ಸಂಸದ ಪ್ರತಾಪ್ ಸಿಂಹ RSS ಸಂಸ್ಕೃತಿಯನ್ನು ಶಾಖೆಯಲ್ಲಿಟ್ಟು ಜನಪ್ರತಿನಿಧಿ ಎಂಬ ಪ್ರಜ್ಞೆಯಿಂದ ವರ್ತಿಸಲಿ: ಅಪ್ಸರ್ ಕೊಡ್ಲಿಪೇಟೆ

Prasthutha|

ಮಡಿಕೇರಿ: ಹಂಸಲೇಖ ಮುಸ್ಲಿಮರನ್ನು ಮನೆಗೆ ಕರೆಸಿ ಹಂದಿ ಮಾಂಸ ಬಡಿಸಲಿ ಎಂಬ ಸಂಸದ ಪ್ರತಾಪ್ ಸಿಂಹ ಅವರ ಪ್ರಚೋದನಕಾರಿ ಹೇಳಿಕೆಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತೀವ್ರವಾಗಿ ಖಂಡಿಸುತ್ತದೆ. ಪದೇ ಪದೇ ಸಂವಿಧಾನ ಮತ್ತು ಕಾನೂನು ಬಾಹಿರ ಹೇಳಿಕೆಗಳನ್ನು ನೀಡುತ್ತಿರುವ ಅವರ ಸಂಸತ್ ಸದಸ್ಯತ್ವವನ್ನು ಕೇಂದ್ರ ಚುನಾವಣಾ ಆಯೋಗ ರದ್ದು ಗೊಳಿಸಬೇಕು ಎಂದು ಎಸ್ ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಆಗ್ರಹಿಸಿದ್ದಾರೆ.

- Advertisement -

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅಪ್ಸರ್ ಕೊಡ್ಲಿಪೇಟೆ, ಸಂಸದ ಪ್ರತಾಪ್ ಸಿಂಹ ತಾನೋರ್ವ ಜನಪ್ರತಿನಿಧಿ ಎಂಬ ಪರಿಜ್ಞಾನದಿಂದ ಮಾತನಾಡಲಿ ಅದು ಬಿಟ್ಟು RSS ನ ಸಂಸ್ಕೃತಿಯನ್ನು ಸಾರ್ವಜನಿಕ ವಾಗಿ ಮಾತನಾಡದೆ ಅದನ್ನು ಶಾಖೆಯಲ್ಲಿಟ್ಟುಕೊಳ್ಳಲಿ. ಹಂಸಲೇಖ ಪೇಜಾವರ ಶ್ರೀ ಬಗ್ಗೆ ನೀಡಿದ ಹೇಳಿಕೆಯನ್ನು ಯಾವುದೇ ಮುಸಲ್ಮಾನರು ಸಮರ್ಥಿಸಿಲ್ಲ ಹಾಗೂ ಅವರಿಗೆ ಅದಕ್ಕಾಗಿ ಅಭಿನಂದನೆಯನ್ನು ಸಲ್ಲಿಸಿಯೂ ಇಲ್ಲ, ಆದರೆ ಸಂಸದ ಪ್ರತಾಪ್ ಸಿಂಹ ತಾನು ಸರ್ವ ಜನರ ಜನಪ್ರತಿನಿಧಿ ಎಂಬ ಪರಿಜ್ಞಾನ ಇಲ್ಲದೆ ಪರಸ್ಪರ ಕೋಮು ಧ್ರುವೀಕರಣ ಮಾಡುವಂತಹ ಹೇಳಿಕೆಯನ್ನು ನೀಡಿ ಈಗಾಗಲೇ ಸಂಘಪರಿವಾರದ ಗೂಂಡಾಗಿರಿ, ಅನೈತಿಕ ಪೋಲಿಸ್ ಗಿರಿ, ಕೋಮು ಪ್ರಚೋದನಕಾರಿ ಹೇಳಿಕೆಗಳಿಂದ ಅಶಾಂತಿ ತಲೆದೋರಿರುವ ರಾಜ್ಯದಲ್ಲಿ ಇನ್ನಷ್ಟು ಶಾಂತಿಯನ್ನು ಕದಡಿಸಲು ಪ್ರೇರೇಪಣೆ ನೀಡುತ್ತಿರುವುದು ಖಂಡನಾರ್ಹ ಎಂದರು.

ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿ ಸಂಪೂರ್ಣ ವಾಗಿ ವೈಫಲ್ಯವನ್ನು ಕಂಡಿದೆ, ಇದರ ಪರಿಣಾಮವಾಗಿ ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ ಹಲವಾರು ಕಡೆಗಳಲ್ಲಿ ಬಿಜೆಪಿ ನೆಲಕಚ್ಚಿದೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸಿ ಕೋಮುಗಲಭೆ ನಡೆಸಿ ರಾಜಕೀಯ ಲಾಭ ಪಡೆಯುವ ಹುನ್ನಾರದ ಭಾಗವಾಗಿ ಇಂತಹ ಹೇಳಿಕೆಗಳು ಸಂಸದರ ಬಾಯಿಯಿಂದ ಹೊರ ಬೀಳುತ್ತಿದೆ ಎಂದು ಅಫ್ಸರ್ ಆರೋಪಿಸಿದರು.
ಬಿಟ್ ಕಾಯಿನ್ ಹಗರಣದಲ್ಲಿ ಬಿಜೆಪಿ ಪಕ್ಷದ ಶಾಸಕರು, ಸಂಸದರು ಹಾಗೂ ಮುಖ್ಯಮಂತ್ರಿಯ ಹೆಸರು ಮುನ್ನಲೆಗೆ ಬಂದಿರುವ ಈ ಸಂದರ್ಭದಲ್ಲಿ ಅದರ ಬಗ್ಗೆ ತುಟಿ ಬಿಚ್ಚದೆ ಹಾಗೂ ಅದನ್ನು ಮರೆಮಾಚುವ ಸಂಚಿನ ಭಾಗವಾಗಿ ಇಂತಹ ಹೇಳಿಕೆಯನ್ನು ನೀಡುತ್ತಿರುವುದೆಂದು ಪ್ರಜ್ಞಾವಂತ ಮತದಾರರು ಅರ್ಥ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಮತ್ತು ತನ್ನ ತವರು ಕ್ಷೇತ್ರದಲ್ಲಿ ಮಕ್ಕಳು, ಮಹಿಳೆಯರ ಮೇಲಿನ ಅತ್ಯಾಚಾರ, ಸಂಘಪರಿವಾರದ ಗೂಂಡಾಗಿರಿಯನ್ನು ತಡೆಯಲು ಅಸಮರ್ಥ ನಾಗಿರುವ ಇವರು ಕಾಂಗ್ರೆಸ್ ಸಂಸದೆ ಪ್ರಿಯಾಂಕ್ ಖರ್ಗೆಯ ಬಗ್ಗೆ ಕೂಡ ಅವಹೇಳನಕಾರಿಯಾಗಿ ಮಾತನಾಡಿ ತಾನೋರ್ವ RSS ನ ಸಂಸ್ಕೃತಿ ಪಾಲಿಸಿಕೊಂಡು ಬರುತ್ತಿರುವವನೆಂದು ಪದೇ ಪದೇ ನಿರೂಪಿಸಿ ಸಾರ್ವಜನಿಕ ವಾಗಿ ಬೆತ್ತಲಾಗುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

- Advertisement -

ಇಂತಹ ಸಂಸದರಿಗೆ ಬುದ್ದಿ ಹೇಳಬೇಕಾದ ಬಿಜೆಪಿ ಪಕ್ಷದ ಹೈಕಮಾಂಡ್ ಇವರಿಗಿಂತಲೂ ಕಡೆಯಾಗಿ ವರ್ತಿಸುತ್ತಿದೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಮತದಾರರೇ ಇವರಿಗೆ ಸರಿಯಾದ ಪಾಠ ಕಲಿಸಲಿದ್ದಾರೆ. ಹಾಗೂ ಪದೇ ಪದೇ ಕೋಮು ಪ್ರಚೋದನಕಾರಿಯಾಗಿ ಮಾತನಾಡಿ ರಾಜ್ಯದಲ್ಲಿ ಕೋಮು ಗಲಭೆ ನಡೆಸಲು ಯತ್ನಿಸುತ್ತಿರುವ ಪ್ರತಾಪ್ ಸಿಂಹ ನ ಸಂಸತ್ ಸದಸ್ಯತನವನ್ನು ಚುನಾವಣಾ ಆಯೋಗ ರದ್ದು ಗೊಳಿಸಬೇಕೆಂದು ಅವರು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಮುಸ್ತಫ, ಮಡಿಕೇರಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಉಸ್ಮಾನ್ ಸುಂಠಿಕೊಪ್ಪ,
ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯ ಹನೀಫ್, ನಗರಸಭಾ ಸದಸ್ಯ ಮನ್ಸೂರ್, ಮಡಿಕೇರಿ ನಗರ ಸಮಿತಿ ಸದಸ್ಯ ತೆಹಿಶೀರ್ ಉಪಸ್ಥಿತರಿದ್ದರು.



Join Whatsapp