ಬಲ್ಗೇರಿಯಾ: ಬಲ್ಗೇರಿಯಾದಲ್ಲಿ ಮಂಗಳವಾರ ಸಂಭವಿಸಿದ ಬಸ್ ಅಪಘಾತದಲ್ಲಿ 12 ಮಕ್ಕಳೂ ಸೇರಿದಂತೆ 45 ಜನರು ಮೃತಪಟ್ಟಿದ್ದಾರೆ. ಉತ್ತರ ಮೆಸಿಡೋನಿಯಾದತ್ತ ತೆರಳುತ್ತಿದ್ದ ಬಸ್ ಬೆಳಗಿನ ಜಾವ 2 ಗಂಟೆ ವೇಳೆಯಲ್ಲಿ ಅಪಘಾತಕ್ಕೀಡಾಗಿದೆ. ಗಂಭೀರ ಗಾಯಗೊಂಡಿರುವ ಏಳು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಾಗಿದೆ.
ಟರ್ಕಿಯಿಂದ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬಸ್ ಹೆದ್ದಾರಿಯ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಬಳಿಕ ಬೆಂಕಿ ಹೊತ್ತಿಕೊಂಡಿದೆ. ಅಪಘಾತದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತಪಟ್ಟವರಲ್ಲಿ ಉತ್ತರ ಮೆಸಿಡೋನಿಯಾದ ರಾಯಭಾರ ಕಚೇರಿಯ ಪ್ರತಿನಿಧಿಗಳು ಸೇರಿದ್ದಾರೆ ಎಂದು ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಬಲ್ಗೇರಿಯಾದ ಉಸ್ತುವಾರಿ ಪ್ರಧಾನ ಮಂತ್ರಿ ಸ್ಟೀಫನ್ ಯಾನೆವ್, ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದು, ಇದೊಂದು “ದೊಡ್ಡ ದುರಂತ” ಎಂದು ಕರೆದಿದ್ದಾರೆ. “ಮೃತರ ಕುಟುಂಬ ಸಂಬಂಧಿಕರಿಗೆ ನಾನು ಸಂತಾಪವನ್ನು ಸೂಚಿಸುತ್ತೇನೆ” ಎಂದಿದ್ದಾರೆ.