‘ಬಿಟ್ ಕಾಯಿನ್’ ಸ್ಕ್ಯಾಮ್ ಎನ್ನುವುದು ಒಂದು “ಭೂತ ಬಂತು ಭೂತ” ಕಥೆ ಎಂದ ಕಾರಜೋಳ

Prasthutha|

ಬೆಂಗಳೂರು: ಬಿಟ್ ಕಾಯಿನ್ ಒಂದು ಸ್ಕ್ಯಾಮ್ ಅಲ್ಲ. ಇದು ಸೈಬರ್ ಕ್ರೈಮ್ ಆಗಿದೆ. ಶ್ರೀಕಿ ಒಬ್ಬ ಹ್ಯಾಕರ್. ಸರ್ಕಾರಿ ಸೈಟ್ ಅನ್ನು ಹ್ಯಾಕ್ ಮಾಡಿಕೊಂಡಿರುವುದಾಗಿ ಆತನೇ ಹೇಳಿಕೊಂಡಿದ್ದಾನೆ. ಕಿಂಗ್ ಪಿನ್ ಶ್ರೀಕಿಯನ್ನು ಬಿಟ್ ಕಾಯಿನ್ ಬಳಕೆಯಿಂದ ಮಾದಕವಸ್ತು ಕಳ್ಳಸಾಗಣೆಗಾಗಿ NDPS ಕಾಯ್ದೆಯ ಅಡಿಯಲ್ಲಿ ಬಂಧಿಸಲಾಗಿದೆ. ಪ್ರತಿಪಕ್ಷಗಳು ಮಾಡುತ್ತಿರುವ ʼಬಿಟ್ ಕಾಯಿನ್ʼ ಸ್ಕ್ಯಾಮ್ ಎನ್ನುವುದು ಒಂದು “ಭೂತ ಬಂತು ಭೂತ’ ಎಂದು ಮಕ್ಕಳನ್ನು ಹೆದರಿಸುವ ಆಟಿಕೆಯಂತಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

- Advertisement -


ಭೂತ ಏನು ಎಂಬುದನ್ನು ಆಪಾದನೆ ಮಾಡುತ್ತಿರುವ ಪ್ರತಿಪಕ್ಷಗಳು ಮೊದಲು ಸಾಮಾನ್ಯ ಜನರಿಗೆ ಅರ್ಥ ಆಗುವ ಎಲ್ಲ ವಿವರ ಮತ್ತು ಆಧಾರಗಳೊಂದಿಗೆ ಸ್ಪಷ್ಟೀಕರಿಸಲಿ ಎಂದು ಹೇಳಿದ ಸಚಿವರು, ಈ ಸ್ಕ್ಯಾಂನ ಬಗ್ಗೆ ಇರುವ ಪುರಾವೆಗಳನ್ನು ತನಿಖಾ ಸಂಸ್ಥೆಗಳಿಗೆ ಪ್ರತಿಪಕ್ಷಗಳು ನೀಡಲಿ. ಅದನ್ನು ಬಿಟ್ಟು ಸುಮ್ಮನೆ ಬಿಟ್ ಕಾಯಿನ್ ಸ್ಕ್ಯಾಮ್ ಅಂದರೆ ಯಾರಿಗೂ ಅಂಜಿಕೆಯಿಲ್ಲ. ಏಕೆಂದರೆ ನಾವು ಇದನ್ನಾಗಲೇ ತನಿಖಾ ಸಂಸ್ಥೆಗಳಿಗೆ ವರ್ಗಾಯಿಸಿದ್ದೇವೆ. ನಮ್ಮಲ್ಲಿ ಮುಚ್ಚಿಡುವುದು ಏನೂ ಇಲ್ಲ ಎಂದರು.


ಇದೊಂದು ಪ್ರಗತಿಯ ಹಂತದಲ್ಲಿರುವ ತನಿಖೆ. ಹೀಗಾಗಿ ಪ್ರತಿಪಕ್ಷಗಳು ಮಾಡುತ್ತಿರುವ ಹುರುಳಿಲ್ಲದ ಹಾಗೂ ತಿರುಳಿಲ್ಲದ ಆರೋಪಗಳಿಗೆ ನಾವು ಉತ್ತರಿಸುವ ಅವಶ್ಯಕತೆ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸರ್ಕಾರ ಈ ವಿಚಾರದಲ್ಲಿ ಮುಕ್ತ ಮನಸ್ಸು ಹೊಂದಿದೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಪ್ರತಿಪಕ್ಷಗಳು ಮಾಡುತ್ತಿರುವ ಆರೋಪಗಳನ್ನು ಸಾಬೀತುಪಡಿಸುವ ಜವಾಬ್ದಾರಿ ಅವರ ಮೇಲೆಯೇ ಇದೆ ಎಂದು ಕಾರಜೋಳ ಹೇಳಿದರು.

Join Whatsapp