ಲೈಂಗಿಕ ಕಿರುಕುಳ ನೀಡುತ್ತಿದ್ದ ತಂದೆಯನ್ನು ಹತ್ಯೆ ಮಾಡಿದ ಪುತ್ರಿ

Prasthutha|

ಬೆಂಗಳೂರು: ತಂದೆ ನೀಡುತ್ತಿದ್ದ ಲೈಂಗಿಕ ಕಿರುಕುಳದಿಂದ ಬೇಸತ್ತು ಆಕ್ರೋಶಗೊಂಡ ಪಿಯುಸಿ ಓದುತ್ತಿದ್ದ ಪುತ್ರಿ ತನ್ನ ಸ್ನೇಹಿತರಿಂದಲೇ ಕೊಲೆ ಮಾಡಿಸಿರುವ ಘಟನೆ ಯಲಹಂಕದ ಉಪನಗರದಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ. ಜಿಕೆವಿಕೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ದೀಪಕ್ ಕುಮಾರ್ ಸಿಂಗ್ (46)ಕೊಲೆಯಾದವರು.

- Advertisement -


ಯಲಹಂಕದ ಉಪನಗರದ ವೀರ್ ಸಾಗರ್ ರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಿದ್ದ ದೀಪಕ್ ಕುಮಾರ್ ಸಿಂಗ್ ಅವರನ್ನು ರಾತ್ರಿ 1.30ರ ವೇಳೆ ನಾಲ್ವರು ಮಚ್ಚು ಇನ್ನಿತರ ಮಾರಕಾಸ್ತ್ರಗಳಿಂದ ಕೊಲೆ ಮಾಡಿ ಪರಾರಿಯಾಗಿದ್ದು ಅವರ ಪಿಯುಸಿ ಓದುತ್ತಿದ್ದ ಹಾಗೂ 10ವರ್ಷದ ಹೆಣ್ಣು ಮಕ್ಕಳ ಮುಂದೆಯೇ ಕೊಲೆ ನಡೆದಿತ್ತು. ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಯಲಹಂಕದ ಉಪನಗರದ ಪೊಲೀಸರು ಪರಿಶೀಲನೆ ನಡೆಸಿ ಹಿರಿಯ ಪುತ್ರಿಯನ್ನು ವಿಚಾರಿಸಿದಾಗ ಕೃತ್ಯವನ್ನು ಬಾಯ್ಬಿಟ್ಟಿದ್ದಾಳೆ.


ತಾಯಿಯು ಇತ್ತೀಚೆಗಷ್ಟೇ ಬಿಹಾರದ ತವರು ಮನೆಗೆ ಹೋಗಿದ್ದರಿಂದ ತಂದೆಯ ಜೊತೆಗೆ ಇಬ್ಬರು ಹೆಣ್ಣು ಮಕ್ಕಳು ವಾಸಿಸುತ್ತಿದ್ದು 17 ವರ್ಷದ ಪಿಯುಸಿ ಓದುತ್ತಿದ್ದ ಹಿರಿಯ ಪುತ್ರಿಗೆ ತಂದೆ ದೀಪಕ್ ಕುಮಾರ್ ಸಿಂಗ್ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ತಂದೆಯ ನಡವಳಿಕೆ ಸರಿಹೋಗಿರಲಿಲ್ಲ ಇದರಿಂದ ಆಕ್ರೋಶಗೊಂಡ ಆಕೆಯು ತನ್ನ ಇಬ್ಬರು ಸ್ನೇಹಿತರ ಬಳಿ ನೋವು ತೋಡಿಕೊಂಡು ಕೊಲೆ ಮಾಡುವಂತೆ ವಿನಂತಿಸಿದ್ದರು. ಅದರಂತೆ ಇಬ್ಬರು ಸ್ನೇಹಿತರು ಸೇರಿ ನಾಲ್ವರು ಮಧ್ಯರಾತ್ರಿ ಮನೆಗೆ ನುಗ್ಗಿ ದೀಪಕ್ ಕುಮಾರ್ ಸಿಂಗ್ ಗೆ ಮಚ್ಚು ಇನ್ನಿತರ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿರುವುದನ್ನು ಬಾಯ್ಬಿಟ್ಟಿದ್ದಾಳೆ. ಪ್ರಕರಣ ದಾಖಲಿಸಿ ಕೊಲೆಗೈದ ಆರೋಪಿಗಳ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಸಿಕೆ ಬಾಬಾ ತಿಳಿಸಿದ್ದಾರೆ.

Join Whatsapp