ಬೆಂಗಳೂರು : ಅತ್ಯಂತ ತರಾತುರಿಯಲ್ಲಿ ಎನ್ ಇಪಿ-2020ರ ಹೇರಿಕೆಯನ್ನು ಒಪ್ಪುವುದಿಲ್ಲ, ‘ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ಒದಗಿಸಿ’ ಎಂಬ ಘೋಷಣೆಗಳನ್ನು ಕೂಗುತ್ತಾ, ಇಂದು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಎಐಡಿಎಸ್ ಓ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಐಡಿಎಸ್ಓ ಜಿಲ್ಲಾ ಉಪಾಧ್ಯಕ್ಷ ಅಪೂರ್ವ ಸಿ.ಎಂ., “ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಕರ್ನಾಟಕದಲ್ಲಿ ಎನ್ ಇಪಿ ಅನುಷ್ಠಾನಕ್ಕೆ ತರಲು ನಿರ್ಧರಿಸಲಾಗಿದೆ. ಇದನ್ನು ರಾಜ್ಯದ ಶಿಕ್ಷಣ ತಜ್ಞರು, ಉಪನ್ಯಾಸಕರು, ಸಾಹಿತಿಗಳು, ವಿದ್ಯಾರ್ಥಿಗಳು ಹಾಗು ಪೋಷಕರು ವಿರೋಧಿಸಿದ್ದಾರೆ. ಅತ್ಯಂತ ತರಾತುರಿಯಲ್ಲಿ, ಯಾವುದೇ ಪೂರ್ವಭಾವಿ ತಯಾರಿ ಇಲ್ಲದೆ ಏಕಾಏಕಿ ಎನ್ಇಪಿ ಭಾಗವಾಗಿರುವ ನಾಲ್ಕು ವರ್ಷದ ಪದವಿ ಕೋರ್ಸ್ ಅನ್ನು ಅನುಷ್ಠಾನಕ್ಕೆ ತಂದಿದೆ. ತರಗತಿಗಳು ಆರಂಭವಾಗಿದ್ದರೂ ಸರ್ಕಾರದ ಬಳಿ ಪಠ್ಯಕ್ರಮ ತಯಾರಿಲ್ಲ, ಪಠ್ಯಪುಸ್ತಕಗಳು ಇಲ್ಲ. ಇದರಿಂದ ರಾಜ್ಯದ ಶಿಕ್ಷಕ ವರ್ಗ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಅಂಧಕಾರವಾಗಿದೆ.” ಎಂದು ಅಭಿಪ್ರಾಯ ಪಟ್ಟರು.
“ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ಜಾರಿಗೆ ತರುತ್ತಿರುವ ರಾಜ್ಯ ಸರ್ಕಾರ, ಹಿಂದಿನ ಶೈಕ್ಷಣಿಕ ನೀತಿಯಲ್ಲಿ ಯಾವ ಲೋಪದೋಷಗಳಿದ್ದವು, ಯಾವ ಕಾರಣಕ್ಕೆ ನೂತನ ನೀತಿಯ ಅನುಷ್ಠಾನ ಆಗುತ್ತಿದೆ ಎಂಬ ವಿಷಯಗಳ ಬಗ್ಗೆ ಯಾವುದೇ ಉತ್ತರ ನೀಡಿಲ್ಲ ಅಷ್ಟೇ ಅಲ್ಲ, ಅತ್ಯಂತ ವ್ಯಾಪಕ ವಿರೋಧಗಳ ನಡುವೆಯೂ, ಅಪ್ರಜಾತಾಂತ್ರಿಕವಾಗಿ, ತರಾತುರಿಯಲ್ಲಿ ಶಿಕ್ಷಣ ನೀತಿಯನ್ನು ಜಾರಿ ಮಾಡುತ್ತಿದೆ. ರಾಜ್ಯದ ಶಿಕ್ಷಣ ವ್ಯವಸ್ಥೆ ಈಗಾಗಲೇ ಅತ್ಯಂತ ಅಧೋಗತಿಯ ಸ್ಥಿತಿಯಲ್ಲಿ ಇದೆ. ಶಿಕ್ಷಣದ ಖಾಸಗೀಕರಣ, ದುಬಾರಿ ಶುಲ್ಕಗಳಿಂದ ಶಿಕ್ಷಣ ಪಡೆಯುವವರ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಕಳೆದ 15 ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು 9 ಸಾವಿರ ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿವೆ. ಏಕ ಶಿಕ್ಷಕ ಶಾಲೆಗಳು ಶೇ.58ರಷ್ಟು ಇದೆ. ಕೇವಲ 13 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಇದ್ದರೆ, ಬರೋಬ್ಬರಿ 210ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ಕಳೆದ ಕೆಲವು ವರ್ಷಗಳಲ್ಲಿ ತಲೆ ಎತ್ತಿವೆ. 17 ಸರ್ಕಾರಿ ವೈದ್ಯಕೀಯ ಕಾಲೇಜುಗಳಿದ್ದರೆ, 38 ಖಾಸಗೀ ವೈದ್ಯಕೀಯ ಕಾಲೇಜುಗಳಿವೆ. ಅಂದರೆ, ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಏರುತ್ತಿದೆ, ಸರ್ಕಾರಿ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಈ ಸವಾಲುಗಳಿಗೆ ಎನ್ಇಪಿ-2020 ಉತ್ತರ ನೀಡಿದೆಯೇ? ಸರ್ಕಾರಿ ಶಾಲೆಗಳಲ್ಲಿ 30 ಕ್ಕಿಂತ ಕಡಿಮೆ ಇರುವ ಶಾಲೆಗಳನ್ನು ಒಂದೆಡೆ ಸೇರಿಸಿ ‘ಸಮೂಹ ಶಾಲೆ’ಗಳಾಗಿ ಮಾಡುತ್ತೇವೆ ಎಂದು ಪ್ರತಿಪಾದಿಸುವ ಎನ್ ಇಪಿ, ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಲು, ಮೂಲಭೂತ ಸೌಕರ್ಯಗಳನ್ನು ಒದಗಿಸಲು, ಶಿಕ್ಷಕರ ನೇಮಕಾತಿ ಮಾಡಲು ಅಥವಾ 3.2 ಕೋಟಿಯಷ್ಟು ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುತ್ತಿರುವ ಸಂದರ್ಭದಲ್ಲಿ, ಅವರನ್ನು ಹೇಗೆ ವಾಪಸ್ ಶಿಕ್ಷಣದ ವ್ಯಾಪ್ತಿಗೆ ತರಬೇಕು, ಅವರನ್ನು ಹೇಗೆ ಪ್ರೇರೇಪಿಸಬೇಕು, ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಸಮೂಹ ಶಾಲೆ ಎಂಬ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿರುವುದು ದುರಂತ. ಇದರೊಂದಿಗೆ, ಈ ನೀತಿಯಲ್ಲಿ ಪ್ರಸ್ತಾಪವಾಗಿರುವ ಹಲವು ಅಂಶಗಳು ನೇರವಾಗಿ ಶಿಕ್ಷಣದ ಖಾಸಗೀಕರಣ, ಕೇಂದ್ರೀಕರಣ ಹಾಗು ಕೋಮುವಾದಿಕರಣಕ್ಕೆ ಕಾರಣವಾಗುತ್ತದೆ ಎಂಬುದರ ಕುರಿತು ಅಭಿಪ್ರಾಯಗಳು ಬಂದಿವೆ. ಈ ಎಲ್ಲ ಕಾರಣಗಳಿಂದ, ರಾಜ್ಯ ಸರ್ಕಾರ ಶಿಕ್ಷಣದಲ್ಲಿ ಹೇರಿರುವ ಎನ್ಇಪಿ-2020 ಅನ್ನು ವಾಪಸ್ ಪಡೆಯಬೇಕು ಎಂದು ವಿದ್ಯಾರ್ಥಿಗಳು, ಶಿಕ್ಷಕರು ಆಗ್ರಹಿಸುತ್ತೇವೆ” ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಕಾರ್ಯದರ್ಶಿ ಕಲ್ಯಾಣ್ ಕುಮಾರ್ ಮಾತನಾಡಿ, ಪ್ರತಿಭಟನಾ ದಿನದ ಮತ್ತೊಂದು ಬೇಡಿಕೆಯಾಗಿದ್ದ ಉಚಿತ ಬಸ್ಪಾಸ್ ಎಲ್ಲ ವಿದ್ಯಾರ್ಥಿಗಳಿಗೂ ಒದಗಿಸಿ ಎಂದು ಆಗ್ರಹಿಸಿದರು. “ಕೋವಿಡ್ ಮಾಹಾಮಾರಿ ಅಪ್ಪಳಿಸಿ, ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಶೈಕ್ಷಣಿಕ ವರ್ಷವೇ ಏರುಪೇರಾಗಿತ್ತು. ಲಕ್ಷಾಂತರ ಕುಟುಂಬಗಳು ಆರ್ಥಿಕವಾಗಿ ನಲುಗಿರುವ ಹಿನ್ನೆಲೆಯಲ್ಲಿ, ಸರ್ಕಾರ ಶಾಲಾ ಕಾಲೇಜು ಶುಲ್ಕದ ಜೊತೆ ಬಸ್ಪಾಸ್ ಶುಲ್ಕದ ಹೊರೆಯನ್ನು ವಿದ್ಯಾರ್ಥಿಗಳ ಮೇಲೆ ಹೊರಿಸಬಾರದು. ಈ ವರ್ಷ ಎಲ್ಲ ವಿದ್ಯಾರ್ಥಿಗಳಿಗೂ ಬಸ್ಪಾಸ್ ಉಚಿತವಾಗಿ ನೀಡಬೇಕು” ಎಂದು ಹೇಳಿದರು.
ಸಭೆಯಲ್ಲಿ ಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಸೇರಿದಂತೆ, ಜಿಲ್ಲಾ ಖಜಾಂಚಿ ವಿನಯ್ ಚಂದ್ರ, ಸೆಕ್ರೆಟರಿಯಟ್ ಸದಸ್ಯರಾದ ಕಿಶೋರ್, ವಿದ್ಯಾರ್ಥಿಗಳಾದ ಕಿರಣ್, ಭರತ್ ಇನ್ನಿತರರು ಭಾಗಿಯಾಗಿದ್ದರು.