ಮೇಲಾಧಿಕಾರಿಗೆ ಲಂಚ ಕೊಡಲು ಸ್ವಂತ ಮಕ್ಕಳನ್ನೇ ಮಾರಾಟ ಮಾಡಲು ಮುಂದಾದ ಪೇದೆ !

Prasthutha|

ಪಾಕಿಸ್ತಾನ: ಸರ್ಕಾರಿ ಕಚೇರಿಗಳಲ್ಲಿ ಲಂಚ ಕೊಡದೇ ಯಾವುದು ಕೆಲಸಗಳು ನಡೆಯುವುದಿಲ್ಲ ಎನ್ನುವುದು ಕಹಿಸತ್ಯ. ಭಾರತದಲ್ಲಿ ಮಾತ್ರವಲ್ಲ, ಪಕ್ಕದ ಪಾಕಿಸ್ತಾನದಲ್ಲೂ ಸಮಾನ ಪರಿಸ್ಥಿತಿಯಿದೆ. ಮೇಲಾಧಿಕಾರಿಗೆ ಲಂಚ ಕೊಡಲು ಸ್ವಂತ ಮಕ್ಕಳನ್ನೇ ಮಾರಾಟ ಮಾಡಲು ಮುಂದಾದ ಪೇದೆಯೊಬ್ಬರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೇದೆಯ ಪರಿಸ್ಥಿತಿ ನೋಡಿದ ನೆಟ್ಟಿಗರು ಕಂಬನಿ ಮಿಡಿದಿದ್ದಾರೆ.

- Advertisement -

ಪಾಕಿಸ್ತಾನದ  ಸಿಂಧ್ ಪ್ರಾಂತ್ಯದ ಘೋಟ್ಕಿ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಕಾರಾಗೃಹ ಇಲಾಖೆಯ ಪೇದೆ ನಿಸಾರ್‌ ಲಶರಿ, ತನ್ನ ಇಬ್ಬರು ಮಕ್ಕಳ ಜೊತೆ ಬೀದಿಯೊಂದರ ಮಧ್ಯದಲ್ಲಿ ನಿಂತು, ತನ್ನ ಮಕ್ಕಳನ್ನು 50,000 ರೂ.ಗಳಿಗೆ ಮಾರುತ್ತಿರುವುದಾಗಿ ಕೂಗುವುದು ವೀಡಿಯೋದಲ್ಲಿ ದಾಖಲಾಗಿದೆ.

ತನ್ನ ಮಗನ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಲು ಪೇದೆ ನಿಸಾರ್‌ ಲಶರಿ, ಮೇಲಾಧಿಕಾರಿಯ ಬಳಿ ರಜೆ ನೀಡುವಂತೆ ಮನವಿ ಮಾಡಿದ್ದರು. ಆದರೆ ರಜೆ ನೀಡಬೇಕಾದರೆ ಲಂಚ ಕೊಡಬೇಕೆಂದು ಮೇಲಾಧಿಕಾರಿ ಬೇಡಿಕೆ ಇಟ್ಟಿದ್ದರು. ಲಂಚ ನೀಡಲು ಸಾಧ್ಯವಾಗದೇ ಇದ್ದಾಗ, ಲಶರಿಯ ರಜೆಯ ಅರ್ಜಿ ರದ್ದು ಮಾಡಲಾಗಿದೆ. ಅಷ್ಟೇ ಅಲ್ಲ, ನಗರದಿಂದ 120 ಕಿಮೀ ದೂರದಲ್ಲಿರುವ ಲರ್ಕಾನಾ ಎಂಬ ಊರಿಗೆ ವರ್ಗಾವಣೆ ಮಾಡಲಾಗಿದೆ.

- Advertisement -

“ಲಂಚ ಕೊಡದೇ ಇದ್ದ ಕಾರಣಕ್ಕೆ ನನಗೆ ಈ ಶಿಕ್ಷೆ ಕೊಟ್ಟಿದ್ದೇಕೆ? ನಾನು ಬಡವನಾಗಿದ್ದು, ಕರಾಚಿಗೆ ಪ್ರಯಾಣಿಸಿ, ಕಾರಾಗೃಹ ಇಲಾಖೆಯ ಐಜಿಗೆ ದೂರು ನೀಡಲು ಸಹ ಆಗುತ್ತಿಲ್ಲ. ಇಲ್ಲಿನ ಶಕ್ತಿಶಾಲಿ ಜನರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ನನ್ನ ಮಗುವಿನ ಚಿಕಿತ್ಸೆಗಾಗಿ ಲಂಚ ನೀಡಬೇಕಾಗಿತ್ತೇ? ಲರ್ಕಾನಾದಲ್ಲಿ ಕೆಲಸ ಮಾಡಬೇಕಿತ್ತೇ ಅಥವಾ ನನ್ನ ಮಗುವನ್ನು ಚಿಕಿತ್ಸೆಗೆ ಕೊಂಡೊಯ್ಯಬೇಕಿತ್ತೇ?” ಎಂದು ಹತಾಶ ಪೇದೆ ಅಸಹಾಯಕರಾಗಿ ಹೇಳಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಪೇದೆಯ ಪರಿಸ್ಥಿತಿಗೆ ಕಂಬನಿ ಮಿಡಿದಿದ್ದಾರೆ.

ಪೇದೆಯ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಕ್ರಮಕ್ಕೆ ಮುಂದಾಗಿರುವ ಸಿಂಧ್ ಸಿಎಂ ಮುರಾದ್ ಅಲಿ ಶಾ, ತನ್ನ ಮಗನ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಲು ಪೇದೆ ನಿಸಾರ್‌ ಲಶರಿಗೆ 14 ದಿನದ ರಜೆಯನ್ನು ನೀಡಿದ್ದು, ಲಂಚಕ್ಕೆ ಬೇಡಿಕೆ ಇಟ್ಟ ಅಧಿಕಾರಿಯ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.

Join Whatsapp