ಕರ್ನಾಟಕ ಗಡಿ ಭಾಗದ ಪೆಟ್ರೋಲ್ ಪಂಪ್’ಗಳಲ್ಲಿ ವ್ಯಾಪಾರ ‘ಡಬಲ್’ !

Prasthutha|

ಮಂಗಳೂರು : ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಸರಕಾರಗಳು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸುಂಕ ಕಡಿತಗೊಳಿಸಿದ ಬಳಿಕ ರಾಜ್ಯದಲ್ಲಿ ಇಂಧನ ದರ ಇಳಿಕೆಯಾಗಿದೆ. ಇದರ ಬೆನ್ನಲ್ಲೇ ಕರ್ನಾಟಕದೊಂದಿಗೆ ಗಡಿಭಾಗ ಹಂಚಿಕೊಂಡಿರುವ ಪ್ರದೇಶಗಳಲ್ಲಿರುವ ಪೆಟ್ರೋಲ್ ಪಂಪ್’ಗಳಲ್ಲಿ ಪಕ್ಕದ ರಾಜ್ಯಗಳ ವಾಹನಗಳ ಸರತಿ ಸಾಲು ಕಂಡುಬರುತ್ತಿದೆ.

- Advertisement -


ಕೇರಳ ಗಡಿ ಭಾಗದಲ್ಲಿರುವ ಕರ್ನಾಟಕದ ಪೆಟ್ರೋಲ್ ಪಂಪ್’ಗಳಲ್ಲಿ ಕೇರಳದ ಗ್ರಾಹಕರನ್ನು ಆಕರ್ಷಿಸಲು ಮಲಯಾಳಂ ಭಾಷೆಯಲ್ಲಿ ಬ್ಯಾನರ್’ಗಳನ್ನು ಅಳವಡಿಸಲಾಗಿದೆ. ಕರ್ನಾಟಕಕ್ಕೆ ಸ್ವಾಗತ, ಕೇರಳದ ಪೆಟ್ರೋಲ್ ಪಂಪ್’ಗಳ ಪೆಟ್ರೋಲ್ ಬೆಲೆಗಿಂತಲೂ 5 ರುಪಾಯಿ ಹಾಗೂ ಡೀಸೆಲ್’ಗೆ 8 ರುಪಾಯಿ ಕಡಿಮೆ ಬೆಲೆ ಇರುವುದಾಗಿ ಬ್ಯಾನರ್’ಗಳಲ್ಲಿ ಮಾಹಿತಿ ನೀಡಲಾಗಿದೆ.


ಕರ್ನಾಟಕದ ತಲಪಾಡಿ, ಕುಟ್ಟ, ಗಾಳಿಮುಖದ ಪೆಟ್ರೋಲ್ ಪಂಪ್’ಗಳಲ್ಲಿ ಕಳೆದೆರಡು ದಿನಗಳಿಂದ ಕೇರಳದ ವಾಹನಗಳ ಸರತಿ ಸಾಲು ಕಂಡುಬರುತ್ತಿದೆ. ತಲಪಾಡಿಯಲ್ಲಿರುವ IOC ಪೆಟ್ರೋಲ್ ಪಂಪ್’ನಲ್ಲಿ ಪೆಟ್ರೋಲ್ ಮಾರಾಟದಲ್ಲಿ ಭಾರಿ ಏರಿಕೆಯಾಗಿದ್ದು, 2300 ಲೀಟರ್’ಗೆ ಏರಿಕೆ ಕಂಡಿದೆ. ಡೀಸೆಲ್ ಮಾರಾಟ 6000 ಲೀಟರ್ ದಾಟಿದೆ. ಕೇರಳದ ವಯನಾಡ್’ನಲ್ಲಿರುವ ಪೆಟ್ರೋಲ್ ಪಂಪ್’ಗಳಲ್ಲಿ ಮಾರಾಟ ಶೇ.50ರಷ್ಟು ಕುಸಿದಿದ್ದು, ಸಮೀಪದ ಕರ್ನಾಟಕದ ಕುಟ್ಟ ಪೆಟ್ರೋಲ್ ಪಂಪ್’ನತ್ತ ಗ್ರಾಹಕರು ಮುಖ ಮಾಡಿದ್ದಾರೆ. ಇನ್ನೂ ಕಾಸರಗೋಡು- ಸುಳ್ಯ ಪುತ್ತೂರು ಗಡಿಭಾಗದ ಗಾಳಿಮುಖದ ಪೆಟ್ರೋಲ್ ಪಂಪ್’ನಲ್ಲೂ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ.

- Advertisement -


ಕೇಂದ್ರ ಸರ್ಕಾರ ಸುಂಕ ಇಳಿಸಿದ ಬೆನ್ನಲ್ಲೇ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಿಗೂ ಸುಂಕ ಇಳಿಸಲು ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಬೆಲೆ ಇಳಿಕೆಯಾಗಿತ್ತು. ಆದರೆ ಕೇರಳ,ಆಂಧ್ರ ಪ್ರದೇಶ ಸೇರಿದಂತೆ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳು ಸುಂಕ ಇಳಿಸಲು ಸಮ್ಮತಿಸಿಲ್ಲ. ಹೀಗಾಗಿ ರಾಜ್ಯದ ಗಡಿಭಾಗದಲ್ಲಿರುವ ಪೆಟ್ರೋಲ್ ಪಂಪ್’ಗಳಲ್ಲಿ ವಾಹನಗಳ ಸಾಲು ಹಿಂದಿಗಿಂತಲೂ ದುಪ್ಪಟ್ಟಾಗಿದೆ.


ಕೇರಳದಲ್ಲಿ ಪೆಟ್ರೋಲ್-ಡೀಸೆಲ್ ಮಾರಾಟ ತೀವ್ರ ಕುಸಿತ !
ಪೆಟ್ರೋಲ್-ಡೀಸೆಲ್ ಮೇಲಿನ ಸುಂಕ ಇಳಿಸಲು ನಿರಾಕರಿಸಿರುವ ಕೇರಳ ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ಮಾರಾಟದಲ್ಲಿ ತೀವ್ರ ಕುಸಿತ ಕಂಡಿದೆ. ಕೇರಳದಲ್ಲಿ ಪ್ರತಿನಿತ್ಯ 1.2 ಕೋಟಿ ಲೀಟರ್ ಇಂಧನ ಮಾರಾಟವಾಗುತ್ತಿತ್ತು. ಆದರೆ ಪಕ್ಕದ ರಾಜ್ಯಗಳಲ್ಲಿ ಬೆಲೆ ಇಳಿಕೆಯಾದ ಬಳಿಕ ಗ್ರಾಹಕರು ಅತ್ತ ಮುಖಮಾಡಿದ್ದು, ಪೆಟ್ರೋಲ್ ಮಾರಾಟದಲ್ಲಿ ಶೇ.40, ಹಾಗೂ ಡೀಸೆಲ್ ಮಾರಾಟದಲ್ಲಿ ಶೇ.60ರಷ್ಟು ಕುಸಿತ ಕಂಡಿರುವುದಾಗಿ ಕೇರಳದ ಪ್ರಮುಖ ದೈನಿಕ ಮಾತೃಭೂಮಿ ವರದಿ ಮಾಡಿದೆ. ಇದು ಕೇರಳದ ತೆರಿಗೆ ವ್ಯವಸ್ಥೆ ಮೇಲೆ ಹೆಚ್ಚಿನ ಪರಿಣಾ ಬೀರುವ ಸಾಧ್ಯತೆಯಿದೆ.



Join Whatsapp