ತ್ರಿಪುರಾ ಹಿಂಸಾಚಾರ ಕುರಿತ ವರದಿಗಾರಿಕೆ | ಇಬ್ಬರು ಮಹಿಳಾ ಪತ್ರಕರ್ತೆಯರನ್ನು ವಶಕ್ಕೆ ಪಡೆದ ಪೊಲೀಸರು

Prasthutha|

VHP ನಾಯಕನ ದೂರು ಆಧರಿಸಿ ಎಫ್ಐಆರ್

- Advertisement -

ಅಸ್ಸಾಂ: ತ್ರಿಪುರಾ ಹಿಂಸಾಚಾರ ಕುರಿತ ವರದಿಗಾರಿಕೆ ವಿರುದ್ಧ ವಿಶ್ವ ಹಿಂದೂ ಪರಿಷತ್ ನಾಯಕನೊಬ್ಬ ನೀಡಿದ ದೂರಿನ ಆಧಾರದ ಮೇಲೆ ತ್ರಿಪುರಾ ಪೊಲೀಸರಿಂದ ಎಫ್ಐಆರ್ ಹಾಕಿಸಲ್ಪಟ್ಟಿದ್ದ ಇಬ್ಬರು ಯುವ ಪತ್ರಕರ್ತೆಯರನ್ನು ಅಸ್ಸಾಂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಪತ್ರಕರ್ತೆಯರು ಕಾರ್ಯ ನಿರ್ವಹಿಸುತ್ತಿರುವ ಸುದ್ದಿ ಸಂಸ್ಥೆ ಹೆಚ್ ಡಬ್ಲ್ಯು ನ್ಯೂಸ್ ನೆಟ್ ವರ್ಕ್ ಟ್ವೀಟ್ ಮೂಲಕ ಸ್ಪಷ್ಟಪಡಿಸಿದೆ.

ತ್ರಿಪುರಾದಿಂದ ಅಸ್ಸಾಂ ನ ಸಿಲ್ಚಾರ್ ಕಡೆಗೆ ತೆರಳುತ್ತಿದ್ದ ವೇಳೆ ಅಸ್ಸಾಂ ರಾಜ್ಯದ ಪೊಲೀಸರು ವಶಕ್ಕೆ ಪಡೆದಿದ್ದಾಗಿ ಸಂಸ್ಥೆಯು ತಿಳಿಸಿದೆ. ಅಲ್ಲದೇ, ಇದೇ ಟ್ವೀಟ್ ಅನ್ನು ರೀ-ಟ್ವೀಟ್ ಮಾಡುವ ಮೂಲಕ ಪೊಲೀಸರ ವಶದಲ್ಲಿರುವ ಪತ್ರಕರ್ತೆಯರಾದ ಸಮೃದ್ಧಿ ಸಕುನಿಯಾ ಹಾಗೂ ಸ್ವರ್ಣ ಝಾ ತಮ್ಮನ್ನು ವಶಕ್ಕೆ ಪಡೆದಿರುವುದನ್ನು ಖಚಿತಪಡಿಸಿದ್ದಾರೆ.

- Advertisement -

“ನಮ್ಮನ್ನು ಅಸ್ಸಾಮಿನ ನೀಲಂ ಬಜಾರ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೋಮತಿ (ತ್ರಿಪುರಾ) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶದ ಮೇರೆಗೆ ನಮ್ಮನ್ನು ವಶಕ್ಕೆ ಪಡೆದಿದ್ದಾಗಿ ಪೊಲೀಸರು ತಿಳಿಸಿದ್ದಾರೆ” ಎಂದು ಸಮೃದ್ಧಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಈ ಇಬ್ಬರು ಪತ್ರಕರ್ತೆಯರಿಗೆ ಇಂದು ಬೆಳಿಗ್ಗೆಯಷ್ಟೇ ತ್ರಿಪುರಾದ ಫತಿಕ್ರೋಯ್ ಠಾಣಾ ಪೊಲೀಸರು ನೋಟೀಸ್ ನೀಡಿದ್ದರು. ಅಲ್ಲದೇ, ನವೆಂಬರ್ 21 ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದರು. ಆದರೆ ಅಗರ್ತಾಲದಿಂದ ಹೊರ ಹೋಗದಂತೆ ಅವರನ್ನು ಬೆದರಿಸಲಾಗಿತ್ತು ಅನ್ನೋದಾಗಿ ಪತ್ರಕರ್ತೆಯರು ದೂರಿದ್ದರು.

ಅಲ್ಲದೇ, ಪತ್ರಕರ್ತೆಯರ ವಿರುದ್ಧ ಐಪಿಸಿ ಸೆಕ್ಷನ್ 120B, 153A ಹಾಗೂ 504 ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಲಾಗಿತ್ತು.

ನಿನ್ನೆಯಷ್ಟೇ ತ್ರಿಪುರಾದಲ್ಲಿ ಸಂಘ ಪರಿವಾರದಿಂದ ದಾಳಿಗೊಳಗಾದ ಮಸೀದಿ ಹಾಗೂ ಮುಸ್ಲಿಮರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದ ಈ ಇಬ್ಬರು ಪತ್ರಕರ್ತೆಯರು ಶೀಘ್ರವೇ ವರದಿ ಪ್ರಸಾರವಾಗಲಿರುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದರು. ಅದಾದ ಬಳಿಕ ವಿಶ್ವ ಹಿಂದೂ ಪರಿಷತ್ ನಾಯಕ ಕಾಂಚನ್ ದಾಸ್ ಎಂಬಾತ ಇವರಿಬ್ಬರ ಮೇಲೆ ದೂರು ನೀಡಿದ್ದನು.

ದೂರು ದಾಖಲಿಸಿಕೊಂಡ ಪೊಲೀಸರು ನಿನ್ನೆ ತಡರಾತ್ರಿಯೇ ಪತ್ರಕರ್ತೆಯರು ತಂಗಿದ್ದ ಹೊಟೇಲ್ ಗೆ ಆಗಮಿಸಿ, ಇಂದು ಮುಂಜಾವವೇ ನೋಟೀಸ್ ನೀಡಿದ್ದರು. ಈ ವೇಳೆ ನಮ್ಮನ್ನು ಪೊಲೀಸರು ಅನಗತ್ಯವಾಗಿ ಬೆದರಿಸಿದ್ದಾಗಿ ಪತ್ರಕರ್ತೆಯರು ದೂರಿದ್ದರು.

“ಇದು ವಸ್ತುನಿಷ್ಟ ಸುದ್ದಿ ಮಾಡುವವರ ಮೇಲಿನ ಮುಂದುವರಿದ ದಾಳಿಯಾಗಿದೆ. ಈ ರೀತಿಯ ದೌರ್ಜನ್ಯ ಹಾಗೂ ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿ ಅಕ್ಷಮ್ಯ” ಎಂದು ಹೆಚ್ ಡಬ್ಲ್ಯು ನ್ಯೂಸ್ ನೆಟ್ ವರ್ಕ್ ತಿಳಿಸಿದೆ.



Join Whatsapp