ಶ್ರೀಕಿ ಹ್ಯಾಕಿಂಗ್ ಮಾಡಿದ್ದ 12 ಕಂಪನಿಗಳಿಗೆ ಪತ್ರ ಬರೆದ ಸಿಸಿಬಿ

Prasthutha|

ಬೆಂಗಳೂರು: ಬಹುಕೋಟಿ ಬಿಟ್ ಕಾಯಿನ್ ಹಗರಣದ ಸಂಬಂಧ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಬರೋಬ್ಬರಿ 12 ಕಂಪನಿಗಳನ್ನು ಹ್ಯಾಕಿಂಗ್ ಮಾಡಿರುವುದು ಬೆಳಕಿಗೆ ಬಂದಿದೆ.
ಹ್ಯಾಕರ್ ಶ್ರೀಕಿ ಹ್ಯಾಕಿಂಗ್ ಮಾಡಿರುವ ಸಂಬಂಧಿಸಿದಂತೆ 12 ಕಂಪನಿಗಳಿಗೆ ಸಿಸಿಬಿ ಅಧಿಕಾರಿಗಳು ವಿವರವಾದ ಪತ್ರ ಬರೆದಿದ್ದಾರೆ.

- Advertisement -


ಸಿಸಿಬಿ ಅಧಿಕಾರಿಗಳ ಇಂಟರ್ ಪೋಲ್ ಪತ್ರಕ್ಕೆ ಎಕ್ಸ್ಚೇಂಜ್ ಅಧಿಕಾರಿಗಳು ಕ್ಯಾರೇ ಎಂದಿಲ್ಲ ಆದರೆ ಜಪಾನ್ ಮೂಲದ ಕಂಪನಿಯೊಂದು ಪ್ರತಿಕ್ರಿಯೆ ನೀಡಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಈ ನಡುವೆ ಹ್ಯಾಕರ್ ಶ್ರೀಕಿ 12 ಕಂಪನಿಗಳ ವೆಬ್ ಸೈಟ್ ಹ್ಯಾಕ್ ಮಾಡಿದ್ದು ಆತನ ವಿರುದ್ಧ ಇಂಟರ್ ಪೋಲ್ ನಿಂದ ಕ್ರಮಕೈಗೊಳ್ಳಿ ಎಂದು ನಗರ ಪೊಲೀಸ್ ಆಯುಕ್ತ ಅವರಿಗೆ ತನಿಖಾಧಿಕಾರಿ ಇನ್ಸ್ ಪೆಕ್ಟರ್ ಚಂದ್ರಾದರ್ ಪತ್ರದ ಮೂಲಕ ಮನವಿ ಸಲ್ಲಿಸಿದ್ದರು.


ಶ್ರೀಕಿ, ದೇಶ, ವಿದೇಶದಲ್ಲಿ ಸಾಕಷ್ಟು ಹ್ಯಾಕಿಂಗ್ ಮಾಡಿದ್ದಾನೆ. ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿ ಕೂಡ ವಂಚನೆಮಾಡಿದ್ದು, ತನಿಖಾ ವ್ಯಾಪ್ತಿಯು ಹೆಚ್ಚಾಗಿರುದರಿಂದ ನಾವು ತನಿಖೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಇಂಟರ್ ಪೋಲ್ಗೆ ಪತ್ರ ಬರೆಯಲಾಗಿದೆ ಎಂದು ತಿಳಿದುಬಂದಿದೆ.
ಈ ನಡುವೆ ಹೋಟೆಲ್ ಸಿಬ್ಬಂದಿಗೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧಿತನಾಗಿದ್ದ ಹ್ಯಾಕರ್ ಶ್ರೀಕಿ ಬಳಸುತ್ತಿದ್ದ ಲ್ಯಾಪ್ಟಾಪ್ ಅನ್ನು ಸಿಐಡಿಗೆ ರವಾನಿಸಲಾಗಿದೆ.

- Advertisement -

ಫೈವ್ ಸ್ಟಾರ್ ಹೋಟೆಲ್ನಲ್ಲಿ ಉಳಿದುಕೊಂಡಿದ್ದ ಶ್ರೀಕಿ ಹಾಗೂ ಭೀಮಾ ಜ್ಯುವೆಲರ್ಸ್ ಮಾಲೀಕರ ಮಗ ವಿಷ್ಣು ಭಟ್ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿತ್ತು.
ಹೋಟೆಲ್ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಜೀವನ್ ಭೀಮಾನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಸದ್ಯ ಜಾಮೀನಿನ ಮೇಲೆ ಶ್ರೀಕಿ ಹೊರಬಂದಿದ್ದು ಆತನ ಲ್ಯಾಪ್ಟಾಪ್ ವಶಪಡಿಸಿಕೊಂಡಿರುವ ಸಿಐಡಿ ಅಧಿಕಾರಿಗಳು, ಪರಿಶೀಲನೆಗೆ ಮುಂದಾಗಿದ್ದಾರೆ.
ಬಿಟ್ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳ ಆರೋಪಗಳ ನಡುವೆಯೇ ನಗರ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದು, ಇಂಟರ್ಪೋಲ್ನೊಂದಿಗಿನ ಸಂವಹನದಲ್ಲಿ ಕಂಡು ಬಂದ ಅಪರಾಧ ಸಂಖ್ಯೆಯಲ್ಲಿನ ತಪ್ಪು ಮುದ್ರಣ ದೋಷವಾಗಿದೆ ಎಂದು ತಿಳಿಸಿದೆ.

Join Whatsapp