ಸಮಸ್ಯೆ ಹೇಳಿಕೊಳ್ಳಲು ಸಿಎಂ ನಿವಾಸಕ್ಕೆ ಬಂದ ಶಿಕ್ಷಕರನ್ನು ಮುಖ್ಯಮಂತ್ರಿ ಸಮ್ಮುಖದಲ್ಲೇ ಎಳೆದಾಡಿದ ಪೊಲೀಸರು

Prasthutha|

ಬೆಂಗಳೂರು: ಮುಖ್ಯಮಂತ್ರಿಯವರ ಜನತಾ ದರ್ಶನದಲ್ಲಿ ಸಮಸ್ಯೆ ಹೇಳಿಕೊಳ್ಳಲು ಆಗಮಿಸಿದ್ದ ವಸತಿ ಶಿಕ್ಷಕರಿಗೆ ಪೊಲೀಸರು ಅಡ್ಡಿಪಡಿಸಿ ಎಳೆದಾಡಿದ ಘಟನೆ ಗುರುವಾರ ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದ ಬಳಿ ನಡೆದಿದೆ.

- Advertisement -

ವಸತಿ ಶಾಲಾ ಶಿಕ್ಷಕರ ನೇಮಕಾತಿ ವಿಳಂಬ ಸಮಸ್ಯೆ ಹೇಳಿಕೊಳ್ಳಲು ಶಿಕ್ಷಕರ ನಿಯೋಗ ಬೆಳಗ್ಗೆ ಮುಖ್ಯಮಂತ್ರಿ ನಿವಾಸದ ಬಳಿ ಬಂದಿತ್ತು. ಮೊರಾರ್ಜಿ ವಸತಿ ಶಾಲಾ ಶಿಕ್ಷಕರ ಹುದ್ದೆಗೆ ಹೆಚ್ಚುವರಿ ನೇಮಕಾತಿ ಪಟ್ಟಿ ಪ್ರಕಟ ವಿಳಂಬವಾಗುತ್ತಿದೆ. ಇದರಿಂದ ನೂರಾರು ಶಿಕ್ಷಕರಿಗೆ ತೊಂದರೆಯಾಗುತ್ತಿದೆ ಎಂಬುದನ್ನು ಸಿಎಂ ಬಳಿ ಸಮಸ್ಯೆ ಹೇಳಿಕೊಳ್ಳಲು ಬಂದಿದ್ದರು.


ಮುಖ್ಯಮಂತ್ರಿ ಮನೆಯಿಂದ ಹೊರಗೆ ಬರುತ್ತಿದ್ದಂತೆ ಅವರ ಮುಂದೆ ಸಮಸ್ಯೆ ಹೇಳಿಕೊಳ್ಳಲು ಶಿಕ್ಷಕರು ಮುಂದಾದಾಗ ಪೊಲೀಸರು ಅಡ್ಡಿ ಪಡಿಸಿದರು. ಅಕ್ಷರಶ: ಸಿಎಂ ಎದುರೇ ನೊಂದ ಅಭ್ಯರ್ಥಿಗಳನ್ನು ಎಳೆದು ಹೊರಗೆ ಹಾಕಲು ಪೊಲೀಸರು ಮುಂದಾದರು. ಇದರಿಂದ ಶಿಕ್ಷಕರು ಮುಖ್ಯಮಂತ್ರಿ ಎದುರೇ ಜೋರಾಗಿ ಕೂಗಾಡಿ ನೋವು ತೋಡಿಕೊಂಡರು. ತುರ್ತಾಗಿ ಹೋಗಬೇಕಿದ್ದರಿಂದ ಮುಖ್ಯಮಂತ್ರಿ ಕೂಡ ಗಡಿಬಿಡಿಯಲ್ಲಿದ್ದರು. ಕೊನೆಗೆ ಕಾರು ಹತ್ತಿದ್ದ ಸಿಎಂ ಕಾರಿಂದಿಳಿದು ಬಂದು ಸಮಸ್ಯೆ ಹೇಳಲು ಅವಕಾಶ ನೀಡಿ ಎಂದು ಪೊಲೀಸರಿಗೆ ಸೂಚಿಸಿದರು. ಆಗ ಶಿಕ್ಷಕರು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು.
ಬಳಿಕ ಮುಖ್ಯಮಂತ್ರಿ ಕಾರಿನಲ್ಲಿ ತೆರಳಿದರು.

Join Whatsapp