ನವದೆಹಲಿ: ಪ್ರವಾದಿ ಮುಹಮ್ಮದ್ ಮತ್ತು ” ಧಾರ್ಮಿಕ ವ್ಯಕ್ತಿಗಳ” ಬಗ್ಗೆ ಅಗೌರವ ತೋರುವವರನ್ನು ಶಿಕ್ಷಿಸಲು ಧರ್ಮನಿಂದನೆ ವಿರೋಧಿ ಕಾನೂನನ್ನು ಜಾರಿಗೆ ತರುವಂತೆ ಒತ್ತಾಯಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಏಕರೂಪ ನಾಗರಿಕ ಸಂಹಿತೆಯನ್ನು ನೇರವಾಗಿ ಅಥವಾ ಪರೋಕ್ಷವಾಗಿ ಹೇರಲು ಪ್ರಯತ್ನಿಸಬಾರದು ಎಂದು ಸರ್ಕಾರವನ್ನು ಆಗ್ರಹಿಸಿದೆ.
ಮುಸ್ಲಿಮ್ ಸಮುದಾಯದ ವ್ಯವಹಾರಗಳಲ್ಲಿ ನಿರ್ಣಾಯಕ ತೀರ್ಮಾನ ಕೈಗೊಳ್ಳುವ ಮುಸ್ಲಿಮ್ ಪರ್ಸನಲ್ ಬೋರ್ಡ್ “ಸಾಮಾಜಿಕ ಮಾಧ್ಯಮಗಳಲ್ಲಿ ಕೋಮು ಮತ್ತು ಅವಹೇಳನಕಾರಿ ಪೋಸ್ಟ್ ಹಾಕುವವರ ವಿರುದ್ಧ ನಿರ್ಬಂಧಗಳು ಮತ್ತು ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದೆ.
ಕಾನ್ಪುರದಲ್ಲಿ ಭಾನುವಾರ ಸುಮಾರು 200 ಎಐಎಂಪಿಎಲ್ ಬಿ ಸದಸ್ಯರು ಭಾಗವಹಿಸಿದ ಎರಡು ದಿನಗಳ ಸಮಾವೇಶದಲ್ಲಿ ಈ ಬಗ್ಗೆ ನಿರ್ಣಯ ಅಂಗೀಕರಿಸಲಾಗಿದೆ.
ಹಿಂದೂ, ಸಿಖ್ ಮತ್ತು ಇತರ ಮುಸ್ಲಿಮೇತರ ವಿದ್ವಾಂಸರು ಕೂಡ ಪ್ರವಾದಿ ಮುಹಮ್ಮದ್ ಅವರ ಶ್ರೇಷ್ಠತೆಯನ್ನು ನಿರಂತರವಾಗಿ ಒಪ್ಪಿಕೊಂಡಿದ್ದಾರೆ. ಅದೇ ರೀತಿ ಇಸ್ಲಾಮ್ ನ ಬೋಧನೆಗಳಿಗೆ ಅನುಗುಣವಾಗಿ, ಮುಸ್ಲಿಮರು ಸಹ ಇತರ ಧರ್ಮಗಳ ಗೌರವಾನ್ವಿತ ವ್ಯಕ್ತಿಗಳ ಬಗ್ಗೆ ಯಾವುದೇ ಅವಹೇಳನಕಾರಿ ಪದಗಳನ್ನು ಬಳಸುವುದಿಲ್ಲ ಎಂದು ತಿಳಿಸಲಾಗಿದೆ.
ಆದಾಗ್ಯೂ, ಕೆಲವು ಕೆಟ್ಟ ಮನಸ್ಥಿತಿಯವರು ಪ್ರವಾದಿ ಮುಹಮ್ಮದ್ ಅವರನ್ನು ಬಹಿರಂಗವಾಗಿ ಅವಮಾನಿಸುತ್ತಿದ್ದಾರೆ. ಆದರೆ ಸರ್ಕಾರ ಈ ನಿಟ್ಟಿನಲ್ಲಿ ಯಾವುದೇ ಪ್ರತಿಬಂಧಕ ಹೆಜ್ಜೆಯನ್ನು ಇಟ್ಟಿಲ್ಲ ಎಂಬುದು ಅತ್ಯಂತ ಶೋಚನೀಯವಾಗಿದೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.
“ಕೋಮುವಾದಿ ಶಕ್ತಿಗಳ ಈ ಮನೋಭಾವವು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ” ಎಂದು ನಿರ್ಣಯವು ಒತ್ತಿ ಹೇಳಿದೆ.
ಗೌರವಾನ್ವಿತ ಧಾರ್ಮಿಕ ವ್ಯಕ್ತಿಗಳಿಗೆ ಅಗೌರವ ತೋರಿದ ಅಪರಾಧಿಗಳನ್ನು ಸರ್ಕಾರ ಶಿಕ್ಷಿಸಬೇಕೆಂದು ಎಐಎಂಪಿಎಲ್ ಬಿ ಒತ್ತಾಯಿಸುತ್ತದೆ. ಈ ಸಮಸ್ಯೆಯನ್ನು ನಿಭಾಯಿಸಲು ಸರ್ಕಾರ ಪರಿಣಾಮಕಾರಿ ಶಾಸನವನ್ನು ಜಾರಿಗೆ ತರಬೇಕು ಎಂದು ಎಐಎಂಪಿಎಲ್ ಬಿಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಕಾನೂನುಗಳ ರಕ್ಷಣೆಯ ಸಮಿತಿಯ ಸಂಯೋಜಕ ಎಸ್.ಕ್ಯೂ.ಆರ್. ಇಲ್ಯಾಸ್ ಸಭೆಯ ಬಳಿಕ ತಿಳಿಸಿದರು.