ಬಿಟ್ ಕಾಯಿನ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಿದ್ದರೆ ಗಲ್ಲಿಗೇರಿಸಿ: ಡಿಕೆಶಿ ಸವಾಲು

Prasthutha|

ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದಲ್ಲಿ ‘ಕಾಂಗ್ರೆಸ್ ಪಕ್ಷದ ನಾಯಕರು ಯಾವುದೇ ಅವ್ಯವಹಾರದಲ್ಲಿ ತೊಡಗಿದ್ದರೆ ಅವರನ್ನು ಕಾನೂನು ಪ್ರಕಾರ ಗಲ್ಲಿಗೆ ಹಾಕಲಿ. ನಮ್ಮಿಂದ ಯಾವುದೇ ಅಭ್ಯಂತರವಿಲ್ಲ. ನಾವು ಅವರನ್ನು ರಕ್ಷಿಸುವುದೂ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

- Advertisement -

ಜೆಡಿಎಸ್ ಮುಖಂಡ ದೇವೇಂದ್ರಪ್ಪ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಟ್ ಕಾಯಿನ್ ವಿಚಾರವಾಗಿ ಪೊಲೀಸ್ ದಾಖಲೆ ಮಾಡಿರುವ ಎಫ್ಐಆರ್, ಮಾಧ್ಯಮಗಳಲ್ಲಿ ಕೇಳಿ ಬಂದಿರುವ ಹೆಸರುಗಳು, ಪ್ರಧಾನಮಂತ್ರಿಗಳಿಗೆ ಹೋಗಿರುವ ದೂರುಗಳು, ಯಾರನ್ನು ವಿವಿಧ ಪ್ರಕರಣದಲ್ಲಿ ಬಂಧಿಸಿ ವಿಚಾರಣೆ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಬಹಿರಂಗ ಮಾಡಲಿ. ಕಾಂಗ್ರೆಸ್ ಪಕ್ಷದ ನಾಯಕರು ಇದರಲ್ಲಿ ಭಾಗಿಯಾಗಿದ್ದರೆ ಅವರನ್ನು ಕೂಡ ಬಂಧಿಸಿ ವಿಚಾರಣೆ ನಡೆಸಲಿ. ನಾವು ಯಾರ ಬೆಂಬಲಕ್ಕೂ ನಿಲ್ಲುವುದಿಲ್ಲ ಎಂದರು.

ಈ ಪ್ರಕರಣವನ್ನು ಇಡಿಗೆ ಪ್ರಕರಣ ವಹಿಸಿರುವ ಬಗ್ಗೆ ಸಿಎಂ ಹೇಳಿಕೆ ನೀಡಿದ್ದಾರೆ. ಇದೆಲ್ಲದರ ಮಾಹಿತಿಯನ್ನು ನೀಡಲಿ. ನಾವು ಕೂಡ ಈ ವಿಚಾರವಾಗಿ ಆಂತರಿಕ ತನಿಖೆ ನಡೆಸಿ ಮಾಹಿತಿ ಕಲೆಹಾಕಿದ್ದು, ನಾವು ಕೂಡ ಸೂಕ್ತ ಸಮಯದಲ್ಲಿ ನಮ್ಮ ಬಳಿ ಇರುವ ದಾಖಲೆಗಳನ್ನು ನೀಡುತ್ತೇವೆ, ನಾವು ತನಿಖೆ ಮಾಡಿಸುವುದು ಬೇರೆ ವಿಚಾರ. ಬಿಜೆಪಿ ಅಧಿಕಾರದಲ್ಲಿದೆ. ಅವರ ಕೈಯಲ್ಲಿ ಸರ್ಕಾರ ಇದೆ. ಗೃಹ ಮಂತ್ರಿಗಳು ಇದ್ದಾರೆ. ರಾಜ್ಯದ ಜನರಿಂದ ಅವರು ಮುಚ್ಚಿಟ್ಟಿರುವ ಸತ್ಯಾಂಶ ಹೊರಗಿಡಲಿ’ ಎಂದರು.

- Advertisement -

ವಿದ್ವತ್ ಹಲ್ಲೆ ಪ್ರಕರಣದಲ್ಲಿ ಶ್ರೀಕಿ ಜತೆ ನಲಪಾಡ್ ಆರೋಪಿಯಾಗಿದ್ದರೂ ಅವರ ವಿರುದ್ಧ ಯಾಕೆ ವಿಚಾರಣೆ ಮಾಡಲಿಲ್ಲ ಎಂಬ ಬಿಜೆಪಿ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ವಿಚಾರವಾಗಿ ನಾನು ಗೃಹಮಂತ್ರಿಗಳಿಂದ ಹೇಳಿಕೆ ಬಯಸುತ್ತೇನೆ. ಮಾಧ್ಯಮಗಳ ಮೂಲಕ ನಾನು ಯಾರ ಹೆಸರನ್ನೂ ಕೇಳಲು ಬಯಸುವುದಿಲ್ಲ. ಸಿಎಂ ಹಾಗೂ ಗೃಹ ಸಚಿವರಿಗೆ ಮಾಹಿತಿ ಇದ್ದರೆ ಅವರು ಹೇಳಲಿ. ನಂತರ ನಾನು ಪ್ರತಿಕ್ರಿಯೆ ನೀಡುತ್ತೇನೆ’ ಎಂದರು.

ಜಾಮೀನು ಪಡೆದಿದ್ದ ಶ್ರೀಕಿ ಅವರನ್ನು ಮತ್ತೆ ಬಂಧಿಸಿರುವುದರ ಹಿಂದೆ ಬೇರೆಯವರ ಕೈವಾಡ ಇದೆಯೇ ಎಂಬ ಪ್ರಶ್ನೆಗೆ, ‘ಈ ಪ್ರಕರಣದಲ್ಲಿ ಎಷ್ಟು ಎಫ್ಐಆರ್ ಬಂದಿದೆ. ಯಾರ ಮೇಲೆ ಪ್ರಕರಣ ದಾಖಲಾಗಿದೆ, ಹೈಕೋರ್ಟ್ ನಲ್ಲಿದ್ದ ಪ್ರಕರಣ ಹಿಂಪಡೆದಿದ್ದು ಯಾಕೆ ಎಂಬ ವಿಚಾರಗಳನ್ನು ಬಹಿರಂಗ ಪಡಿಸಲಿ. ಸಮಯ ಬಂದಾಗ ಪಕ್ಷ ಚರ್ಚೆ ಮಾಡಿ ತನ್ನ ತೀರ್ಮಾನ ಕೈಗೊಳ್ಳಲಿದೆ. ಸರ್ಕಾರ ಈ ಪ್ರಕರಣದಲ್ಲಿ ಪಂಚನಾಮದಿಂದ ಹಿಡಿದು ಇಡಿಗೆ ಪ್ರಕರಣ ವಹಿಸಿರುವವರೆಗೂ ಸಂಪೂರ್ಣ ಮಾಹಿತಿ ನೀಡಲಿ’ ಎಂದು ಹೇಳಿದರು.

ಆಪರೇಷನ್ ಕಮಲದಲ್ಲಿ ಬಿಜೆಪಿ ಸೇರಿರುವ ಶಾಸಕರನ್ನು ಮತ್ತೆ ಕಾಂಗ್ರೆಸ್ ಗೆ ಸೇರಿಸಿಕೊಳ್ಳುತ್ತೀರಾ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ಪಕ್ಷ ಸೇರಲು ಬಯಸುವವರು ಅರ್ಜಿ ಹಾಕಲಿ. ಅಲ್ಲಂ ವೀರಭದ್ರಪ್ಪ ಅವರ ನೇತೃತ್ವದ ಸಮಿತಿ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ’, ಪಕ್ಷ ಬಿಟ್ಟು ಹೋಗಿರುವವರು, ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಮೇಲೆ ನಂಬಿಕೆ ಇರುವವರು, ಪಕ್ಷ ಸೇರಲು ಬಯಸುವವರು – ಎಲ್ಲರಿಗೂ ಮುಕ್ತ ಅವಕಾಶ ಮಾಡಿಕೊಡಲಾಗುತ್ತದೆ. ಅಧಿಕಾರಕ್ಕಾಗಿ ಯಾವುದೇ ರೀತಿಯ ಷರತ್ತು ಹಾಕುವಂತಿಲ್ಲ. ಷರತ್ತು ಹಾಕುವವರಿಗೆ ನಮ್ಮಲ್ಲಿ ಅವಕಾಶ ಇಲ್ಲ ಎಂದು ಹೇಳಿದರು.

ಬಹಳ ದಿನಗಳಿಂದ ಬಿ. ದೇವೇಂದ್ರಪ್ಪ ಅವರ ಪಕ್ಷ ಸೇರ್ಪಡೆ ಮುಂದೂಡಿಕೆ ಆಗುತ್ತಲೇ ಬಂದಿತ್ತು. ಅಲ್ಲಂ ವೀರಭದ್ರಪ್ಪ ಅವರ ಸಮಿತಿ ಬೇಷರತ್ ಆಗಿ ದೇವೇಂದ್ರಪ್ಪ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂದು ಶಿಫಾರಸು ಮಾಡಿತ್ತು ಎಂದರು.

Join Whatsapp