ಬೆಂಗಳೂರು: ಕೋಲಾರದಲ್ಲಿ ಬಂದ್ ನೆಪದಲ್ಲಿ ಉದ್ರೇಕಕಾರಿ ಭಾಷಣ ಮಾಡಿ ಶಾಂತಿ ಕದಡಲು ಪ್ರಯತ್ನಿಸಿದ ಸಂಸದ ಎಸ್ ಮುನಿಸ್ವಾಮಿ ಮತ್ತು ಸಂಘಪರಿವಾರದ ಇತರ ನಾಯಕರ ಮೇಲೆ ಕಠಿಣ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಪಾಪ್ಯುಲರ್ ಫ್ರಂಟ್ ಕೋಲಾರ ಜಿಲ್ಲಾಧ್ಯಕ್ಷ ಜಾಫರ್ ಸಾದಿಕ್ ಒತ್ತಾಯಿಸಿದ್ದಾರೆ.
ಕೋಲಾರದಲ್ಲಿ ಶ್ರೀರಾಮಸೇನೆಯ ಕಾರ್ಯಕರ್ತರು ಬಾಬಬುಡನ್ ಗಿರಿಗೆ ತೆರಳುವ ಬಸ್ ನಲ್ಲಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗುತ್ತಾ ಪ್ರಕ್ಷುಬ್ಧ ವಾತಾವರಣ ಸೃಷ್ಟಿಸಿದ್ದರು. ಇದರ ಮುಂದುವರಿದ ಭಾಗವಾಗಿ ಇಂದು ಕೋಲಾರ ಬಂದ್ ನಡೆಸಿ ಪೋಲಿಸ್ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡಿ ನಗರದಲ್ಲಿ ಶಾಂತಿ ಕದಡಲು ಯತ್ನಿಸಿದ್ದಾರೆ. ಮಾತ್ರವಲ್ಲ, ಹಿಂಸಾಚಾರ, ಹತ್ಯೆ, ಭಯೋತ್ಪಾದನೆ ಮತ್ತು ಇತರ ದೇಶವಿರೋಧಿ ಕೃತ್ಯಗಳ ಇತಿಹಾಸ ಹೊಂದಿರುವ ಸಂಘಪರಿವಾರದ ನಾಯಕರು, ಸಂವಿಧಾನಬದ್ಧವಾಗಿ ಕಾರ್ಯಾಚರಿಸುವ ಪಾಪ್ಯುಲರ್ ಫ್ರಂಟ್ ವಿರುದ್ಧ ನಿರಾಧಾರ ಆರೋಪ ಮಾಡಿದ್ದಾರೆ. ಇದರ ಬಗ್ಗೆ ಸಂಘಟನೆ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಜಾಫರ್ ಶರೀಫ್ ತಿಳಿಸಿದ್ದಾರೆ.
ಬಂದ್ ನೆಪದಲ್ಲಿ ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದ ಸಂಘಪರಿವಾರದ ಮುಖಂಡರ ಮೇಲೆ 153(A) ಮತ್ತು ಇತರ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಬೇಕು. ಕೂಡಲೇ ಅವರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಂಡು ಜಿಲ್ಲೆಯಲ್ಲಿ ಸಂಭವಿಸಬಹುದಾದ ಹೆಚ್ಚಿನ ಅನಾಹುತವನ್ನು ತಪ್ಪಿಸಬೇಕೆಂದು ಜಾಫರ್ ಶರೀಫ್ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.