4 ಓವರ್ ಶೂನ್ಯ ರನ್: T-20 ಕ್ರಿಕೆಟ್’ನಲ್ಲಿ ಅಪರೂಪದ ವಿಶ್ವದಾಖಲೆ ಬರೆದ ಅಕ್ಷಯ್ !

Prasthutha|

ವಿಜಯವಾಡ: T-20 ಕ್ರಿಕೆಟ್’ನಲ್ಲಿ ಬೌಲರ್’ಗಳು ದುಬಾರಿಯಾಗುವುದು ಸಾಮಾನ್ಯ. ಆದರೆ ತನ್ನ ಕೋಟಾದ ಪೂರ್ತಿ ನಾಲ್ಕೂ ಓವರ್’ಗಳನ್ನು ಎಸೆದು ಯಾವುದೇ ರನ್ ಬಿಟ್ಟುಕೊಡದೆ ಎರಡು ವಿಕೆಟ್ ಪಡೆಯುವ ಮೂಲಕ ವಿದರ್ಭ ತಂಡದ ಸ್ಪಿನ್ ಬೌಲರ್ ಅಕ್ಷಯ್ ಕರ್ನೇವಾರ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಆ ಮೂಲಕ ಪಾಕಿಸ್ತಾನದ ಬೌಲರ್ ಮುಹಮ್ಮದ್ ಇರ್ಫಾನ್ ಅವರ ಹೆಸರಿನಲ್ಲಿದ್ದ ದಾಖಲೆ ಪತನವಾಗಿದೆ.

- Advertisement -

T-20 ಕ್ರಿಕೆಟ್’ನಲ್ಲೇ ಅತ್ಯಂತ ಅಪರೂಪದ ದಾಖಲೆಗೆ ವೇದಿಕೆಯಾಗಿದ್ದು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಟೂರ್ನಿಯ ವಿದರ್ಭ ಹಾಗೂ ಮಣಿಪುರ ನಡುವಿನ ಪಂದ್ಯ.

2018ರಲ್ಲಿ  ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಬಾರ್ಬೋಡಸ್ ತಂಡದ ಪರ ಆಡಿದ್ದ ಮುಹಮ್ಮದ್ ಇರ್ಫಾನ್, ನೇವಿಸ್ ಪ್ಯಾಟ್ರಿಯೋಟ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ 4 ಓವರ್’ಗಳ ಸ್ಪೆಲ್’ನಲ್ಲಿ 3 ಓವರ್ ಮೇಡನ್ ಮಾಡಿ ಕೇವಲ 1 ರನ್’ಬಿಟ್ಟುಕೊಟ್ಟು 2 ವಿಕೆಟ್ ಪಡೆದಿದ್ದರು. ಆದರೆ ಮಣಿಪುರ ವಿರುದ್ಧದ ಟಿ20 ಪಂದ್ಯದಲ್ಲಿ ವಿದರ್ಭ ತಂಡದ ಅಕ್ಷಯ್ ಕರ್ನೇವಾರ್, 4 ಓವರ್’ಗಳಲ್ಲಿ 4 ಓವರನ್ನೂ ಮೇಡನ್ ಮಾಡಿ 2 ವಿಕೆಟ್ (4-4-0-2), ಪಡೆಯುವ ಮೂಲಕ ವಿಶ್ವದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ. ಎಡ ಹಾಗೂ ಬಲಗೈಯಲ್ಲೂ ಬೌಲಿಂಗ್ ಮಾಡುವ ಮೂಲಕ ಅಕ್ಷಯ್ ಕರ್ನೇವಾರ್ ಟೂರ್ನಿಯಲ್ಲಿ ಗಮನ ಸೆಳೆದಿದ್ದಾರೆ.

- Advertisement -

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸಿಕ್ಕಿಂ ವಿರುದ್ಧದ ತನ್ನ ಮೊದಲ ಪಂದ್ಯದಲ್ಲಿ ಅಕ್ಷಯ್, 4 ಓವರ್ ಎಸೆದು ಕೇವಲ 5 ರನ್ ಬಿಟ್ಟುಕೊಟ್ಟು 4 ವಿಕೆಟ್ ಪಡೆದಿದ್ದರು. ಇದರಲ್ಲಿ ಹ್ಯಾಟ್ರಿಕ್ ಸಾಧನೆಯೂ ಸೇರಿತ್ತು. ಭಾನುವಾರ ನಡೆದ ಬಿಹಾರದ ವಿರುದ್ಧ ಪಂದ್ಯದಲ್ಲಿ ಮಧ್ಯ ಪ್ರದೇಶದ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್, ತನ್ನ 4 ಓವರ್’ಗಳ ಬೌಲಿಂಗ್’ನಲ್ಲಿ ಕೇವಲ 2 ರನ್ ನೀಡಿ ಎರಡು ವಿಕೆಟ್ ಪಡೆದಿದ್ದರು. ಆ ಮೂಲಕ ಮೂರನೇ ಜಂಟಿ ದಾಖಲೆಯು ಅಯ್ಯರ್ ಹೆಸರಿನಲ್ಲಿ ದಾಖಲಾಗಿತ್ತು.

ವಿಜಯವಾಡದ ಎಸಿಎ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವಿದರ್ಭ 20 ಓವರ್‌ಗಳಲ್ಲಿ 222 ರನ್ ಗಳಿಸಿತು. ಜಿತೇಶ್ ಶರ್ಮಾ 71 ಹಾಗೂ ಅಪೂರ್ವ ವಾಖಂಡೆ 49 ರನ್ ಗಳಿಸಿ ಮಿಂಚಿದ್ದರು. ಚೇಸಿಂಗ್ ವೇಳೆ ಪೆವಿಲಿಯನ್ ಪರೇಡ್ ನಡೆಸಿದ ಮಣಿಪುರ 16.3 ಓವರ್‌ಗಳಲ್ಲಿ ಕೇವಲ 55 ರನ್ ಗಳಿಗೆ ಆಲೌಟ್ ಆಗಿತ್ತು.  ಆ ಮೂಲಕ ವಿದರ್ಭ 167 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.



Join Whatsapp