ಮಂಗಳೂರು | ನಾಗಬನಕ್ಕೆ ಹಾನಿ ಪ್ರಕರಣ: 8 ಮಂದಿ ಆರೋಪಿಗಳ ಬಂಧನ !

Prasthutha|

ಮಂಗಳೂರು: ಕೋಮು ವೈಷಮ್ಯಕ್ಕೆ ಕಾರಣವಾಗಿದ್ದ ಮಂಗಳೂರು ನಾಗಭನದ ಮೂರ್ತಿಗಳನ್ನು ಧ್ವಂಸಗೊಳಿಸಿದ್ದ ಪ್ರಕರಣವನ್ನು ಭೇದಿಸಿರುವ ಮಂಗಳೂರು ನಗರ ಪೊಲೀಸರು, ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

- Advertisement -


ಆರೋಪಿಗಳು ಮಂಗಳೂರು ನಗರದ ಕೂಳೂರು, ಕೋಡಿಕಲ್ ನಾಗನಕಲ್ಲಿಗೆ ಹಾನಿ ಮಾಡಿ ಜಿಲ್ಲೆಯಲ್ಲಿ ಶಾಂತಿ ಕದಡಲು ಪ್ರಯತ್ನಿಸಿದ್ದರು. ಕೂಳೂರಿನ ಪಂಜಿಮೊಗರು ಗ್ರಾಮದ ಪ್ರವೀಣ್ ಅನಿಲ್ ಮೊಂತೆರೋ (27), ಕಾವೂರು ಶಾಂತಿನಗರ ನಿವಾಸಿ ನಿಕಿಲೇಶ (22), ಸುರತ್ಕಲ್ ನಿವಾಸಿ ಜಯಂತ್ ಕುಮಾರ್ (30), ಬಂಟ್ವಾಳ ಪಡೂರು ಗ್ರಾಮ ನಿವಾಸಿ ಪ್ರತೀಕ್ (24), ಕೂಳೂರು ಪಡುಕೋಡಿ ಗ್ರಾಮ ನಿವಾಸಿ ಮಂಜುನಾಥ್ (30), ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ನೌಶಾದ್ ಹರೇಹಳ್ಳಿ (30), ಕಾವೂರಿನ ಶಾಂತಿನಗರ ಮಸೀದಿ ಬಳಿ ನಿವಾಸಿಗಳಾದ ಸಫ್ವಾನ್, (25), ಮಹಮ್ಮದ್ ಸೊಹೇಲ್ (23) ಬಂಧಿತ ಆರೋಪಿಗಳು.

- Advertisement -


ಮಂಗಳೂರಿನಲ್ಲಿ ಸಂಚಲನ ಮೂಡಿಸಿದ್ದ ಈ ಪ್ರಕರಣವನ್ನು ಖಂಡಿಸಿ ಹಿಂದೂ ಸಂಘಟನೆಗಳು ಕೋಡಿಕಲ್ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದವು. ಅಲ್ಲದೇ ಆರೋಪಿಗಳ ಬಂಧನಕ್ಕೆ 20 ದಿನಗಳ ಗಡುವು ನೀಡಲಾಗಿತ್ತು. ಮೂಲ್ಕಿ, ಮೂಡುಬಿದ್ರೆ, ಪಣಂಬೂರು, ಕಾವೂರು ಠಾಣೆ ಸೇರಿ 40 ಮಂದಿಯ ಪೊಲೀಸ್ ಸಿಬ್ಬಂದಿಯ ವಿಶೇಷ ತಂಡವನ್ನು ರಚಿಸಲಾಗಿತ್ತು.

ಕಾರ್ಯಾಚರಣೆ ನಡೆಸಿದ ಈ ಪೊಲೀಸ್ ತಂಡ ಸುರತ್ಕಲ್, ಬಂಟ್ವಾಳ, ಹಾಸನ ಮೂಲದ ಎಂಟು ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳಲ್ಲಿ ಪ್ರವೀಣ್ ಮೊಂತೇರೊ ಈ ಹಿಂದೆ ಡಕಾಯಿತಿ, ದರೋಡೆ ಪ್ರಕರಣದಲ್ಲಿ ಜೈಲು ಸೇರಿದ್ದ. ಜೈಲಿನಲ್ಲಿದ್ದ ವೇಳೆ ಇತರರೊಂದಿಗೆ ಸಂಪರ್ಕ ಆಗಿತ್ತು. ಬಂಧಿತರು ಕುಳೂರು ಮತ್ತು ಕೋಡಿಕಲ್ ಎರಡೂ ಕೃತ್ಯಗಳನ್ನು ನಾವೇ ಮಾಡಿದ್ದೇವೆಂದು ಒಪ್ಪಿಕೊಂಡಿದ್ದಾರೆ. ಸರಗಳ್ಳತನದ ಪ್ರಕರಣದ ಆರೋಪಿಗಳಾದ ಇಶಾನ್, ಅಚ್ಚಿ ಸೂಚನೆಯಂತೆ ಕೃತ್ಯಕ್ಕೆ ಸಂಚು ಹೂಡಿದ್ದ ಎಂದು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ಆರೋಪಿಗಳು ಕೋಮುಗಲಭೆ ಉಂಟು ಮಾಡುವ ಉದ್ದೇಶದಿಂದ ಸಮಾಜದಲ್ಲಿ ಶಾಂತಿ ಕೆಡಿಸಲು ನಾಗಾರಾಧನೆಯ ನಾಗಬನದ ನಾಗನಮೂರ್ತಿಗಳನ್ನು ಅಕ್ಟೋಬರ್ 20ರಿಂದ 23ರ ಮಧ್ಯೆ ರಾತ್ರಿ ಹೊತ್ತಿನಲ್ಲಿ ಭಗ್ನಗೊಳಿಸಿದ್ದರು. ಕೂಳೂರು ಕೋಟ್ಯನ್ ಕುಟುಂಬಕ್ಕೆ ಸೇರಿದ ನಾಗಬನದ ನಾಗನ ಒಂದು ಕಲ್ಲನ್ನು ಧ್ವಂಸಗೊಳಿಸಿ ಉಳಿದ 5 ಕಲ್ಲುಗಳನ್ನು ಅಪವಿತ್ರಗೊಳಿಸಿದ್ದರು. ನವೆಂಬರ್ 12ರಂದು ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕಲ್ ಎಂಬಲ್ಲಿ ರಾತ್ರಿ ಹೊತ್ತಿನಲ್ಲಿ ನಾಗಬನದ ಮೂರ್ತಿಯನ್ನು ಕಿತ್ತೆಸೆದು ಅಪವಿತ್ರಗೊಳಿಸಿದ್ದರು. ಆರೋಪಿಗಳಿಗೆ ಸಹಕಾರ ನೀಡಿದ ಹಾಗೂ ಆರೋಪಿಗಳಿಗೆ ಆಶ್ರಯ ನೀಡಿದ ವ್ಯಕ್ತಿಗಳನ್ನು ಬಂಧನ ಮಾಡಬೇಕಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

ಪ್ರಕರಣವನ್ನು ಭೇದಿಸಲು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಅವರ ಮಾರ್ಗದರ್ಶನದಂತೆ ಡಿಸಿಪಿಗಳಾದ ಹರಿರಾಂ ಶಂಕರ್, ದಿನೇಶ್ ಕುಮಾರ್ ನಿರ್ದೇಶನದಂತೆ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

ಕಾವೂರು ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಘವ ಪಡೀಲ್ ಮತ್ತು ಸಿಬ್ಬಂದಿ ಈ ತಂಡದಲ್ಲಿದ್ದರು. ಅತ್ಯಂತ ಸೂಕ್ಷ್ಮ ಪ್ರಕರಣವಾದ ಇದನ್ನು ಭೇದಿಸಿದ ಅಧಿಕಾರಿಗಳಿಗೆ 25 ಸಾವಿರ ನಗದು ಬಹುಮಾನವನ್ನು ನಗರ ಪೊಲೀಸ್ ಆಯುಕ್ತರು ಘೋಷಿಸಿದ್ದಾರೆ.  

Join Whatsapp