ಮುಂಬೈ: ಭಾರತದ ಕುರಿತು ಹೇಳಿಕೆ ನೀಡಿದ್ದ ಕಾಮಿಡಿಯನ್ ವೀರ್ ದಾಸ್ ವಿರುದ್ಧ ದೂರು ದಾಖಲಾಗಿದೆ.
‘ಭಾರತ, ಹಿಂದುತ್ವವನ್ನು ವೀರ್ ದಾಸ್ ಅಪಮಾನ ಮಾಡಿದ್ದಾರೆಂದು ಆರೋಪಿಸಿ ಮಹಾರಾಷ್ಟ್ರದ ಪಾಲಘಾರ್ ಜಿಲ್ಲೆ ಬಿಜೆಪಿಯ ಕಾನೂನು ಸಲಹೆಗಾರ ಹಾಗೂ ಮುಂಬೈ ಹೈಕೋರ್ಟ್ ವಕೀಲ ಆಶುತೋಷ್ ದುಬೆ ಎಂಬವರು ದೂರು ನೀಡಿದ್ದಾರೆ.
ವೀರ್ ದಾಸ್ ಕೆನಡಿ ಸೆಂಟರ್ ನಲ್ಲಿ ಮಾತನಾಡುತ್ತಾ, ‘‘ನಾನು ಎರಡು ರೀತಿಯ ಭಾರತದಿಂದ ಬಂದಿದ್ದೇನೆ. ಭಾರತದಲ್ಲಿ ಹಗಲು ವೇಳೆ ಸ್ತ್ರೀಯರನ್ನು ಪೂಜಿಸುತ್ತೇವೆ, ರಾತ್ರಿ ವೇಳೆ ಸ್ತ್ರೀಯರನ್ನು ಗ್ಯಾಂಗ್ ರೇಪ್ ಮಾಡುತ್ತೇವೆ. ಭಾರತದಲ್ಲಿ ಏರ್ ಕ್ವಾಲಿಟಿ ಇಂಡೆಕ್ಸ್ 900 ಇರುತ್ತದೆ, ಆದರೂ ರಾತ್ರಿ ಆಕಾಶದಲ್ಲಿ ನಕ್ಷತ್ರ ನೋಡಲು ಬಯಸುತ್ತೇವೆ. ನಾವು ಪರಸ್ಪರರನ್ನು ಆಲಂಗಿಸುತ್ತೇವೆ, ಆದರೆ ಮಾಸ್ಕ್ ಧರಿಸಲ್ಲ’’ ಎಂದು ಹೇಳಿದ್ದರು. ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಇದರ ಬೆನ್ನಲ್ಲೇ ವೀರ್ ಮಂಗಳವಾರ, ತಮ್ಮ ಹೇಳಿಕೆಯ ಕುರಿತು ಸ್ಪಷ್ಟನೆ ನೀಡಿದ್ದು, ತಮ್ಮ ಉದ್ದೇಶ ದೇಶವನ್ನು ಅಪಮಾನಿಸುವುದು ಆಗಿರಲಿಲ್ಲ ಎಂದಿದ್ದಾರೆ.
ಯಾವುದೇ ರಾಷ್ಟ್ರದಲ್ಲಿಯೂ ಬೆಳಕು ಮತ್ತು ಕತ್ತಲೆ, ಒಳ್ಳೆಯದು ಮತ್ತು ಕೆಟ್ಟದ್ದು ಇರುತ್ತದೆ. ಅದೇನೂ ಗುಟ್ಟಲ್ಲ. ನಾವು ಶ್ರೇಷ್ಠರು ಎಂಬುದನ್ನು ಎಂದಿಗೂ ಮರೆಯಬಾರದು. ನಮ್ಮನ್ನು ಶ್ರೇಷ್ಠರು ಎಂದು ಹೇಳುವುದರ ಮೇಲೆ ಕೇಂದ್ರೀಕರಿಸುವುದನ್ನು ಎಂದಿಗೂ ನಿಲ್ಲಿಸಬಾರದು. ನಾವೆಲ್ಲರೂ ಪ್ರೀತಿಸುವ, ನಂಬುವ ಮತ್ತು ಹೆಮ್ಮೆಪಡುವ ದೇಶಕ್ಕೆ ದೇಶಭಕ್ತಿಯ ಚಪ್ಪಾಳೆ ಹೊಡೆಯುತ್ತೇವೆ, ಅದೇ ಎಲ್ಲವೂ” ಎಂದು ವೀರ್ ದಾಸ್ ಅವರು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆ ಕೇಳಿದ್ದಾರೆ.
ಸದ್ಯ ಅಮೇರಿಕಾದಲ್ಲಿರುವ ಅವರು, ವಾಷಿಂಗ್ಟನ್ ಡಿಸಿಯ ಜಾನ್ ಎಫ್ ಕೆನಡಿ ಸೆಂಟರ್ ನಲ್ಲಿ ಮಾತನಾಡುವಾಗ ನೀಡಿದ ಹೇಳಿಕೆ ವಿವಾದ ಸೃಷ್ಟಿಸಿತ್ತು.