ಹಿಂದೂ-ಮುಸ್ಲಿಮ್ ಬಾಂಧವ್ಯದ ಹರಿಕಾರ ಮೌಲಾನಾ ಆಝಾದ್

Prasthutha|

ಮೌಲಾನಾ ಅಬ್ದುಲ್ ಕಲಾಮ್ ಮುಹಿಯುದ್ದೀನ್ ಅಹ್ಮದ್ ಬಿನ್ ಖೈರುದ್ದೀನ್ ಅಲ್ ಹುಸೈನಿ ಆಜಾದ್ ಹುಟ್ಟಿದ ದಿನ ನವೆಂಬರ್ 11. ಭಾರತದಲ್ಲಿ ಅವರ ಜನ್ಮ ದಿನವನ್ನು ರಾಷ್ಟ್ರೀಯ ಶಿಕ್ಷಣ ದಿನವಾಗಿ ಆಚರಿಸಲಾಗುತ್ತದೆ. ಅದಕ್ಕೆ ಸಿಗುವ ಪ್ರಚಾರ ಮಾತ್ರ ದೇಶ ಮಟ್ಟದಲ್ಲಿ ಸ್ವಲ್ಪ ಕಡಿಮೆಯೇ. ದೇಶದಲ್ಲಿ ಶಿಕ್ಷಣ ಎಲ್ಲರಿಗೆ ಸಲ್ಲ, ಎಲ್ಲರಿಗಲ್ಲ ಎಂಬ ಸಂಸ್ಕೃತಿ ಇತ್ತು. ಆ ಮನೋಭಾವ ಇಂದಿಗೂ ಹಲವರಲ್ಲಿ ತೊಲಗಿಲ್ಲವಾದ್ದರಿಂದ ರಾಷ್ಟ್ರೀಯ ಶಿಕ್ಷಣ ದಿನವು ಜನಸಾಮಾನ್ಯರ ಮಟ್ಟಕ್ಕೆ ಮುಟ್ಟಿಲ್ಲ.

- Advertisement -


ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವರಾಗಿದ್ದ ಆಜಾದ್ ರಿಗೆ ಈ ಶಿಕ್ಷಣ ವಂಚಿತ ಜನರ ಬಗ್ಗೆ ಗೊತ್ತಿತ್ತು. ಮುಸ್ಲಿಮ್ ಅರಸರಂತೂ ಬ್ರಾಹ್ಮಣ ಮಂತ್ರಿ ಮತ್ತು ಕ್ಷತ್ರಿಯ ಸೇನಾಪತಿಗಳನ್ನು ನಂಬಿ ಆಡಳಿತ ನಡೆಸಿದವರು. ಮುಸ್ಲಿಮರಲ್ಲಿ ಆಧುನಿಕ ಶಿಕ್ಷಣವು ಪ್ರಚಾರವಾಗಬೇಕು, ಜನಸಾಮಾನ್ಯರಿಗೂ ಕಲಿಕೆ ಎಟುಕಬೇಕು ಎಂಬ ದೃಷ್ಟಿಕೋನದವರು ಆಜಾದ್. ಅದಕ್ಕಾಗಿ ತನ್ನನ್ನು ಅರ್ಪಿಸಿಕೊಂಡ ಅವರು, ಕಾಂಗ್ರೆಸ್ ನ ಸ್ವಾತಂತ್ರ್ಯ ಹೋರಾಟದಲ್ಲೂ ತೊಡಗಿಕೊಂಡವರು.
ಸ್ವತಂತ್ರ ಭಾರತದ ಮೊದಲ ಸರಕಾರ ರಚನೆಯಾದಾಗ ವಿದ್ಯಾ ಮಂತ್ರಿಯಾಗಿ ಆಜಾದ್ ರನ್ನಲ್ಲದೆ ಬೇರೆಯವರನ್ನು ಮಾಡಲು ಆಯ್ಕೆಯೇ ಇರಲಿಲ್ಲ. ಆಜಾದ್ ರ ಬಗ್ಗೆ ಸಾವಿರ ವಿಷಯಗಳನ್ನು ಹೇಳಬಹುದಾದರೂ ಅವರ ಬಗೆಗಿನ ಕೆಲವು ಗಮನಾರ್ಹವಾದ ವಿಷಯಗಳನ್ನು ಮೊದಲು ಗಮನಿಸಬೇಕಾಗುತ್ತದೆ.
2008ರಿಂದ ಪ್ರತಿ ವರ್ಷ ನವೆಂಬರ್ 11ನ್ನು ರಾಷ್ಟ್ರೀಯ ಶಿಕ್ಷಣ ದಿನವಾಗಿ ಆಚರಿಸಲಾಗುತ್ತದೆ. ಅವರು ಸ್ವತಂತ್ರ ಭಾರತ ಮೊದಲ ಶಿಕ್ಷಣ ಸಚಿವರಾಗಿ ಒಂದು ದಶಕ ಎಂದರೆ 1947ರಿಂದ 1958ರವರೆಗೆ ಸೇವೆ ಸಲ್ಲಿಸಿದವರು. 1992ರಲ್ಲಿ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಸಂದಿದೆ.


ಭಾರತದ ಶಿಕ್ಷಣ ಮಂತ್ರಿ ಆಗಿದ್ದ ಅವರು ಪತ್ರಕರ್ತ, ಸ್ವಾತಂತ್ರ್ಯ ಹೋರಾಟಗಾರ, ಲೇಖಕ, ರಾಜಕಾರಣಿ, ಶಿಕ್ಷಣ ತಜ್ಞ ಎಂದು ಹಲವು ಕ್ಷೇತ್ರಗಳಲ್ಲಿ ಕೃಷಿ ಮಾಡಿ ಗೆದ್ದವರು. ಭಾರತದ ಶಿಕ್ಷಣ ಕ್ಷೇತ್ರವನ್ನು ಸುಧಾರಿಸಿದ ಆಜಾದ್ ಅವರ ಬಗೆಗಿನ ಅಷ್ಟಾಗಿ ಪ್ರಚಾರದಲ್ಲಿಲ್ಲದ ಐದು ವಿಚಾರಗಳತ್ತ ನಾವು ಈಗ ಒಂದು ನೋಟ ಹರಿಸೋಣ.

- Advertisement -


ಸೌದಿ ಅರೇಬಿಯಾದ ಮಕ್ಕಾದಲ್ಲಿ ಹುಟ್ಟಿದ ಮೌಲಾನಾ ಆಜಾದ್

ಮೌಲಾನಾ ಆಜಾದ್ ಅವರು 1888ರಲ್ಲಿ ಹುಟ್ಟಿದ್ದು ಮಕ್ಕಾದಲ್ಲಿ. ಅವರ ತಾಯಿ ಅರಬ್, ಶೇಖ್ ಮುಹಮ್ಮದ್ ಝಹರ್ ವಾತ್ರಿಯವರ ಮಗಳು ತಂದೆ ಮೌಲಾನಾ ಖೈರುದ್ದೀನ್ ಅಫಘಾನಿಸ್ತಾನ ಮೂಲದ ಬಂಗಾಳಿ ಮುಸ್ಲಿಮರು. ಸಿಪಾಯಿ ದಂಗೆಯ ಬಳಿಕ ಈ ದಂಪತಿ ಮಕ್ಕಾಕ್ಕೆ ಹೋಗಿ ಅಲ್ಲಿಯೇ ನೆಲೆ ನಿಂತರು. ಅಬ್ದುಲ್ ಕಲಾಮ್ ಆಜಾದ್ ಅವರಿಗೆ ಎರಡು ವರ್ಷವಿದ್ದಾಗ ಖೈರುದ್ದೀನ್ ರು 1890ರಲ್ಲಿ ಕೊಲ್ಕತ್ತಾಕ್ಕೆ ಹಿಂದಿರುಗಿದರು.


ಮನೆಯಲ್ಲೇ ಓದಿದ ಹಲವು ಭಾಷೆ ಬಲ್ಲ ಮೌಲಾನಾ ಆಜಾದ್
ಆಜಾದ್ ಅವರು ಪಾರಂಪರಿಕ ಮುಸ್ಲಿಮ್ ಶಿಕ್ಷಣ ಪಡೆದವರು. ಮನೆಯಲ್ಲೇ ಅವರಿಗೆ ಶಿಕ್ಷಣ ಆಯಿತು. ಮೊದಲ ಶಿಕ್ಷಕ ಅವರ ತಂದೆಯೇ, ಅನಂತರ ನಾನಾ ವಿಷಯ ತಜ್ಞರಿಂದ ಮನೆ ಪಾಠ ನಡೆಯಿತು. ಅರೆಬಿಕ್, ಪರ್ಶಿಯನ್, ತತ್ವಶಾಸ್ತ್ರ, ಜ್ಯಾಮಿತಿ ಗಣಿತ, ಗಣಿತ, ಬೀಜ ಗಣಿತ. ಅಲ್ಲದೆ ಅವರು ಇಂಗ್ಲಿಷ್, ಲೋಕ ಇತಿಹಾಸ, ಪೌರ ನೀತಿ ರಾಜಕಾರಣ ಶಾಸ್ತ್ರವನ್ನೂ ಕಲಿತರು.
ಹಿಂದೂ ಮುಸ್ಲಿಂ ಒಗ್ಗಟ್ಟಿಗಾಗಿ ಅಲ್ ಹಿಲಾಲ್, ಅಲ್ ಬಲಗ್ ಪತ್ರಿಕೆ ಆರಂಭಿಸಿದ ಆಜಾದ್
ಮುಸ್ಲಿಮರಲ್ಲಿ ಸಾಕಷ್ಟು ಕ್ರಾಂತಿಕಾರಿಗಳನ್ನು ತಯಾರಿಸಲು 1912ರಲ್ಲಿ ಆಜಾದ್ ರು ಅಲ್ ಹಿಲಾಲ್ ಎಂಬ ಉರ್ದು ಪತ್ರಿಕೆಯನ್ನು ಆರಂಭಿಸಿದರು. ಮಿಂಟೋ ಮಾರ್ಲೆ ಸುಧಾರಣಾ ವ್ಯಾಖ್ಯೆಯ ಬಳಿಕ ಹಿಂದೂ ಮತ್ತು ಮುಸ್ಲಿಮರಲ್ಲಿ ಉಂಟಾಗಿದ್ದ ವೈರ ಗಲಾಟೆಯನ್ನು ತಣ್ಣಗಾಗಿಸುವಲ್ಲಿ ಅಲ್ ಹಿಲಾಲ್ ಪ್ರಮುಖ ಪಾತ್ರವನ್ನು ವಹಿಸಿತು. ಕ್ರಾಂತಿಕಾರಿ ವಿಷಯಗಳಿಂದ, ಸ್ವಾತಂತ್ರ್ಯ ಸಂಗತಿಗಳಿಂದ ಅಲ್ ಹಿಲಾಲ್ ಪತ್ರಿಕೆ ಪ್ರಚಾರದ ಮೇಲೆ ಬ್ರಿಟಿಷರ ವಕ್ರ ದೃಷ್ಟಿ ಬಿತ್ತು. ಆ ಪತ್ರಿಕೆಯನ್ನು 1914ರಲ್ಲಿ ಅವರು ನಿಷೇಧಿಸಿದರು.


ಸುಮ್ಮನಿರದೆ ಆಜಾದ್ ರು ಇನ್ನೊಂದು ವಾರ ಪತ್ರಿಕೆ ಅಲ್ ಬಲಗ್ ಆರಂಭಿಸಿದರು. ಅದು ಕೂಡ ಸ್ವಾತಂತ್ರ್ಯ, ಕ್ರಾಂತಿಕಾರಿ ವಿಷಯ, ಹಿಂದೂ ಮುಸ್ಲಿಂ ಒಗ್ಗಟ್ಟು ಎಂಬ ಧ್ಯೇಯವನ್ನೇ ಹೊಂದಿತ್ತು. 1916ರಲ್ಲಿ ಬ್ರಿಟಿಷರು ಈ ಪತ್ರಿಕೆಯನ್ನೂ ನಿಷೇಧಿಸಿದರಲ್ಲದೆ ಅವರನ್ನು ಕೊಲ್ಕತ್ತದಿಂದ ಬಿಹಾರಕ್ಕೆ ಗಡಿಪಾರು ಮಾಡಿದರು. ಮೊದಲ ಮಹಾಯುದ್ಧದ ಬಳಿಕ 1920ರಲ್ಲಿ ಅವರಿಗೆ ಮತ್ತೆ ಬಿಡುಗಡೆ ಸಿಕ್ಕಿತು.


ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಅತಿ ಕಿರಿಯ ಅಧ್ಯಕ್ಷ
ಮೌಲಾನಾ ಅಬ್ದುಲ್ ಕಲಾಂ ಆಜಾದರು ಗಾಂಧೀಜಿಯವರ ಅಸಹಕಾರ ಚಳವಳಿಯನ್ನು ಬೆಂಬಲಿಸಿದರು ಹಾಗೂ 1920ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು. 1923ರ ದೆಹಲಿ ಕಾಂಗ್ರೆಸ್ ಸಮಾವೇಶದಲ್ಲಿ ವಿಶೇಷ ಕಲಾಪದ ಅಧ್ಯಕ್ಷರಾಗಿ ಆಜಾದ್ ಆಯ್ಕೆಯಾದರು. ಆಗ ಅವರಿಗೆ 35ರ ಪ್ರಾಯ, ಹಾಗಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಅತಿ ಕಿರಿಯ ಅಧ್ಯಕ್ಷರು ಎಂಬ ದಾಖಲೆ ಅವರದಾಯಿತು.


ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹ ಬೆಂಬಲಿಸಿ, ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ ಆಜಾದ್ ರನ್ನು 1930ರಲ್ಲಿ ಬಂಧಿಸಿದರು. ಒಂದೂವರೆ ವರ್ಷ ಅವರನ್ನು ಮೀರತ್ ಜೈಲಿನಲ್ಲಿ ಇಡಲಾಯಿತು. ಬಿಡುಗಡೆಯಾದ ಬಳಿಕ ಆಜಾದ್ ರು ಮತ್ತೆ 1940ರಲ್ಲಿ ರಾಮಗಡ ಅಧಿವೇಶನದಲ್ಲಿ ಕಾಂಗ್ರೆಸ್ಸಿನ ಅಧ್ಯಕ್ಷರಾದರು. 1946ರವರೆಗೂ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಇದ್ದರು.


ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ಸ್ಥಾಪಕ
ಬ್ರಿಟಿಷ್ ಭಾರತದ ಸಂಯುಕ್ತ ಪ್ರಾಂತ್ಯದ ಆಲಿಗಡದಲ್ಲಿ 1920ರಲ್ಲಿ ಆರಂಭವಾದ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ಸ್ಥಾಪಕರಲ್ಲಿ ಆಜಾದ್ ಅವರು ಒಬ್ಬರು. ದೇಶದ ಆಧುನಿಕ ಶಿಕ್ಷಣ ಪದ್ಧತಿ ರೂಪಿಸಿದ ರೂವಾರಿ ಅವರು. ಅವರು ವಿದ್ಯಾ ಮಂತ್ರಿ ಆಗಿದ್ದಾಗ ಮೊದಲ ಐಐಟಿ, ಐಐಎಸ್ಸಿ, ಯೋಜನಾ ಮತ್ತು ವಾಸ್ತುಶಿಲ್ಪ ಶಾಲೆ, ವಿಶ್ವ ವಿದ್ಯಾನಿಲಯದ ಅನುದಾನ ಆಯೋಗ ಇವುಗಳೆಲ್ಲ ಆರಂಭವಾದವು. ಅಲ್ಲದೆ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಗೀತ ನಾಟಕ ಅಕಾಡೆಮಿ, ಲಲಿತ್ ಕಲಾ ಅಕಾಡೆಮಿ, ಸಾಹಿತ್ಯ ಅಕಾಡೆಮಿ, ಐಸಿಸಿಆರ್- ಸಾಂಸ್ಕೃತಿಕ ಸಂಪರ್ಕಕ್ಕಾಗಿ ಭಾರತೀಯ ಪರಿಷತ್ತು ಇವುಗಳೆಲ್ಲವನ್ನು ಸಹ ಆರಂಭಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.


2008ರಲ್ಲಿ ಭಾರತೀಯ ಮಾನವ ಸಂಪನ್ಮೂಲ ಸಚಿವಾಲಯವು ಆಜಾದ್ ರ ಜನ್ಮದಿನವನ್ನು ರಾಷ್ಟ್ರೀಯ ಶಿಕ್ಷಣ ದಿನವಾಗಿ ಆಚರಿಸಲು ತೀರ್ಮಾನ ತೆಗೆದುಕೊಂಡಿತು. ದೇಶಾದ್ಯಂತದ ಶಿಕ್ಷಣ ಸಂಬಂಧಿ ಸಂಸ್ಥೆಗಳು ವಿಚಾರ ಸಂಕಿರಣ, ಪ್ರಬಂಧ ರಚನೆ, ಕಾರ್ಯಾಗಾರ ಇತ್ಯಾದಿಗಳ ಮೂಲಕ ಈ ದಿನವನ್ನು ಸ್ಮರಣೀಯವೆನಿಸುತ್ತವೆ.
ಮೌಲಾನಾ ಅಬ್ದುಲ್ ಕಲಾಂ ಆಜಾದ್ ರ ಬಗೆಗೆ ತಿಳಿಯಲೇಬೇಕಾದ 10 ಸಂಗತಿಗಳನ್ನು ಈಗ ಅರಿಯೋಣ

  1. 1930ರಲ್ಲಿ ಉಪ್ಪಿನ ಮೇಲಿನ ತೆರಿಗೆ ವಿರೋಧಿಸಿ ನಡೆಸಿದ ಧಾರಾಸನ ಸತ್ಯಾಗ್ರಹವನ್ನು ಸಂಘಟಿಸಿದ ಪ್ರಮುಖರು ಅಬ್ದುಲ್ ಕಲಾಮ್ ಆಜಾದ್.
  2. ಈಗಿನ ಉತ್ತರ ಪ್ರದೇಶದ ಆಲಿಗಡದಲ್ಲಿ 1920ರಲ್ಲಿ ಆರಂಭಿಸಲಾದ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯವನ್ನು ಆಜಾದ್ ಅವರು ಇತರ ಇಬ್ಬರೊಡನೆ ಸೇರಿ ಆರಂಭಿಸಿದರು. 14 ವರ್ಷಗಳ ಬಳಿಕ ಆ ವಿಶ್ವವಿದ್ಯಾನಿಲಯದ ಮುಖ್ಯ ಕ್ಯಾಂಪಸನ್ನು ದೆಹಲಿಗೆ ಒಯ್ಯುವಲ್ಲಿ ಆಜಾದ್ ರದೇ ಮುಖ್ಯ ಪಾತ್ರ.
  3. ಕಾಂಗ್ರೆಸ್ ಸದಸ್ಯರಾದ ಅವರು 1923ರಲ್ಲಿ ತನ್ನ 35ರ ಪ್ರಾಯದಲ್ಲಿ ಅಧ್ಯಕ್ಷತೆ ವಹಿಸಿದರು. ಅತಿ ಕಿರಿಯ ಕಾಂಗ್ರೆಸ್ ಅಧ್ಯಕ್ಷ ಎಂಬ ದಾಖಲೆ ಅವರದು.
  4. ಆಜಾದ್ ಅವರು ಪತ್ರಕರ್ತರಾಗಿ ಹಲವಾರು ಉರ್ದು ಪತ್ರಿಕೆಗಳಿಗೆ ಬರೆದರು. ಲಿಸ್ಸನ್ ಅಸ್ ಸಿದ್ಕ್ ಎಂಬ ಮಾಸ ಪತ್ರಿಕೆಯನ್ನು ಅವರು ನಡೆಸಿದರು. ಅದು 1905ರವರೆಗೆ ಬಂತು. 1904ರಲ್ಲಿ ಸುಮಾರು ಎಂಟು ತಿಂಗಳ ಕಾಲ ಅವರು ಅಮೃತಸರದ ವಕೀಲ್ ಎಂಬ ಪತ್ರಿಕೆಗೆ ಸಂಪಾದಕರಾಗಿ ದುಡಿದರು. 1912ರಲ್ಲಿ ಆಜಾದ್ ರು ಅಲ್ ಹಿಲಾಲ್ ಉರ್ದು ವಾರ ಪತ್ರಿಕೆಯನ್ನು ಆರಂಭಿಸಿದರು.
  5. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಬ್ರಿಟಿಷ್ ಆಡಳಿತವನ್ನು ಟೀಕಿಸುವ ಬರಹಗಳನ್ನು ಪತ್ರಕರ್ತರಾಗಿ ಅವರು ಬರೆದರು ಹಾಗೂ ಪ್ರಕಟಿಸಿದರು.
  6. ಆಜಾದ್ ಅವರು ಅವರ ಕಾಲದ ಪ್ರಮುಖ ರಾಜಕೀಯ ವ್ಯಕ್ತಿ ಹಾಗೂ ಶಕ್ತಿ ಆಗಿದ್ದರು. ಜಾತ್ಯತೀತ ಮತ್ತು ಸಮಾಜವಾದಿ ತತ್ವದಲ್ಲಿ ನಂಬಿಕೆ ಇಟ್ಟಿದ್ದ ಅವರು ಹಿಂದೂ ಮುಸ್ಲಿಂ ಏಕತೆಗೆ ಶ್ರಮಿಸಿದವರು, ಹೋರಾಟದಲ್ಲಿ ತೊಡಗಿಸಿದವರು.
  7. ಮನೆ ಪಾಠದ ಶಿಕ್ಷಣ ಪಡೆದ ಮತ್ತು ಸ್ವಂತ ಕಲಿತುಕೊಂಡ ಆಜಾದ್ ಅವರಿಗೆ ಅರೆಬಿಕ್, ಬಂಗಾಲಿ, ಪರ್ಶಿಯನ್ ಸಹಿತ ಹಲವು ಭಾಷೆಗಳು ಬರುತ್ತಿದ್ದವು.
  8. ಆಜಾದ್ ಅವರು ಭಾರತದ ಶಿಕ್ಷಣ ಸಚಿವರಾಗಿದ್ದಾಗ ಭಾರತದ ಮೊದಲ ಇನ್ ಸ್ಟಿಟ್ಯೂಟ್ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ 1951ರಲ್ಲಿ ಮತ್ತು ಯುಜಿಸಿ- ವಿಶ್ವವಿದ್ಯಾನಿಲಯಗಳ ಅನುದಾನ ಆಯೋಗ 1953ರಲ್ಲಿ ಆರಂಭವಾದವು.
  9. ಆಜಾದ್ ಅವರು 1919ರಿಂದ 1924ರವರೆಗೆ ಖಿಲಾಪತ್ ಚಳವಳಿಯ ನಾಯಕರಾಗಿದ್ದರು. ಆ ಅವಧಿಯಲ್ಲಿಯೇ ಅವರು ಮಹಾತ್ಮಾ ಗಾಂಧೀಜಿಯವರನ್ನು ಭೇಟಿಯಾದರು.
  10. ಸಮಾಜದಲ್ಲಿ ಶೈಕ್ಷಣಿಕವಾಗಿ ಹಿಂದುಳಿದವರ ಕಲಿಕಾಭಿವೃದ್ಧಿಗಾಗಿ 1989ರಲ್ಲಿ ಭಾರತ ಸರಕಾರದ ಅಲ್ಪಸಂಖ್ಯಾಕ ವಿಷಯಕ ಇಲಾಖೆಯು ಮೌಲಾನಾ ಆಜಾದ್ ಎಜುಕೇಶನ್ ಫೌಂಡೇಶನ್ ಆರಂಭಿಸಿತು.
    ಮೌಲಾನಾ ಎಂದರೆ ನಮ್ಮ ಮಾಸ್ಟರ್ ಎಂದು ಅರ್ಥ. ಮುಕ್ತ ಸ್ವತಂತ್ರ ಎಂದು ಅವರು ಆಜಾದ್ ಎಂಬುದನ್ನು ತನ್ನ ಹೆಸರಿಗೆ ಸೇರಿಸಿಕೊಂಡರು.
    ಯವ್ವನದಲ್ಲಿ ಅವರು ಸಾಕಷ್ಟು ಉರ್ದು ಮತ್ತಿತರ ಕವಿತೆಗಳನ್ನು ರಚಿಸಿದ್ದರು. ಮೌಲಾನಾರು ಹುಟ್ಟಿದ ಕಾಲದಲ್ಲಿ ಮಕ್ಕಾ ಒಟ್ಟೋಮನ್ (ತುರ್ಕ್- ಟರ್ಕ್) ಸಾಮ್ರಾಜ್ಯಕ್ಕೆ ಸೇರಿತ್ತು. 1908ರಲ್ಲಿ ಈಜಿಪ್ತ್, ಸಿರಿಯಾ, ಫ್ರಾನ್ಸ್ ಗಳಿಗೆ ಹೋದ ಮೌಲಾನಾರು ಅಲ್ಲಿ ಹಲವಾರು ಕ್ರಾಂತಿಕಾರಿಗಳನ್ನು ಅವರು ಭೇಟಿಯಾದರು.
    ಅವರ ಪುಸ್ತಕಗಳಲ್ಲಿ ಇಂಡಿಯಾ ವಿನ್ಸ್ ಫ್ರೀಡಂ, ಗುಬೆರ್ ಎ ಖಾತಿರ್ ಪ್ರಮುಖವಾದವು ಅಹ್ಮದಾಬಾದ್ ಕೋಟೆಯ ಹಿನ್ನೆಲೆಯಲ್ಲಿ ಗುಬೆರ್ ಎ ಖಾತಿರ್ ಬರೆದಿದ್ದಾರೆ.


Join Whatsapp