ಕಾಶ್ಮೀರ ಹಿಂಸಾಚಾರ: ಮೃತದೇಹಗಳ ಹಸ್ತಾಂತರಕ್ಕೆ ಒತ್ತಾಯಿಸಿದ ಪ್ರತಿಭಟನಕಾರರ ಬಂಧನ

Prasthutha|

ಅನಂತನಾಗ್: ಜಮ್ಮು ಕಾಶ್ಮೀರ ಹೈದರ್ ಪುರದಲ್ಲಿ ಸೋಮವಾರ ನಡೆದ ಎನ್ ಕೌಂಟರ್ ನಲ್ಲಿ ಹತರಾದವರ ಮೃತದೇಹಗಳನ್ನು ಕುಟುಂಬಕ್ಕೆ ಹಸ್ತಾಂತರಿಸುವಂತೆ ಒತ್ತಾಯಿಸಿದ ಪ್ರತಿಭಟನಕಾರರನ್ನು ಬಂಧಿಸಿದ ಘಟನೆ ಬುಧವಾರ ತಡರಾತ್ರಿ ನಡೆದಿದೆ.

- Advertisement -

ಹೈದರ್ ಪುರ ಎಂಬಲ್ಲಿ ಭಯೋತ್ಪಾದನೆ ನಿಗ್ರಹ ನೆಪದಲ್ಲಿ ಭದ್ರತಾ ಪಡೆಗಳು ಕಟ್ಟಡ ಮಾಲಕ ಅಲ್ತಾಫ್ ಭಟ್ ಮತ್ತು ಸ್ಥಳೀಯ ನಿವಾಸಿ ಡಾ. ಮುದಾಸಿರ್ ಗುಲ್ ಎಂಬವರನ್ನು ಎನ್ ಕೌಂಟರ್ ನಲ್ಲಿ ಹತ್ಯೆ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಹತ್ಯೆಯಾದವರ ಮೃತದೇಹಗಳನ್ನು ಕುಟುಂಬಗಳಿಗೆ ಹಸ್ತಾಂತರಿಸುವಂತೆ ಒತ್ತಾಯಿಸಿ ಬುಧವಾರ ಬೆಳಿಗ್ಗೆಯಿಂದ ಧರಣಿ ನಡೆಸಲಾಗಿತ್ತು.

ಈ ಮಧ್ಯೆ ಪ್ರತಿಭಟನಕಾರರ ವಿರುದ್ಧ ಪೊಲೀಸರು ಕ್ರಮ ಜರುಗಿಸುವ ಮೊದಲು ಊರಿನ ವಿದ್ಯುತ್ ಸಂಪರ್ಕವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದರು ಎಂದು ಸಂತ್ರಸ್ತ ಕುಟುಂಬಸ್ಥರು ಆರೋಪಿಸಿದ್ದಾರೆ.

- Advertisement -

ಹಗಲು ಸಮಯದಲ್ಲಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಲು ಪೊಲೀಸರು ಅನುಮತಿ ನಿರಾಕರಿಸಿದ್ದಾರೆ ಎಂದು ಆರೋಪಿಸಿದ ಮಾಜಿ ಮುಖ್ಯಮಂತ್ರಿ, ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ, ಮುಗ್ದ ನಾಗರಿಕರ ಮೃತದೇಹಗಳನ್ನು ಹಸ್ತಾಂತರಿಸುವ ಬದಲು ಕುಟುಂಬದ ಸದಸ್ಯರು ಸೇರಿದಂತೆ ಸ್ಥಳೀಯ ಪ್ರತಿಭಟನಕಾರರನ್ನು ಬಂಧಿಸಿರುವುದು ದುರಂತ ಎಂದು ಬಣ್ಣಿಸಿದ್ದಾರೆ.

ನ್ಯಾಷನಲ್ ಕಾನ್ಫರೆನ್ಸ್ ನಾಯಕರಾದ ಸಲ್ಮಾನ್ ಸಾಗರ್, ಇಮ್ರಾನ್ ದಾರ್ ಬುಧವಾರ ಸಂಜೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ತಕ್ಷಣ ಮೃತದೇಹಗಳನ್ನು ಕುಟುಂಬಗಳಿಗೆ ಹಸ್ತಾಂತರಿಸುವಂತೆ ಒತ್ತಾಯಿಸಿದ್ದಾರೆ.

ಘಟನೆಯ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಪೊಲೀಸರು, ಹತ್ಯೆಯಾದ ಉಗ್ರರ ಶವಗಳನ್ನು ಕುಟುಂಬಗಳಿಗೆ ಹಸ್ತಾಂತರಿಸುವುದರಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಶ್ರೀನಗರದಿಂದ 70 ಕಿ.ಮೀ ದೂರದ ಹಂದ್ವಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ ಎಂದು ತಿಳಿಸಿದ್ದಾರೆ.



Join Whatsapp