ನವದೆಹಲಿ: ಗುರುವಾರ ನಡೆದ ಮಹತ್ವದ ರಾಜಕೀಯ ಬೆಳವಣಿಗೆವೊಂದರಲ್ಲಿ ಮೇಘಾಲಯದ ಮಾಜಿ ಮುಖಮಂತ್ರಿ ಮುಕುಲ್ ಸಂಗ್ಮಾ ಸೇರಿದಂತೆ 12 ಮಂದಿ ಕಾಂಗ್ರೆಸ್ ಶಾಸಕರು ಟಿಎಂಸಿ ಸೇರ್ಪಡೆಯಾಗುವ ಮೂಲಕ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದ್ದಾರೆ.
ಮೇಘಾಲಯದ 12 ಶಾಸಕರು ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಅಸೆಂಬ್ಲಿ ಸ್ಪೀಕರ್ ಮೆಟ್ಟಾ ಲಿಂಗ್ಡೋಹ್ ಅವರಿಗೆ ಪತ್ರ ಬರೆದಿದ್ದು, ತಮ್ಮ ಸ್ಥಾನವನ್ನು ಬದಲಾಯಿಸುವಂತೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಸಕ್ತ ನಡೆದ ಬೆಳವಣಿಗೆಯಿಂದಾಗಿ ಟಿಎಂಸಿ ರಾಜ್ಯದ ಪ್ರಮುಖ ವಿರೋಧ ಪಕ್ಷವನ್ನಾಗಿ ರೂಪಿಸುವ ಯೋಜನೆ ಜಾರಿಯಲ್ಲಿದೆ ಎಂದು ಹೇಳಲಾಗಿದೆ.
ಬಿಜೆಪಿ ವಿರುದ್ಧದ ಹೋರಾಟಗಾರರನ್ನು ಟಿಎಂಸಿ ಸ್ವಾಗತಿಸುತ್ತದೆ ಎಂದು ಮಮತಾ ಬ್ಯಾನರ್ಜಿ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ಶಾಸಕರು ಟಿಎಂಸಿ ಸೇರ್ಪಡೆಯಾಗಿರುವುದು ತೀವ್ರ ಕುತೂಹಲ ಮೂಡಿಸಿದೆ.
ಸದ್ಯ ಟಿಎಂಸಿ ಮುಂದಿನ ಚುನಾವಣೆಯನ್ನು ಗುರಿಯಾಗಿಸಿ ಮೇಘಾಲಯ, ಅಸ್ಸಾಂ, ಗೋವಾ, ಉತ್ತರ ಪ್ರದೇಶ, ಬಿಹಾರ ಮತ್ತು ಹರ್ಯಾಣ ಸೇರಿದಂತೆ ದೇಶದ ಹಲವು ರಾಜ್ಯದಲ್ಲಿ ಪಕ್ಷದ ವಿಸ್ತರಣೆಯಲ್ಲಿ ತೊಡಗಿಸಿಕೊಂಡಿದೆ. ಈ ಬೆಳವಣಿಗೆಯು ಕಾಂಗ್ರೆಸ್ ಪಕ್ಷವನ್ನು ಚಿಂತೆಗೀಡುಮಾಡಿದೆ.
ಕಾಂಗ್ರೆಸ್ ತೊರೆದು ಟಿಎಂಸಿ ಸೇರ್ಪಡೆಯಾದ ಶಾಸಕರು ಗುರುವಾರ ರಾಜಧಾನಿ ಶಿಲ್ಲಾಂಗ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.