ಬೆಳ್ತಂಗಡಿ: ತೀವ್ರ ಸ್ವರೂಪದ ವಿವಾದಕ್ಕೆ ಕಾರಣವಾಗಿರುವ ಲಾಯಿಲ ವೆಂಕಟರಮಣ ದೇವಸ್ಥಾನದ ಪಲ್ಲಕ್ಕಿಯನ್ನು ಶೂದ್ರ ಸಮುದಾಯದ ಶಾಸಕ ಹರೀಶ್ ಪೂಂಜಾ ಹೆಗಲು ಕೊಟ್ಟ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ಹರೀಶ್ ಪೂಂಜಾರಂತೆ ತಮಗೂ ಪಲ್ಲಕ್ಕಿ ಹೊರಲು ಅವಕಾಶ ನೀಡಬೇಕು ಎಂಬ ದಲಿತ ಸಮುದಾಯದ ಒತ್ತಾಯದ ನಡುವೆ ಉತ್ಸವದ ಕೊನೆಯ ದಿನವಾದ (ಮಕ್ಕಳ ಹಬ್ಬ) ಬುಧವಾರ ರಾತ್ರಿ ನಡೆಯಬೇಕಿದ್ದ ದೇವರ ಪಲ್ಲಕ್ಕಿಯ ಪೇಟೆ ಸವಾರಿಯನ್ನು ಏಕಾಏಕಿ ಕೈಬಿಟ್ಟು, ಮತ್ತೊಮ್ಮೆ ಸಂಪ್ರದಾಯ ಮುರಿದ ಘಟನೆ ನಡೆಯಿತು.
ಲಾಯಿಲ ವೆಂಕಟರಮಣ ದೇವಸ್ಥಾನದ ಇತಿಹಾಸದಲ್ಲೇ ಮೊದಲ ಬಾರಿಗೆ ಶೂದ್ರ ಸಮುದಾಯದ ವ್ಯಕ್ತಿಯೊಬ್ಬ ದೇವರ ಪಲ್ಲಕ್ಕಿ ಹೊತ್ತು ಸಾಗಿದ ಘಟನೆ ಹಲವಾರು ಬೆಳವಣಿಗೆಗಳಿಗೆ ಸಾಕ್ಷಿಯಾಗಿತ್ತು. ಬುಧವಾರ ರಾತ್ರಿ ನಡೆಯುವ ಕೊನೆಯ ಪೇಟೆ ಸವಾರಿ ಸಂದರ್ಭದಲ್ಲಿ ದಲಿತ ಸಮುದಾಯಕ್ಕೂ ಪಲ್ಲಕ್ಕಿ ಹೊತ್ತು ಸಾಗಲು ಅವಕಾಶ ನೀಡಬೇಕು ಎಂದು ದಲಿತ ಹಕ್ಕುಗಳ ಸಮಿತಿಯ ರಾಜ್ಯ ಸಮಿತಿ ಸದಸ್ಯ ಶೇಖರ್ ಲಾಯಿಲ ಒತ್ತಾಯಿಸಿದ್ದರು.
ಈ ಮಧ್ಯೆ ಘಟನೆ ಇಡೀ ರಾಜ್ಯಾದ್ಯಂತ ವ್ಯಾಪಕವಾಗಿ ಚರ್ಚೆಗೆ ಗ್ರಾಸವಾಯಿತು. ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆದು ಕೊನೆಗೆ ಜಿಎಸ್ ಬಿ ಸಮುದಾಯದ ಸ್ವಾಮಿಗಳು ಘಟನೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು, ಕೊನೆಯ ಪೇಟೆ ಸವಾರಿ ಕೈಬಿಡಲು ಸೂಚಿಸಿದ್ದಾರೆ ಎನ್ನಲಾಗಿದೆ.
ಹರೀಶ್ ಪೂಂಜಾರ ಪಲ್ಲಕ್ಕಿ ವಿಚಾರವನ್ನು ಮುಂದಿಟ್ಟುಕೊಂಡು ದಲಿತ ನಾಯಕರು ನಮಗೆ ಪಲ್ಲಕ್ಕಿ ಹೊರಲು ಅವಕಾಶ ಕೇಳಿದರೆ ಒಂದೋ ನೀಡಬೇಕು ಅಥವಾ ಘರ್ಷಣೆಗೆ ಕಾರಣವಾಗುತ್ತದೆ ಎಂಬ ವಾದ ಮುಂದಿಟ್ಟುಕೊಂಡು ಮತ್ತೊಂದು ಸಂಪ್ರದಾಯ ಮುರಿದು ಪೇಟೆ ಸವಾರಿ ಕೈಬಿಡಲಾಯಿತು ಎಂದು ಬಲ್ಲ ಮೂಲಗಳು ಸ್ಪಷ್ಟ ಪಡಿಸಿವೆ. ಒಟ್ಟು ಘಟನೆ ದಿನಕ್ಕೊಂದು ಹಲವಾರು ಆಯಾಮಗಳನ್ನು ಪಡೆಯುತ್ತಿದ್ದು , ಕುತೂಹಲಕ್ಕೆ ಕಾರಣವಾಗಿದೆ. ಮುಂದಿನ ವರ್ಷ ನಡೆಯುವ ಉತ್ಸವದ ಸಂದರ್ಭದಲ್ಲಿ ದಲಿತ ಸಮುದಾಯಕ್ಕೆ ಪಲ್ಲಕ್ಕಿ ಹೊತ್ತು ಸಾಗಲು ಅವಕಾಶ ಮಾಡಿಕೊಡುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಅಥವಾ ಸಂಪ್ರದಾಯ ಮುರಿದು ಪಲ್ಲಕ್ಕಿ ಪೇಟೆ ಸವಾರಿ ಕೇವಲ ದೇವಸ್ಥಾನಕ್ಕೆ ಸೀಮಿತವಾಗಲಿದೆಯೇ ಎಂಬುದು ಕಾದುನೋಡಬೇಕಾಗಿದೆ.
ಶಾಸಕ ಹರೀಶ್ ಪೂಂಜಾ ಅವರಿಗೆ ಪಲ್ಲಕ್ಕಿ ಹೊರಲು ಅವಕಾಶ ಕಲ್ಪಿಸಿದ ತಪ್ಪಿಗಾಗಿ ನಿನ್ನೆ ಇಬ್ಬರು ಜಿಎಸ್ ಬಿಯ ಯುವಕರು ಕ್ಷಮೆಯಾಚಿಸಿದ್ದರು.