ನವದೆಹಲಿ : ದೆಹಲಿ ಮತ್ತು ಸುತ್ತಮುತ್ತಲಿನ ರಾಜ್ಯಗಳಲ್ಲಿ ವಾಯು ಗುಣಮಟ್ಟ ನಿರ್ವಹಣೆಗೆ ಆಯೋಗ ರಚಿಸುವ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಸಹಿ ಮಾಡಿದ್ದಾರೆ. ವಾಯು ಮಾಲಿನ್ಯ ಪ್ರಕರಣಕ್ಕೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ವಿಚಾರಣೆಗೂ ಒಂದು ದಿನ ಮೊದಲು ಈ ಸುಗ್ರೀವಾಜ್ಞೆ ಜಾರಿಗೆ ಬಂದಿದೆ.
ಆಯೋಗವು ವಾಯು ಮಾಲಿನ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಂಶೋಧಿಸುವುದು ಮತ್ತು ಪರಿಹರಿಸುವ ಹೊಣೆಯನ್ನು ಹೊಂದಿದೆ. ವಾಯು ಗುಣ ಮಟ್ಟ ನಿರ್ವಹಣೆಗೆ ಪ್ರಸ್ತುತ ಇರುವ ಪರಿಸರ ಮಾಲಿನ್ಯ ಮತ್ತು ತಡೆ ನಿಯಂತ್ರಣ ಪ್ರಾಧಿಕಾರದ ಸ್ಥಾನದಲ್ಲಿ ಈ ಆಯೋಗ ಇನ್ನು ಮುಂದೆ ಕಾರ್ಯ ನಿರ್ವಹಿಸಲಿದೆ.
17 ಮಂದಿಯ ಆಯೋಗದಲ್ಲಿ ದೆಹಲಿ, ಉತ್ತರ ಪ್ರದಶ, ಪಂಜಾಬ್, ರಾಜಸ್ಥಾನ, ಹರ್ಯಾಣದ ಪ್ರತಿನಿಧಿಗಳೂ ಇರಲಿದ್ದಾರೆ. ಸರಕಾರದ ಕಾರ್ಯದರ್ಶಿ ಅಥವಾ ಮುಖ್ಯ ಕಾರ್ಯದರ್ಶಿ ಮಟ್ಟದ ಸರಕಾರಿ ಅಧಿಕಾರಿ ಈ ಆಯೋಗದ ಮುಖ್ಯಸ್ಥರಾಗಿರುತ್ತಾರೆ.
ಆಯೋಗದಲ್ಲಿ ಪರಿಸರ ಸಚಿವಾಲಯದ ಕಾರ್ಯದರ್ಶಿ ಸೇರಿದಂತೆ ಇತರ ಐವರು ಕಾರ್ಯದರ್ಶಿ ಅಥವಾ ಮುಖ್ಯ ಕಾರ್ಯದರ್ಶಿ ಹಂತದ ಅಧಿಕಾರಿಗಳೂ ಇರಲಿದ್ದಾರೆ.