ಗಿರಿದ್: ಚಾತ್ ಪೂಜೆಯ ಸಂಭ್ರಮದಲ್ಲಿದ್ದ ಜಾರ್ಖಂಡ್’ನ ಗಿರಿದ್ ಜಿಲ್ಲೆಯಲ್ಲಿ ಪುಣ್ಯಸ್ನಾನಕ್ಕೆ ತೆರಳಿದ್ದ ನಾಲ್ವರು ಮಕ್ಕಳು ನದಿನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಗಿರಿದ್ ಜಿಲ್ಲೆಯ ಮುಫಾಸ್ಸಿಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗ್ರೋದ್ ಗ್ರಾಮದಲ್ಲಿ ದುರಂತ ನಡೆದಿದ್ದು, ಮೃತಪಟ್ಟವರೆಲ್ಲರೂ ಹತ್ತು ವರ್ಷ ಕೆಳಗಿನ ಪ್ರಾಯದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಕ್ಕಳನ್ನು ನೀರಿನಿಂದ ಮೇಲೆತ್ತಿ ಸಮೀಪದ ಗಿರಿದ್ ಸಾಧಾರ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆ ವೇಳಗೆ ಮಕ್ಕಳು ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ.
ಚಾತ್ ಪೂಜೆಯ ವೇಳೆ ಪ್ರಸಾದಕ್ಕಾಗಿ ನೀರು ತರಲು ಸಮೀಪದ ನದಿಗೆ ಮಹಿಳೆಯೊರೊಂದಿಗೆ ತೆರಳಿದ್ದ ಮಕ್ಕಳು ಮೊದಲು ಸ್ನಾನಕ್ಕಿಳಿದಿದ್ದರು. ಮೃತರನ್ನು ಮುನ್ನಾ ಸಿಂಗ್, ಸುಹಾನಾ ಕುಮಾರಿ, ಸೊನಾಕ್ಷಿ ಕುಮಾರಿ ಹಾಗೂ ದೀಕ್ಷಾ ಕುಮಾರಿ ಎಂದು ಗುರುತಿಸಲಾಗಿದೆ. ಚಾತ್ ಪೂಜೆಯನ್ನು ಜಾರ್ಖಂಡ್’ನ ಹಲವೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಬೊಕಾರೋ ನಿವಾಸಿಯಾಗಿದ್ದ ದೀಕ್ಷಾ ಕುಮಾರಿ ಹಬ್ಬವನ್ನು ಆಚರಿಸಲು ತನ್ನ ಅಜ್ಜಿ ಮನೆಗೆ ಬಂದಿದ್ದಳು.
ಕಳೆದ ಸೆಪ್ಟಂಬರ್’ನಲ್ಲಿ ಲಾಥೇರ್ ಜಿಲ್ಲೆಯಲ್ಲಿ ಕರ್ಮಾ ಹಬ್ಬ ಆಚರಣೆಯ ವೇಳೆ 7 ಯುವತಿಯರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. 2019ರಲ್ಲಿ ಚಾತ್ ಪೂಜೆಯ ವೇಳೆ ಬಿಹಾರದ ಹಲೆವೆಡೆ ನಡೆದ ದುರಂತದಲ್ಲಿ 18 ಮಕ್ಕಳೂ ಸೇರಿದಂತೆ 30 ಮಂದಿ ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ದೇವಾಲಯದ ಗೋಡೆ ಕುಸಿತ, ಕಾಲ್ತುಳಿತ ಹಾಗೂ ನೀರಿನಲ್ಲಿ ಮುಳುಗಿ ಮಕ್ಕಳು ಮೃತಪಟ್ಟಿದ್ದರು.