ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಅನೈತಿಕ ಪೊಲೀಸ್ ಗಿರಿ; ಮುಸ್ಲಿಮ್ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

Prasthutha|

ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ ಮುಂದುವರಿದಿದ್ದು, ಯುವತಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಯುವಕನ ಮೇಲೆ ಬೈಕ್ ನಲ್ಲಿ ಬಂದ ಸಂಘಪರಿವಾರದ ಕಾರ್ಯಕರ್ತರು ಏಕಾಏಕಿ ಹಲ್ಲೆ ನಡೆಸಿದ ಘಟನೆ ಕೊಡಗು ಜಿಲ್ಲೆಯ ಮಾದಾಪುರ ಎಂಬಲ್ಲಿ ನಡೆದಿದೆ.

- Advertisement -


ಮಾದಾಪುರ ನಿವಾಸಿ ರಶೀದ್ ಎಂಬವರು ಸೋಮವಾರ ಬೆಳಗ್ಗೆ ನಡೆದುಕೊಂಡು ಹೋಗುತ್ತಿದ್ದಾಗ ಅದೇ ದಾರಿಯಲ್ಲಿ ಹೋಗುತ್ತಿದ್ದ ಮುಸ್ಲಿಮ್ ಯುವತಿಯೊಂದಿಗೆ ಮಾತನಾಡುತ್ತಾ ಮುನ್ನಡೆದಿದ್ದಾರೆ. ಇದನ್ನು ಗಮನಿಸಿದ 10ರಿಂದ 15 ಮಂದಿ ಸಂಘಪರಿವಾರದ ಕಾರ್ಯಕರ್ತರು ಆಕೆಯನ್ನು ಹಿಂದೂ ಯುವತಿ ಎಂದು ಭಾವಿಸಿ ಯುವಕನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.


ತೀವ್ರ ಗಾಯಗೊಂಡ ಯುವಕನನ್ನು ಸ್ಥಳೀಯರು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಆಸ್ಪತ್ರೆಗೆ ಆಗಮಿಸಿ ಯುವಕನ ಹೇಳಿಕೆ ಪಡೆದುಕೊಂಡಿದ್ದಾರೆ. ಎಸ್ ಡಿಪಿಐ ಜಿಲ್ಲಾ ನಿಯೋಗ ಆಸ್ಪತ್ರೆಗೆ ಭೇಟಿ ನೀಡಿ ಯುವಕನ ಆರೋಗ್ಯ ವಿಚಾರಿಸಿದೆ. ನಿಯೋಗದಲ್ಲಿ ಜಿಲ್ಲಾ ಮುಖಂಡರಾದ ಮನ್ಸೂರ್, ಖಲೀಲ್, ಅಬ್ದುರ್ರಹ್ಮಾನ್ ಅಡ್ಕರ್, ಅಮೀನ್ ಮುಹ್ಸಿನ್ ಇದ್ದರು.ಮುಸ್ಲಿಮ್ ಯುವಕನ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕು. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಸಂಘಪರಿವಾರದ ನೈತಿಕ ಪೊಲೀಸ್ ಗಿರಿಯನ್ನು ಮಟ್ಟಹಾಕಬೇಕು ಎಂದು ನಿಯೋಗ ಒತ್ತಾಯಿಸಿದೆ.



Join Whatsapp