ಕಾಬೂಲ್: ಅಫ್ಘಾನಿಸ್ತಾನದಲ್ಲಿ ಭೀಕರ ಬರಗಾಲ ತಲೆದೋರಿದ್ದು, ಜನರು ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿದೆ. ಚಳಿಗಾಲ ಹತ್ತಿರದಲ್ಲಿರುವಂತೆಯೇ ರೈತರು ಸೇರಿದಂತೆ ದೇಶದ ಜನತೆ ಶೋಚನೀಯ ಪರಿಸ್ಥಿತಿಯನ್ನು ಎದುರಿಸಲಿದ್ದಾರೆ ಎಂದು ವಿಶ್ವಸಂಸ್ಥೆಯ ತಜ್ಞರು ಎಚ್ಚರಿಸಿದ್ದಾರೆ.
ಸದ್ಯ ಅಫ್ಘಾನಿಸ್ತಾನವು ಜಾಗತಿಕ ಮಾನವೀಯ ನೆರವಿನ ಅಭಾವವನ್ನು ಎದುರಿಸುತ್ತಿದೆ. ಅಗತ್ಯ ವಸ್ತುಗಳ ಬೆಲೆಯೇರಿಕೆ ಮತ್ತು ಅಫ್ಘಾನಿಸ್ತಾನದ ಜನರ ಅತ್ಯಗತ್ಯೆಯನ್ನು ಪೂರೈಸಲು ಸಂಪನ್ಮೂಲಗಳ ಕೊರತೆ ಎದುರಾಗಿದೆ ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ನಿಗಮ ತಿಳಿಸಿದೆ.
ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಮಿತಿಮೀರಿದ್ದು, ತಾವು ಬೆಳೆದ ಹೆಚ್ಚಿನ ಕೃಷಿ ಉತ್ಪನ್ನಗಳು ನಾಶವಾಗಿವೆ. ಮಾತ್ರವಲ್ಲ ಅನೇಕರು ತಮ್ಮ ಜಾನುವಾರುಗಳನ್ನು ಮಾರಾಟ ಮಾಡಿದ್ದಾರೆ. ಅನೇಕರು ತಮ್ಮ ಸಾಲವನ್ನು ತೀರಿಸಲು ಸಾಧ್ಯವಾಗದೇ ಹತಾಶರಾಗಿದ್ದಾರೆ ಎಂದು ಎಫ್.ಎ.ಒ ಪ್ರತಿನಿಧಿ ರಿಚಾರ್ಡ್ ಟ್ರೆಂಚಾರ್ಡ್ ತಿಳಿಸಿದ್ದಾರೆ.
ಪ್ರಸ್ತುತ ಅಫ್ಘಾನಿಸ್ತಾನದಲ್ಲಿ ಸುಮಾರು 1.88 ಕೋಟಿಯಷ್ಟು ಜನರಿಗೆ ಆಹಾರವನ್ನು ಪೂರೈಸಲು ಕಷ್ಟಸಾಧ್ಯವಾಗುತ್ತಿದೆ ಮತ್ತು ಈ ಸಂಖ್ಯೆ ವರ್ಷಾಂತ್ಯದ ವೇಳೆ 2.30 ಕೋಟಿಗೆ ಏರಲಿದೆ ಎಂಬ ಆಘಾತಕಾರಿ ಅಂಶವನ್ನು ಉಲ್ಲೇಖಿಸಿದ್ದಾರೆ