ನವದೆಹಲಿ: ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಸಂಸದ ಗೌತಮ್ ಗಂಭೀರ್’ಗೆ ಎರಡು ಬಾರಿ ಇ-ಮೇಲ್’ ಮೂಲಕ ಜೀವ ಬೆದರಿಕೆ ಒಡ್ಡಲಾಗಿದೆ ANI ಸುದ್ದಿ ಸಂಸ್ಥೆ ವರದಿ ಮಾಡಿದೆ.’ISIS ಕಾಶ್ಮೀರ್’ ಉಗ್ರ ಸಂಘಟನೆ ಈ ಜೀವ ಬೆದರಿಕೆಯೊಡ್ಡಿದೆ ಎನ್ನಲಾಗಿದ್ದು, ಗೌತಮ್ ಗಂಭೀರ್ ಅವರ ಅಧಿಕೃತ ಇ-ಮೇಲ್ ಐಡಿಗೆ ಜೀವ ಬೆದರಿಕೆ ಸಂದೇಶ ಕಳುಹಿಸಲಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ANI, BJP ಸಂಸದ ಹಾಗೂ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್’ಗೆ ‘ISIS ಕಾಶ್ಮೀರದಿಂದ ಎರಡನೇ ಬಾರಿ ಕೊಲೆ ಬೆದರಿಕೆ ಬಂದಿದೆ. ಗಂಬೀರ್ ಅವರ ನಿವಾಸದ ಹೊರಗಿನ ದೃಶ್ಯಗಳನ್ನು ಹೊಂದಿರುವ ಬೆದರಿಕೆಯ ಇ-ಮೇಲ್’ನೊಂದಿಗೆ ಲಗತ್ತಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿರುವುದಾಗಿ ಟ್ವೀಟ್’ನಲ್ಲಿ ತಿಳಿಸಲಾಗಿದೆ.
ತಮಗೆ ಜೀವ ಬೆದರಿಕೆ ಬಂದಿರುವ ಕುರಿತು ದೆಹಲಿ ಪೊಲೀಸರಿಗೆ ದೂರು ನೀಡಿರುವ ಗೌತಮ್ ಗಂಭೀರ್, ಹೆಚ್ಚುವರಿ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಗೌತಮ್ ಗಂಭೀರ್ ಅವರ ನಿವಾಸಕ್ಕೆ ಬಿಗಿ ಭದ್ರತೆ ಒದಗಿಸಲಾಗಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ.ಎಂದು ಡೆಲ್ಲಿ ಸೆಂಟ್ರಲ್ ಡಿಸಿಪಿ ಶ್ವೇತಾ ಚೌಹಾಣ್ ಹೇಳಿದ್ದಾರೆ.
“ಮಂಗಳವಾರ ಸಂಜೆ ಗೌತಮ್ ಗಂಭೀರ್ ಅವರ ಅಧಿಕೃತ ಇ-ಮೇಲ್ ಐಡಿಗೆ ಐಸಿಸ್ ಕಾಶ್ಮೀರ್‌ನಿಂದ ಮೇಲ್ ಬಂದಿದೆ. ಈ ಮೇಲ್ ಸಂದೇಶದಲ್ಲಿ ಸಂಸದರು ಹಾಗೂ ಅವರ ಕುಟುಂಬಕ್ಕೆ ಜೀವ ಬೆದರಿಕೆಯನ್ನು ಒಡ್ಡಲಾಗಿದೆ. ಹೀಗಾಗಿ ಈ ಬಗ್ಗೆ ಗಮನಹರಿಸಿ ಇದಕ್ಕೆ ಪೂರಕವಾದ ಭದ್ರತೆಯನ್ನು ನೀಡಬೇಕಾಗಿ ಮನವಿ ಮಾಡಿಕೊಳ್ಳುತ್ತಿದ್ದೇವೆ” ಗೌತಮ್ ಗಂಭೀರ್ ಅವರ ಕಾರ್ಯದರ್ಶಿ ಗೌರವ್ ಅರೋರಾ ಡೆಲ್ಲಿ ಸೆಂಟ್ರಲ್ ಡಿಸ್ಟ್ರಿಕ್ಟ್‌ನ ಡಿಸಿಪಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. .
ಕ್ರಿಕೆಟ್’ನಿಂದ ನಿವೃತ್ತಿಯಾದ ಬಳಿಕ ಗಂಭೀರ್ ರಾಜಕೀಯದಲ್ಲಿ ಬಿಜೆಪಿಯೊಂದಿಗೆ ಹೊಸ ಇನ್ನಿಂಗ್ಸ್ ಆರಂಭಿಸಿದ್ದರು. ಪೂರ್ವ ದೆಹಲಿಯ ಸಂಸದನಾಗಿ ಪೂರ್ಣ ಪ್ರಮಾಣದ ರಾಜಕಾರಣಿಯಾಗಿರುವ ಸಂದರ್ಭದಲ್ಲಿ ಗಂಭೀರ್‌ಗೆ ಜೀವ ಬೆದರಿಕೆ ಬಂದಿದೆ. ಆದರೆ ಘಟನೆಯ ಬಗ್ಗೆ ಮಾಧ್ಯಮಗಳ ಮುಂದೆ ಅಥವಾ ಸಾಮಾಜಿಕ ಜಾಲತಾಣದಲ್ಲಿ ಗೌತಮ್ ಗಂಭೀರ್ ಯಾವುದೇ ಮಾಹಿತಿಗಳನ್ನು ಕೂಡ ಹಂಚಿಕೊಂಡಿಲ್ಲ.
2007ರಲ್ಲಿ ಚೊಚ್ಚಲ T-20 ವಿಶ್ವಕಪ್ ಹಾಗೂ 2011ರಲ್ಲಿ ಏಕದಿನ ವಿಶ್ವಕಪ್ ಫೈನಲ್’ನಲ್ಲಿ ಗೌತಮ್ ಗಂಭೀರ್ ನೀಡಿದ ಅದ್ಭುತ ಪ್ರದರ್ಶನ, ಟೀಮ್ ಇಂಡಿಯಾ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಮಹತ್ವದ ಪಾತ್ರವಹಿಸಿತ್ತು.