ಕೊಚ್ಚಿ: ಸಣ್ಣ ಟೀ ಶಾಪ್’ನಿಂದ ಬರುತ್ತಿದ್ದ ಆದಾಯದಿಂದಲೇ 25ಕ್ಕೂ ಹೆಚ್ಚು ದೇಶಗಳನ್ನು ಸುತ್ತಿದ್ದ ಕೇರಳದ ಕೆ.ಆರ್. ವಿಜಯನ್ (71) ಹೃದಯಾಘಾತದಿಂದ ಕೊಚ್ಚಿಯಲ್ಲಿ ನಿಧನರಾಗಿದ್ದಾರೆ. ‘ಬಾಲಾಜಿ ಟೀ ಶಾಪ್’ ಮಾಲಿಕ ಕೆ.ಆರ್. ವಿಜಯನ್ ಹಾಗೂ ಪತ್ನಿ ಮೋಹನಾ ತಮ್ಮ ಪ್ರವಾಸಗಳಿಂದಲೇ ಪ್ರಖ್ಯಾತಿಯನ್ನು ಗಳಿಸಿದ್ದರು.
ಕೊಚ್ಚಿಯ ಕತ್ರಿಕಡವು ಎಂಬಲ್ಲಿ ‘ಬಾಲಾಜಿ ಟೀ ಶಾಪ್’ ನಡೆಸುತ್ತಿದ್ದ ಕಡವಂತ್ರ ನಿವಾಸಿಯಾದ ಕೆ.ಆರ್. ವಿಜಯನ್ ಕಳೆದ 14 ವರ್ಷಗಳಲ್ಲಿ ಪತ್ನಿ ಮೋಹನರ ಜೊತೆ 6 ಖಂಡಗಳಲ್ಲಿನ 25ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಪ್ರವಾಸ ಮಾಡಿದ್ದರು. ಸಣ್ಣ ಟೀ ಶಾಪ್’ನಿಂದ ಬರುತ್ತಿದ್ದ ಆದಾಯದಿಂದಲೇ ಜಗತ್ತನ್ನು ಸುತ್ತುತ್ತಿರುವ ದಂಪತಿಗಳ ಕುರಿತು ಬಹುತೇಕ ಎಲ್ಲಾ ಮಾಧ್ಯಮಗಳಲ್ಲೂ ಪದೇ ಪದೇ ಸುದ್ದಿಯಾಗುತ್ತಿತ್ತು.
PUCಯಲ್ಲಿಯೇ ತನ್ನ ವಿದ್ಯಾಬ್ಯಾಸ ನಿಲ್ಲಿಸಿದ್ದ ವಿಜಯನ್, ಕಳೆದ 40 ವರ್ಷಗಳಿಂದ ‘ಬಾಲಾಜಿ ಟೀ ಶಾಪ್’ ನಡೆಸುತ್ತಿದ್ದರು. 2007ರಲ್ಲಿ ವಿಜಯನ್-ಮೋಹನ್ ದಂಪತಿ ಮೊದಲ ಬಾರಿಗೆ ಈಜಿಪ್ಟ್’ ಪ್ರವಾಸಕ್ಕೆ ತೆರಳಿದ್ದರು. ಆ ಬಳಿಕ ಕಳೆದ 14 ವರ್ಷಗಳಲ್ಲಿ ಅಮೆರಿಕ ಸೇರಿದಂತೆ 25ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ದಂಪತಿ ಜೊತೆಯಾಗಿಯೇ ಪ್ರವಾಸ ಮಾಡಿದ್ದಾರೆ. ಕಳೆದ ಅಕ್ಟೋಬರ್’ನಲ್ಲಿ ದಂಪತಿ ಕೊನೇಯದಾಗಿ ರಷ್ಯಾ ಪ್ರವಾಸ ಕೈಗೊಂಡಿದ್ದರು. ಮುಂದೆ ಜಪಾನ್ ಪ್ರವಾಸ ಹೊರಡಲು ಸಿದ್ಧತೆಯನ್ನೂ ನಡೆಸಿದ್ದರು.
ಬಹುತೇಕ ಸಂದರ್ಶನಗಳಲ್ಲಿ ವಿಜಯನ್, ಸಿಂಗಾಪುರ ತಮಗೆ ಅತ್ಯಂತ ಹೆಚ್ಚು ಇಷ್ಟವಾದ ದೇಶ. ಅಲ್ಲಿಯ ಸ್ವಚ್ಛತೆಯನ್ನು ಹಾಡಿ ಹೊಗಳುತ್ತಿದ್ದರು. ಮುಂದೊಂದು ದಿನ ತಾನು ಅಲ್ಲಿ ಟೀ ಶಾಪ್’ ತೆರೆಯಬೇಕು ಎಂಬ ಆಲೋಚನೆ ಹೊಂದಿರುವುದಾಗಿ ವಿಜಯನ್ ಆಪ್ತರ ಬಳಿ ಹೇಳಿಕೊಂಡಿದ್ದರು.