಲ್ಲಿರುವ ಬಿಜೆಪಿ ಸರಕಾರ ತನ್ನ ಹಿಂದುತ್ವ-ಕಾರ್ಪೊರೇಟ್ ಪರ ಆಳ್ವಿಕೆಗೆ ಅಡ್ಡಿಯಾಗಿರುವ ಎಲ್ಲಾ ಧ್ವನಿಗಳನ್ನು ಸಂವಿಧಾನಬಾಹಿರವಾಗಿ ಸೆರೆಮನೆಗೆ ದೂಡಲೆಂದೇ ಯುಎಪಿಎ ರೂಪಿಸಿದೆ ಮತ್ತು ಬಳಸಿಕೊಳ್ಳುತ್ತದೆ.
ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಎಲ್ಲಾ ಸಾಮಾಜಿಕ ಹೋರಾಟಗಾರರನ್ನು ಹಂತ ಹಂತವಾಗಿ ದಮನಿಸುತ್ತಾ ಬಂತು. ಸರಕಾರವನ್ನು ಪ್ರಶ್ನಿಸುವುದೇ ದೇಶದ್ರೋಹ ಎನ್ನುವ ವ್ಯಾಖ್ಯಾನದ ತಳಹದಿಯಲ್ಲಿ ಯುಎಪಿಎ ಕಾಯ್ದೆಯನ್ನು ಬಳಸಲಾರಂಭಿಸಿತು. ಇಂದು ಈ ದೇಶದ ತಳಸ್ತರದ ಜನರ ಪರವಾಗಿ ಧ್ವನಿಯೆತ್ತಿರುವ ನೂರಾರು ಜನರು ಈ ಕಾಯ್ದೆಗೆ ಬಲಿಯಾಗಿದ್ದಾರೆ. ಅರಣ್ಯವಾಸಿಗಳ ಹಕ್ಕುಗಳಿಗಾಗಿ ಹೋರಾಡಿದ 83 ವರ್ಷದ ವ್ಯಕ್ತಿ ಸ್ಟ್ಯಾನ್ ಸ್ವಾಮಿಯನ್ನು ಮೋದಿ ಹತ್ಯೆಯ ಸಂಚಿನಲ್ಲಿ ಭಾಗಿ ಎಂದು ಆರೋಪಿಸಿ ಇದೇ ಯುಎಪಿಎ ಕಾಯ್ದೆಯನ್ನು ಬಳಸಿಕೊಂಡು ಸರಕಾರ ಪರೋಕ್ಷವಾಗಿ ಕೊಂದು ಹಾಕಿತು.
ಇದೇ ಕಾಯ್ದೆಯಡಿಯಲ್ಲಿ ಬಂಧಿತರಾದ ಪ್ರಖ್ಯಾತ ಕ್ರಾಂತಿಕಾರಿ ಕವಿ ವರವರ ರಾವ್ ಅವರು ಸಾವಿನ ದವಡೆಯಿಂದ ಪವಾಡಸದೃಶವಾಗಿ ಬಚಾವಾಗಿ ಆರು ತಿಂಗಳ ಮೆಡಿಕಲ್ ಜಾಮೀನಿನ ಮೇಲಿದ್ದಾರೆ. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಕೋಶಾಧಿಕಾರಿ ಅತೀಕು ರ್ರಹ್ಮಾನ್ ರನ್ನೂ ಇದೇ ಕಾಯ್ದೆಯಡಿ ಬಂಧಿಸಲಾಗಿದೆ. ಅತೀಕು ರ್ರಹ್ಮಾನ್ ಮತ್ತು ತಂಡ, ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ದಲಿತ ಬಾಲಕಿಯ ಅತ್ಯಾಚಾರ ಮತ್ತು ಕೊಲೆಯನಂತರ ಆಕೆಯ ಕುಟುಂಬಕ್ಕೆ ಸಾಂತ್ವನ ಹೇಳಲು ತೆರಳಿತ್ತು. ಆದರೆ ಮಾರ್ಗದ ಮಧ್ಯೆ ಅವರನ್ನು ತಡೆದು ಉತ್ತರ ಪ್ರದೇಶದ ಪೊಲೀಸರು ಯುಎಪಿಎ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಿದರು. ಅಕ್ಟೋಬರ್ 2020ರಲ್ಲಿ ಅತೀಕು ರ್ರಹ್ಮಾನ್ ರನ್ನು ಬಂಧಿಸುವ ಒಂದು ತಿಂಗಳ ಮೊದಲು ಏಮ್ಸ್ ನಲ್ಲಿರುವ ವೈದ್ಯರು ಅವರ ಹೃದಯ ಮಹಾಪಧಮನಿಯ ಕವಾಟವನ್ನು ಬದಲಿಸಲು ಬೆಂಟಾಲ್ ಚಿಕಿತ್ಸೆ ಪಡೆಯಬೇಕೆಂದು ಸೂಚಿಸಿದ್ದರು. ಸರಿಯಾದ ಚಿಕಿತ್ಸೆ ದೊರೆಯದಿದ್ದಲ್ಲಿ ಆತ ಜೈಲಿನಲ್ಲಿ ಸಾಯಬಹುದು. ಆತನಿಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡದಿದ್ದರೆ ಹೃದಯದ ವಾಲ್ವ್ ನ ಕಾರ್ಯ ಸ್ಥಗಿತಗೊಂಡು ದೇಹದಾದ್ಯಂತ ರಕ್ತ ಪಂಪ್ ಆಗದೆ ಆತ ಸಾವನ್ನಪ್ಪಬಹುದು. ಈ ಪ್ರಮುಖ ಕಾರಣದಿಂದ ಆತನಿಗೆ 60 ದಿನಗಳ ಮಧ್ಯಂತರ ಜಾಮೀನು ನೀಡಬೇಕೆಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರೂ ಮಥುರಾ ನ್ಯಾಯಾಲಯ ಅದನ್ನು ತಿರಸ್ಕರಿಸಿದೆ.


ಯುಎಪಿಎ ಅಡಿಯಲ್ಲಿ ಬಂಧಿತರಾದ ಮಾನವ ಹಕ್ಕು ಹೋರಾಟಗಾರ ಹಾಗೂ ಶೇ.60ರಷ್ಟು ಆಪಾಂಗಕ್ಕೆ ತುತ್ತಾಗಿರುವ ದಿಲ್ಲಿ ವಿಶ್ವವಿದ್ಯಾನಿಲಯದ ಇಂಗ್ಲೀಷ್ ಪ್ರಾಧ್ಯಾಪಕ ಪ್ರೊ.ಜಿ.ಎನ್.ಸಾಯಿಬಾಬಾ, ಇವರು ಅಂಗವಿಕಲರಾದರೂ ಸರಿಯಾದ ವೈದ್ಯಕೀಯ ಸೌಲಭ್ಯ ಸಿಗುತ್ತಿಲ್ಲ. ಇವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇವರಲ್ಲದೆ ಮಹಾರಾಷ್ಟ್ರದ ದಲಿತ್ ರಿಪಬ್ಲಿಕ್ ಸಂಘಟನೆಯ ಸುಧೀರ್ ಥವಾಲೆ, ಮಾನವ ಹಕ್ಕು ಹೋರಾಟಗಾರರಾದ ರೋನಾ ವಿಲ್ಸನ್ ಹಾಗೂ ಮಹೇಂದ್ರ ರಾವತ್, ವಕೀಲ ಸುರೇಂದ್ರ ಗಾಡ್ಲಿಂಗ್, ದಮನಿತ ಸ್ತ್ರೀವಾದಿ ಅಧ್ಯಾಪಕಿ ಶೋಮಾಸೇನ್, ಪ್ರಖ್ಯಾತ ವಕೀಲ ಮತ್ತು ವಿದ್ವಾಂಸರೂ ಆಗಿರುವ ಸುಧಾ ಭಾರದ್ವಾಜ್, ಮಾನವ ಹಕ್ಕು ಹೋರಾಟಗಾರರಾದ ಅರುಣ್ ಫೆರೇರ, ವರ್ನೆನ್ ಗೋನ್ಸಾಲ್ವೆಸ್, ಅಂತಾರಾಷ್ಟ್ರೀಯ ಖ್ಯಾತಿಯ ಚಿಂತಕ, ಲೇಖಕ ಆನಂದ್ ತೇಲ್ತುಂಬ್ಡೆ, ಇಪಿಡಬ್ಲ್ಯು ಪತ್ರಿಕೆಯ ಗೌರವ ಸಂಪಾದಕ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ಗೌತಮ್ ನವ್ಲಾಖ, ದಿಲ್ಲಿ ವಿಶ್ವವಿದ್ಯಾನಿಲಯದ ಬಹುಜನ ವಿದ್ವಾಂಸ, ಅಧ್ಯಾಪಕ ಹನಿಬಾಬು, ಕಬೀರ್ ಕಲಾ ಮಂಚ್ ನ ಸಾಂಸ್ಕೃತಿಕ ಕಾರ್ಯಕರ್ತರಾದ ಸಾಗರ್, ಜ್ಯೋತಿ ಮತ್ತು ರಮೇಶ್, ಅಸ್ಸಾಮ್ ನ ಆದಿವಾಸಿಗಳ ಆಶಾಕಿರಣವಾಗಿ ಬೆಳೆಯುತ್ತಿರುವ ಯುವ ಹೋರಾಟಗಾರ ಅಖಿಲ್ ಗೋಗೊಯಿ, ದಿಲ್ಲಿ ಗಲಭೆಯ ಹಿನ್ನೆಲೆಯಲ್ಲಿ ಸುಳ್ಳು ಕೇಸುಗಳಡಿ ಬಂಧಿತರಾಗಿದ್ದ ಸಫೂರಾ ಜರ್ಗಾರ್, ಗುಲ್ಫಿಶಾ, ದೇವಾಂಗನಿ, ನತಾಶಾ ನರ್ವಾಲ್, ಶರ್ಜಿಲ್ ಇಮಾಮ್ರಂತಹ ನಿಸ್ವಾರ್ಥ ಹಾಗೂ ರಾಜಿರಹಿತ ಜನಪರ ಹೋರಾಟಗಾರರನ್ನು ಹಾಗೂ ದೇಶಾದ್ಯಂತ ನೂರಾರು ಆದಿವಾಸಿಗಳನ್ನು, ಸಿಎಎ ವಿರೋಧಿ, ಕಾರ್ಪೊರೇಟ್ ಪರ ಪರಿಸರ ನೀತಿಯ ವಿರೋಧಿ ಹೋರಾಟಗಾರರನ್ನು, ಆರ್ ಟಿಐ ಹೋರಾಟಗಾರರನ್ನು ಹಾಗೂ ಇತ್ತೀಚೆಗೆ ಹಥ್ರಾಸ್ ನಲ್ಲಿ ಮೇಲ್ಜಾತಿ ಠಾಕೂರರಿಂದ ಅತ್ಯಾಚಾರ ಮತ್ತು ಕೊಲೆಗೆ ಈಡಾದ ಮಹಿಳೆಯ ಪರವಾಗಿ ಧ್ವನಿ ಎತ್ತಿದ ಪತ್ರಕರ್ತರನ್ನು, ವಕೀಲರನ್ನು ಕೂಡಾ ಈ ಯುಎಪಿಎ ಕಾನೂನಿನಡಿ ಬಂಧಿಸಿ ಜೈಲಿಗಟ್ಟಲಾಗಿದೆ.


ಆದರೆ ಅಲ್ಪಸಂಖ್ಯಾತರ, ದಲಿತರ ಮತ್ತು ಆದಿವಾಸಿಗಳ ಮೇಲೆ ದಿನನಿತ್ಯ ಅಪರಾಧಗಳನ್ನೆಸಗುವ, ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದ ಹಿಂದುತ್ವ ಉಗ್ರವಾದಿ ಸಂಘಟನೆಯವರಿಗೆ ಈ ಕಾನೂನು ಅನ್ವಯವಾಗುವುದಿಲ್ಲ. ಸುಳ್ಳು ಕೇಸುಗಳಲ್ಲಿ ಬಂಧಿತರಾದ ಸ್ಟ್ಯಾನ್ ಸ್ವಾಮಿ, ಕವಿ ವರವರ ರಾವ್, ಅತೀಕು ರ್ರಹ್ಮಾನ್, ಪ್ರೊ.ಜಿ.ಎನ್. ಸಾಯಿಬಾಬಾ ಇವರೆಲ್ಲ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಮಧ್ಯಂತರ ಜಾಮೀನು ಕೇಳಿದರೂ ಜಾಮೀನು ನೀಡದ ನ್ಯಾಯಾಲಯ 2008ರ ಮಾಲೆಗಾಂವ್ ಭಯೋತ್ಪಾದಕ ಸ್ಫೋಟದ ಪ್ರಮುಖ ಆರೋಪಿ ಪ್ರಜ್ಞಾ ಠಾಕೂರ್ ಗೆ 2017ರಲ್ಲಿ ಜಾಮೀನು ನೀಡಿದೆ. ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐಎನಿಂದ ಬಂಧಿತರಾಗಿದ್ದ ಪ್ರಜ್ಞಾ ಠಾಕೂರ್ ಅವರನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನಿನ ಮೇಲೆ ನ್ಯಾಯಾಲಯ ಬಿಡುಗಡೆಗೊಳಿಸಿತ್ತು. ಕ್ಯಾನ್ಸರ್ ಕಾರಣ ನೀಡಿ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ನೀಡುವಂತೆಯೂ ಕೇಳಿಕೊಂಡಿದ್ದರು. ನ್ಯಾಯಾಲಯಕ್ಕೆ ಗಾಲಿ ಕುರ್ಚಿಯಲ್ಲಿ ಹಾಜರಾಗುತ್ತಿದ್ದ ಅವರು ಇತ್ತೀಚೆಗೆ ಬೋಪಾಲ್ ಕ್ರೀಡಾಂಗಣದಲ್ಲಿ ಬಾಸ್ಕೆಟ್ ಬಾಲ್, ಮಹಿಳಾ ಆಟಗಾರರೊಂದಿಗೆ ಕಬಡ್ಡಿ ಆಡುತ್ತಿರುವ ಮತ್ತು ಒಂದು ಮದುವೆ ಸಂಭ್ರಮದಲ್ಲಿ ಡ್ಯಾನ್ಸ್ ಮಾಡುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸ್ಟ್ಯಾನ್ ಸ್ವಾಮಿಯವರ ಪಾರ್ಕಿನ್ಸನ್ ಕಾಯಿಲೆ ನಾಟಕ ಎಂದು ಹೇಳಿದ ಎನ್ ಐಎ, ಪ್ರಜ್ಞಾ ಠಾಕೂರ್ ಮೇಲೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ! ಪ್ರಜ್ಞಾಸಿಂಗ್ ಎಬಿವಿಪಿಯ ಸಕ್ರಿಯ ಕಾರ್ಯಕರ್ತೆಯಾಗಿದ್ದರು. ವಿಹಿಂಪದ ಮಹಿಳಾ ವಿಭಾಗವಾದ ದುರ್ಗಾವಾಹಿನಿಯ ರಾಷ್ಟ್ರೀಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಪ್ರಜ್ಞಾಸಿಂಗ್ ಠಾಕೂರ್, ಕ| ಪ್ರಸಾದ್ ಪುರೋಹಿತ್ ಮತ್ತು ಅಸೀಮಾನಂದ ಸ್ವಾಮಿ ಮಧ್ಯೆ ನಿಕಟ ಸಂಪರ್ಕಗಳಿದ್ದವು. ಪುರೋಹಿತ್ ಮತ್ತು ಅಸೀಮಾನಂದ ಸ್ವಾಮಿ ಅನೇಕ ಬಾಂಬ್ ಸ್ಫೋಟದಲ್ಲಿ ಭಾಗಿಯಾದವರು. 2006ರಲ್ಲಿ ಮಾಲೆಗಾಂವ್ ಸ್ಫೋಟ, 2007ರಲ್ಲಿ ಸಂಜೋತಾ ಎಕ್ಸ್ ಪ್ರೆಸ್ ರೈಲು ಸ್ಫೋಟ, ಮೇ 18, 2007ರಲ್ಲಿ ಹೈದರಾಬಾದ್ ನ ಮಕ್ಕಾ ಮಸೀದಿ ಸ್ಫೋಟ, 2007 ಅಕ್ಟೋಬರ್ ನಲ್ಲಿ ಅಜ್ಮೀರ್ ದರ್ಗಾ ಸ್ಫೋಟ, ಸೆಪ್ಟಂಬರ್ 29, 2008ರಂದು ಎರಡನೇ ಬಾರಿ ಮಾಲೆಗಾಂವ್ ಸ್ಫೋಟ ಮುಂತಾದ ಪ್ರಕರಣದಲ್ಲಿ ಕ| ಪುರೋಹಿತ್ ಮತ್ತು ಅಸೀಮಾನಂದ ಪ್ರಮುಖ ಆರೋಪಿಗಳಾಗಿದ್ದಾರೆ. ಅಸೀಮಾನಂದ ಸ್ವಾಮಿ ನ್ಯಾಯಾಲಯದಲ್ಲಿ ಸ್ವತಃ ತಪ್ಪೊಪ್ಪಿಕೊಂಡಿದ್ದಾರೆ. ಆದರೂ ನ್ಯಾಯಾಲಯ ಇವರಿಗೆ ಜಾಮೀನು ನೀಡಿ ಬಿಡುಗಡೆಗೊಳಿಸಿದೆ.
ಉತ್ತರ ಪ್ರದೇಶದ ಹತ್ರಾಸ್ ದಲಿತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ವರದಿ ಮಾಡಲು 2020 ಅಕ್ಟೋಬರ್ 5ರಂದು ತೆರಳಿದ್ದ ಕೇರಳದ ಪತ್ರಕರ್ತ ಸಿದ್ದೀಕ್ ಕಾಪ್ಪನ್ ಅವರನ್ನು ಮತ್ತು ಅವರ ಜೊತೆಗಿದ್ದ ಮೂವರನ್ನು ದೇಶದ್ರೋಹದ ಮೇಲೆ ಬಂಧಿಸಿ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ಅವರ ಭೇಟಿಯಿಂದಾಗಿ ಶಾಂತಿ ಕದಡುವ ಅಪಾಯವಿದೆ ಎಂಬ ಕಾರಣ ನೀಡಿ ಬಂಧಿಸಲಾಗಿತ್ತು. ಆದರೆ ನಂತರ ದೇಶದ್ರೋಹ ಮತ್ತು ಭಯೋತ್ಪಾದನಾ ವಿರೋಧಿ ಕಾನೂನು (ಯುಎಪಿಎ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಉಲ್ಲಂಘನೆಯ ಆರೋಪಗಳನ್ನು ಹೊರಿಸಲಾಗಿದೆ. ಅವರ ಮೇಲೆ ಸೆಕ್ಷನ್ 153ಎ (ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ) 295ಎ (ಧಾರ್ಮಿಕ ಭಾವನೆಗಳನ್ನು ನೋಯಿಸುವ) 124ಎ (ದೇಶದ್ರೋಹ)ಐಪಿಸಿ 120ಬಿ (ಪಿತೂರಿ), ಯುಎಪಿಎ 17/18(ಭಯೋತ್ಪಾದಕ ಕೃತ್ಯಕ್ಕಾಗಿ ಹಣವನ್ನು ಸಂಗ್ರಹಿಸುವುದು)ಮತ್ತು ಐಟಿ ಕಾಯ್ದೆಯ ಸೆಕ್ಷನ್ ಗಳನ್ನು ಹಾಕಿದ್ದಾರೆ.


ಆದರೆ ‘ಗಾಂಧಿಯನ್ನೇ ಕೊಂದ ನಮಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಯಾವ ಲೆಕ್ಕ’ ಎಂದು ಬಹಿರಂಗವಾಗಿ ಹೆಮ್ಮೆಯಿಂದ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರನ ಮೇಲೆ ಯುಎಪಿಎ ಭಯೋತ್ಪಾದನಾ ಕಾಯ್ದೆಯನ್ನು ದಾಖಲಿಸಲಿಲ್ಲ. ಮೈಸೂರಿನಲ್ಲಿ ಅಕ್ರಮ ದೇವಾಲಯವನ್ನು ಕೆಡವಿದ ಪ್ರಕರಣಕ್ಕೆ ಸಂಬಂಧಿಸಿ ದಿ.18.9. 2021ರಂದು ಸುದ್ದಿಗೋಷ್ಠಿಯಲ್ಲಿ ಧರ್ಮೇಂದ್ರ ಗಾಂಧಿಯನ್ನು ಕೊಂದ ಹೊಣೆಯನ್ನು ಬಹಿರಂಗವಾಗಿ ಹೆಮ್ಮೆಯಿಂದ ಒಪ್ಪಿಕೊಂಡಿದ್ದಾರೆ. 2019 ಜನವರಿಯಲ್ಲಿ ಹಿಂದೂ ಮಹಾಸಭೆಯ ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಗನ್ ಮೂಲಕ ಗುಂಡಿಟ್ಟು ಅವರು ಸಾವನ್ನಪ್ಪಿದ ದಿನದಂದು ಸಂಭ್ರಮಿಸಿದ್ದಾರೆ. ಗಾಂಧೀಜಿ ಅವರ ಸಾವನ್ನಪ್ಪಿದ ದಿನವನ್ನು ಶೌರ್ಯದಿನ ಎಂದು ಆಚರಣೆ ಮಾಡಿ ಸಂಭ್ರಮಿಸಿದ ಹಿಂದೂ ಮಹಾಸಭಾ ಸಂಘಟನೆಯ ಕಾರ್ಯಕರ್ತರು ಸಿಹಿ ತಿಂಡಿ ನೀಡಿ ಸಂತಸ ಹಂಚಿಕೊಂಡಿದ್ದಾರೆ. ಇಂತಹ ಭಯೋತ್ಪಾದಕ ಚಿಂತನೆಗಳಿರುವ ಸಂಘಟನೆ ನಿಷೇಧಕ್ಕೆ ಅರ್ಹವಾದುದು. ಮುಖ್ಯಮಂತ್ರಿ ಬೊಮ್ಮಾಯಿಗೂ ಅದೇ ಗತಿ ಬರಬಹುದು ಎಂಬ ಬೆದರಿಕೆಯನ್ನು ನೀಡಿದ ಮನುಷ್ಯನನ್ನು ಭಯೋತ್ಪಾದನಾ ಕಾಯ್ದೆಯಡಿಯಲ್ಲಿ ಬಂಧಿಸುವುದಷ್ಟೇ ಅಲ್ಲ, ಆತನ ಸಂಘಟನೆಯನ್ನು ನಿಷೇಧಿಸಿ ಅದರ ಇತರ ಮುಖಂಡರನ್ನು ಜೈಲಿಗೆ ತಳ್ಳುವ ಕೆಲಸ ಸರಕಾರ ಮಾಡಬೇಕಿತ್ತು. ಆದರೆ ಸರಕಾರ ಇನ್ನೂ ಆ ಸಂಘಟನೆಯ ಕುರಿತಂತೆ ಮೃದು ನಿಲುವು ತಾಳುತ್ತದೆ ಎಂದಾದರೆ, ಸರಕಾರವೇ ಭಯೋತ್ಪಾದಕ ಚಿಂತನೆಗಳಿಗೆ, ಹತ್ಯೆ-ಸಂಸ್ಕೃತಿಗೆ ಬೆಂಬಲ ನೀಡಿದಂತಾಗುತ್ತದೆ. ವಿಶ್ವವೇ ಗೌರವಿಸುವ ಮಹಾತ್ಮಗಾಂಧೀಜಿಯನ್ನು ಕೊಂದದ್ದು ನಾವು ಎಂದು ಬಹಿರಂಗವಾಗಿ ಒಪ್ಪಿಕೊಂಡು ಮತ್ತು ಒಂದು ರಾಜ್ಯದ ಮುಖ್ಯಮಂತ್ರಿಗೆ ಬಹಿರಂಗವಾಗಿ ಪತ್ರಿಕಾಗೋಷ್ಠಿಯಲ್ಲಿ ಕೊಲೆ ಬೆದರಿಕೆ ಹಾಕಿದ ಧರ್ಮೇಂದ್ರನ ಮೇಲೆ ಮಂಗಳೂರಿನ ಬರ್ಕೆ ಠಾಣೆಯಲ್ಲಿ 120(ಬಿ), 153(ಎ), 505(2), 506, 465, 468, 469, 149 ಐಪಿಸಿ ಸೆಕ್ಷನ್ ಹಾಕಿ ಪ್ರಕರಣ ದಾಖಲಿಸಿದೆ. ಗಾಂಧೀಜಿ ಹತ್ಯೆ ಮಾಡಿರುವ ಬಗ್ಗೆ ಸಮರ್ಥನೆ ಮಾಡಿರುವುದು ದೇಶದ್ರೋಹವಾಗಿದೆ. ಆದ್ದರಿಂದ ಅವನನ್ನು ಪೊಲೀಸರು ತಕ್ಷಣ ದೇಶದ್ರೋಹದ ಪ್ರಕರಣ ಹಾಕಿ ಬಂಧಿಸಬೇಕೆಂದು ಎಸ್ಡಿಪಿಐ ಸೇರಿ ಹಲವು ರಾಜಕೀಯ, ಸಾಮಾಜಿಕ ಸಂಘಟನೆಗಳು ಒತ್ತಾಯಿಸಿದ್ದವು ಆದರೆ ಧರ್ಮೇಂದ್ರ ಮತ್ತು ಆತನ ಜೊತೆ ಬಂಧನವಾಗಿದ್ದ ರಾಜೇಶ್ ಪುತ್ರನ್, ಪ್ರೇಮ್ ಪೊಳಲಿ ಮತ್ತು ಸಂದೀಪ್ ಶೆಟ್ಟಿ ಈ ನಾಲ್ವರು ಸೆಪ್ಟಂಬರ್ 22ರಂದು ಅಂದರೆ ಬಂಧನವಾದ ಮೂರು ದಿವಸದೊಳಗೆ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ.


2019 ಫೆಬ್ರವರಿ ತಿಂಗಳಲ್ಲಿ ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯನ್ನು ರಿಪಬ್ಲಿಕ್ ಟಿವಿಯ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಸಂಭ್ರಮಿಸಿದ್ದ ಆಘಾತಕಾರಿ ವಿಷಯ ಎಲ್ಲರಿಗೂ ತಿಳಿದಿದೆ. ಇಡೀ ದೇಶಕ್ಕೆ ದೇಶವೇ 40 ಮಂದಿ ಸೈನಿಕರ ಸಾವಿಗೆ ಮರುಗುತ್ತಿರುವಾಗ ಈತ ಇದನ್ನು ‘ವಿಕ್ಟರಿ’ ಎಂಬಂತೆ ಸಂಭ್ರಮಿಸಿದ್ದಾನೆ.ಟಿಆರ್ ಪಿ ಹಗರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ರಿಪಬ್ಲಿಕ್ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ ಮತ್ತು ಬಾರ್ಕ್ ಮಾಜಿ ಸಿಇಒ ಪಾರ್ಥೋದಾಸ್ ಗುಪ್ತಾ ನಡುವಿನ ವಾಟ್ಸಾಪ್ ಚಾಟ್ ಗಳ ಸುಮಾರು 500 ಪುಟಗಳನ್ನು ಬಹಿರಂಗಗೊಳಿಸಿದ್ದಾರೆ. ‘This attack we have won like crazy…’ ಇದು ಇಡೀ ದೇಶವನ್ನು ನಡುಗಿಸಿದ ಪುಲ್ವಾಮ ದಾಳಿಯ ಬಗ್ಗೆ ಅರ್ನಾಬ್ ಗೋಸ್ವಾಮಿ ಆಡಿದ ಮಾತುಗಳು. ಇವು ಲೀಕ್ ಆದ ವಾಟ್ಸ್ ಆಪ್ ಚಾಟ್ ಗಳಲ್ಲಿ ದಾಖಲಾಗಿವೆ.


ಚಿಕ್ಕಪುಟ್ಟ ಅಪರಾಧಗಳಿಗೆ ಯುಎಪಿಎ ಕಾನೂನಿನಡಿಯಲ್ಲಿ ಬಂಧಿಸುವ ಪೊಲೀಸರು, 40 ಯೋಧರನ್ನು ಬಲಿ ಪಡೆದ ಪುಲ್ವಾಮ ದಾಳಿಯನ್ನು ವಿಕ್ಟರಿ ಎಂದು ಸಂಭ್ರಮಿಸಿದ ಅರ್ನಾಬ್ ಗೋಸ್ವಾಮಿಯ ಸಂಭ್ರಮಕ್ಕೆ ಕುರುಡಾಗಿರುವುದು ವಿಪರ್ಯಾಸ!
ಆಯುಧ ಪೂಜೆಯಂದು ಕತ್ತಿ,ತಲವಾರು, ಬಂದೂಕು, ಪಿಸ್ತೂಲು, ಗನ್ ಮುಂತಾದ ಮಾರಕಾಸ್ತ್ರ ಇಟ್ಟು ಪೂಜೆ ಮಾಡಿ ತನ್ನ ಕಾರ್ಯಕರ್ತರಿಗೆ ವಿತರಣೆ ಮಾಡಿದ ಮತ್ತು ತಲವಾರು, ಕತ್ತಿ ಹಿಡಿದು ನಡುರಸ್ತೆಯಲ್ಲಿ ಮೆರವಣಿಗೆ ಮಾಡಿದ ಸಂಘಟನೆಯ ಮೇಲೆ ಮತ್ತು ಅದರ ಮುಖಂಡರ ಮೇಲೆ ಪೊಲೀಸರು ಯುಎಪಿಎ ಕಾಯ್ದೆಯಡಿ ಕೇಸು ದಾಖಲಿಸದೆ ಇರುವುದನ್ನು ನೋಡುವಾಗ ಪೊಲೀಸರು ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆಂದು ಸ್ಪಷ್ಟವಾಗಿ ಕಾಣುತ್ತದೆ. ಹೊಡೆಯಿರಿ,ಬಡಿಯಿರಿ, ಕೊಲ್ಲಿರಿ, ಸಾಯಿಸಿರಿ, ಚರ್ಮ ಸುಲಿಯಿರಿ, ಗೋಲಿಮಾರೋ ಮುಂತಾದ ಪ್ರಚೋದನಾಕಾರಿ ಹೇಳಿಕೆಯನ್ನು ಬಹಿರಂಗವಾಗಿ ನೀಡಿದ ಬಿಜೆಪಿ ಸಂಘ ಪರಿವಾರದ ಮುಖಂಡರ ಮೇಲೆ ದೇಶದ್ರೋಹ ಅಥವಾ ಯುಎಪಿಎ ಯಂತಹ ಕೇಸು ದಾಖಲಿಸದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.


ಇತ್ತೀಚೆಗೆ ತ್ರಿಪುರಾದಲ್ಲಿ ನಡೆದ ಮುಸ್ಲಿಮ್ ವಿರೋಧಿ ಹಿಂಸಾಚಾರದ ತನಿಖೆಗೆ ಹೋದ ಸತ್ಯಶೋಧನಾ ತಂಡದಲ್ಲಿದ್ದ ಇಬ್ಬರು ವಕೀಲರಿಗೆ ಪೊಲೀಸರು ಯುಎಪಿಎ ಅಡಿಯಲ್ಲಿ ನೋಟೀಸ್ ಕಳುಹಿಸಿರುವುದು ಈ ಕಾನೂನಿನ ದುರುಪಯೋಗಕ್ಕೆ ನಿನ್ನೆ-ಮೊನ್ನೆಯ ಹಸಿಹಸಿ ಉದಾಹರಣೆಯಾಗಿದೆ.
ಮೇಲಿನ ಕೆಲವು ವಿದ್ಯಮಾನಗಳನ್ನು ನೋಡುವಾಗ ಬಿಜೆಪಿ ಸರಕಾರವು ಯುಎಪಿಎ ನೆಪವೊಡ್ಡಿ ಮಾನವ ಹಕ್ಕು ಹೋರಾಟಗಾರರನ್ನು, ಚಿಂತಕರನ್ನು, ಪತ್ರಕರ್ತರನ್ನು, ಮಹಿಳಾ ಹೋರಾಟಗಾರರನ್ನು ಆರ್ ಟಿಐ ಕಾರ್ಯಕರ್ತರನ್ನು, ತಮ್ಮ ಹಕ್ಕಿಗಾಗಿ ಹೋರಾಡುವ ಆದಿವಾಸಿಗಳನ್ನು, ಅಮಾಯಕ ಮುಸ್ಲಿಮರನ್ನು ಬಂಧಿಸುತ್ತಿದೆ ಎಂದು ವ್ಯಕ್ತವಾಗುತ್ತದೆ. ಭಯೋತ್ಪಾದನೆ ನಿಗ್ರಹದ ಹೆಸರಿನಲ್ಲಿ ಈ ವರೆಗೆ 5000ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ಯುಎಪಿಎ ರಾಜಕೀಯವಾಗಿ ದುರ್ಬಳಕೆಯಾಗುತ್ತಿರುವುದರ ಬಗ್ಗೆ ಸುಪ್ರೀಂ ಕೋರ್ಟು ಕಳವಳ ವ್ಯಕ್ತಪಡಿಸಿದೆ. ದೇಶದಲ್ಲಿ ಪ್ರತಿಯೊಬ್ಬರಿಗೂ ಸರಕಾರದ ನೀತಿ ನಿಯಮಗಳ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕಿದೆ. ಅದನ್ನು ಯುಎಪಿಎ ಮೂಲಕ ಮೊಟಕುಗೊಳಿಸಲು ಸಾಧ್ಯವಿಲ್ಲ. ಇದು ನಮ್ಮ ಸಂವಿಧಾನವು ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯ, ನಿರ್ಭೀತಿಯ ಬದುಕು, ಸಹಕಾರತತ್ವ ಹಾಗೂ ಒಟ್ಟಿನಲ್ಲಿ ಈ ದೇಶ ಪ್ರಜಾಪ್ರಭುತ್ವಕ್ಕೆ ಮಾರಕವಾದ ಕರಾಳ ಶಾಸನವಾಗಿದೆ.


ಸರಕಾರದ ದಮನಕಾರಿ ನೀತಿಯ ವಿರುದ್ಧ ಹಾಗೂ ಅಮಾಯಕರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಪ್ರತಿಭಟಿಸುವ ಹೋರಾಟಗಾರರ ಧ್ವನಿಯನ್ನು ಅಡಗಿಸಲು ಪ್ರಯತ್ನಿಸುವ ಯುಎಪಿಎ ರದ್ದಾಗಬೇಕು. ದೇಶಪ್ರೇಮದ ಗುತ್ತಿಗೆ ಹಿಡಿದವರಂತೆ ವರ್ತಿಸುವ ಕರಾಳ ಶಕ್ತಿಗಳು ಸಿಕ್ಕ ಸಿಕ್ಕವರ ಮೇಲೆ ರಾಷ್ಟ್ರದ್ರೋಹದ ಆರೋಪ ಹೊರಿಸಲು ರಹದಾರಿಯಂತಿರುವ ಈ ಕಾಯ್ದೆಯನ್ನು ಸರಕಾರ ಹಿಂಪಡೆಯುವಂತೆ ಮಾಡಲು ಪ್ರಬಲ ಹೋರಾಟ ರೂಪಿಸುವುದು ಎಲ್ಲ ಪ್ರಜಾಸತ್ತಾತ್ಮಕ ಪ್ರೇಮಿಗಳ ಜವಾಬ್ದಾರಿಯಾಗಿದೆ.



Join Whatsapp