ರಾಂಚಿ: ನ್ಯೂಜಿಲೆಂಡ್ ವಿರುದ್ಧ ಮೂರು T-20 ಪಂದ್ಯಗಳ ಸರಣಿಯ ಎರಡನೇ ಪಂದ್ಯದಲ್ಲಿ 7 ವಿಕೆಟ್’ಗಳ ಅಂತರದಲ್ಲಿ ಭರ್ಜರಿ ಜಯ ದಾಖಲಿಸಿದ ಟೀಮ್ ಇಂಡಿಯಾ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಈ ಗೆಲುವಿನ ಮೂಲಕ ಭಾರತ, ತಾಯ್ನೆಲದಲ್ಲಿ ಸತತ 5ನೇ ಬಾರಿಗೆ T-20 ಸರಣಿ ಗೆದ್ದ ಸಾಧನೆ ಮಾಡಿದೆ.
ರಾಂಚಿಯ ಜೆಎಸ್‌ಸಿಎ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್ ಭಾರತದ ಗೆಲುವಿಗೆ 154 ರನ್’ಗಳ ಗುರಿ ನೀಡಿತ್ತು. ಸಾಧಾರಣ ಗುರಿಯನ್ನು ಕೇವಲ 3 ವಿಕೆಟ್ ನಷ್ಟದಲ್ಲಿ 17.2 ಓವರ್’ಗಳಲ್ಲಿ ಚೇಸ್ ಮಾಡಿದ ಭಾರತ T-20 ಸರಣಿ ಗೆದ್ದು ಬೀಗಿದೆ. ಜೈಪುರದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 5 ವಿಕೆಟ್’ಗಳ ಅಂತರದಲ್ಲಿ ಗೆಲುವು ಸಾಧಿಸಿತ್ತು.
ಟೀಮ್ ಇಂಡಿಯಾ ಪರ ನಾಯಕ ರೋಹಿತ್ ಹಾಗೂ ಕನ್ನಡಿಗ ರಾಹುಲ್ ಮೊದಲನೇ ವಿಕೆಟ್’ಗೆ ಶತಕದ ಜೊತೆಯಾಟ ಆಡುವ ಮೂಲಕ ಕಿವೀಸ್ ಬೌಲರ್’ಗಳ ಬೆವರಿಳಿಸಿದರು. 49 ಎಸೆತಗಳನ್ನು ಎದುರಿಸಿದ ರಾಹುಲ್, 2 ಸಿಕ್ಸರ್ ಹಾಗೂ 6 ಬೌಂಡರಿಗಳ ನೆರವಿನಿಂದ 65 ರನ್ ಹಾಗೂ ರೋಹತ್ ಶರ್ಮಾ 5 ಸಿಕ್ಸರ್’ಗಳ ನೆರವಿನಿಂದ 36 ಎಸೆತಗಳಲ್ಲಿ 55 ರನ್’ಗಳಿಸಿ ನಿರ್ಗಮಿಸಿದರು. ಬಳಿಕ ಬಂದ ಸೂರ್ಯಕುಮಾರ್ ಯಾದವ್ ಖಾತೆ ತೆರೆದ ಮುಂದಿನ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆದರು. ಮೂರು ಪ್ರಮುಖ ವಿಕೆಟ್ ಕಿತ್ತ ನಾಯಕ ಟಿಮ್ ಸೌಥಿ ನ್ಯೂಜಿಲೆಂಡ್ ಪಾಳಯದಲ್ಲಿ ಕೊಂಚ ಭರವಸೆ ಮೂಡಿಸಿದ್ದರು.
ಆದರೆ ಅದಾಗಲೇ ಟೀಮ್ ಇಂಡಿಯಾ ಗೆಲುವಿನ ಸನಿಹ ತಲುಪಿತ್ತು. ಕೊನೆಯಲ್ಲಿ ರಿಷಭ್ ಪಂತ್ 2 ಸಿಕ್ಸರ್ ಬಾರಿಸುವ ಮೂಲಕ ಗೆಲುವಿನ ಔಪಚಾರಿಕತೆ ಪೂರ್ತಿಗೊಳಿಸಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟ್ ಮಾಡಿದ ನ್ಯೂಜಿಲೆಂಡ್, 6 ವಿಕೆಟ್ ನಷ್ದಲ್ಲಿ 153 ರನ್’ಗಳಿಸಿತ್ತು. ಆರಂಭಿಕರಾದ ಮಾರ್ಟಿನ್ ಗಪ್ಟಿಲ್ ಹಾಗೂ ಡೆರಿಲ್ ಮಿಚೆಲ್ ತಲಾ 31 ರನ್’ಗಳಿಸಿ ಔಟಾದರು. ಗಪ್ಟಿಲ್ 2 ಸಿಕ್ಸರ್ ಹಾಗೂ 3 ಬೌಂಡರಿ ಸಿಡಿಸಿ ಅಬ್ಬರಿಸುವ ಲಕ್ಷಣ ತೋರಿದರೂ ದೀಪಕ್ ಚಾಹರ್ ಬೌಲಿಂಗ್’ನಲ್ಲಿ ಕ್ಯಾಚಿತ್ತು ನಿರ್ಗಮಿಸಿದರು. ಪಾದಾರ್ಪಣಾ ಪಂದ್ಯದಲ್ಲೇ ಹರ್ಷಲ್ ಪಟೇಲ್, ಡೆರಿಲ್ ಮಿಚೆಲ್ ವಿಕೆಟ್ ಪಡೆದು ಮಿಂಚಿದರು.
ಮಾರ್ಕ್ ಚಾಪ್’ಮನ್ 21, ವಿಕೆಟ್ ಕೀಪರ್ ಬ್ಯಾಟರ್ ಟಿಮ್ ಸೀಫರ್ಟ್ 15 ರನ್’ಗಳಿಸಿ ನಿರ್ಗಮಿಸಿದರು. ಬಳಿಕ 21 ಎಸೆತಗಳಲ್ಲಿ 3 ಸಿಕ್ಸರ್, 1 ಬೌಂಡರಿ ನೆರವಿನಿಂದ 34 ರನ್ ಗಳಿಸಿದ್ದ ಗ್ಲೆನ್ ಫಿಲಿಪ್ಸ್’ಗೂ ಹರ್ಷಲ್ ಪಟೇಲ್ ಪೆವಿಲಿಯನ್ ಹಾದಿ ತೋರಿದರು. ಅಂತಿಮ ಹಂತದಲ್ಲಿ ಕಿವೀಸ್ ಓಟಕ್ಕೆ ಕಡಿವಾಣ ಹಾಕುವಲ್ಲಿ ಭಾರತೀಯ ಬೌಲರ್‌ಗಳು ಯಶಸ್ವಿಯಾದರು. ಪರಿಣಾಮ 6 ವಿಕೆಟ್ ನಷ್ಟಕ್ಕೆ 153 ರನ್’ಗಳಿಸಲಷ್ಟೇ ಸಾಧ್ಯವಾಯಿತು.
ಭಾರತದ ಪರ ಪದಾರ್ಪಣಾ ಪಂದ್ಯವನ್ನಾಡಿದ ಹರ್ಷಲ್ ಪಟೇಲ್ 2 ವಿಕೆಟ್ ಕಿತ್ತು ಮಿಂಚಿದರು. ಆರ್. ಅಶ್ವಿನ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್ ಹಾಗೂ ದೀಪಕ್ ಚಾಹರ್ ತಲಾ ಒಂದು ವಿಕೆಟ್ ಪಡೆದರು.