‘ನಿರಾಧಾರ ಹೇಳಿಕೆ ನೀಡಿದರೆ ನಾಲಗೆ ಕತ್ತರಿಸುತ್ತೇನೆ’: ಬಿಜೆಪಿ ಮುಖಂಡನನ್ನು ಎಚ್ಚರಿಸಿದ ತೆಲಂಗಾಣ ಸಿಎಂ ಕೆಸಿಆರ್

Prasthutha|

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ಭಾನುವಾರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಬಿಜೆಪಿ ರಾಜ್ಯ ಮುಖಂಡ ಬಂಡಿ ಸಂಜಯ್ ನಿರಾಧಾರ ಹೇಳಿಕೆಯನ್ನು ಮುಂದುವರಿಸಿದರೆ ಅವರ ನಾಲಗೆಯನ್ನು ಕತ್ತರಿಸುತ್ತೇನೆ ಎಂದು ಎಚ್ಚರಿಸಿದ್ದಾರೆ.

- Advertisement -

ಈ ವೇಳೆ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಕೆ. ಚಂದ್ರಶೇಖರ್ ರಾವ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರಲ್ಲದೆ ಸಂಜಯ್ ತೆಲಂಗಾಣದ ರೈತರಿಗೆ ಭತ್ತ ಬೆಳೆಯುವಂತೆ ಹೇಳಿ ಉದ್ರೇಕಿಸುತ್ತಿದ್ದಾರೆ ಮತ್ತು ಬಿಜೆಪಿ ಉತ್ಪನ್ನವನ್ನು ಖರೀದಿಸಲಿದೆ ಎಂಬ ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ಭತ್ತವನ್ನು ಖರೀದಿಸುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದೆ. ಈ ನಿಟ್ಟಿನಲ್ಲಿ ರೈತರ ನಷ್ಟವನ್ನು ತಡೆಯಲು ಬೇರೆ ಬೆಳೆಗಳನ್ನು ಆಯ್ಕೆ ಮಾಡುವಂತೆ ಕೃಷಿ ಸಚಿವರು ಅನ್ನಧಾತರಲ್ಲಿ ಮನವಿ ಮಾಡಿದ್ದಾರೆ.

- Advertisement -

ಕೇಂದ್ರ ಸರ್ಕಾರ ಭತ್ತವನ್ನು ಖರೀದಿಸುವುದಿಲ್ಲ ಎಂದು ಹೇಳಿದರೆ, ರಾಜ್ಯ ಬಿಜೆಪಿ ಘಟಕ ಭತ್ತವನ್ನು ಖರೀದಿಸಲಿದೆ ಎಂದು ಹೇಳುತ್ತಿವೆ ಎಂದು ದೂರಿದ ಕೆ.ಸಿ.ಆರ್, ನಿರಾಧಾರ ಹೇಳಿಕೆಯಿಂದ ದೂರವಿರಿ. ನಮ್ಮ ಬಗ್ಗೆ ಅನಾವಶ್ಯಕ ಕಮೆಂಟ್ ಮಾಡಿದರೆ ನಾಲಗೆ ಕತ್ತರಿಸುತ್ತೇವೆ ಎಂದು ಎಚ್ಚರಿಸಿದರು.

ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸಿರುವ ಅಬಕಾರಿ ಶುಲ್ಕವನ್ನು ಕೇಂದ್ರವು ಹಿಂಪಡೆಯಬೇಕು ಎಂದು ಒತ್ತಾಯಿಸಿದ ಕೆಸಿಆರ್, “ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕೇಂದ್ರವು ಸುಳ್ಳು ಹೇಳಿದೆ. 2014ರಲ್ಲಿ 105 ಅಮೆರಿಕನ್ ಡಾಲರ್ ಇದ್ದ ಕಚ್ಚಾ ತೈಲ ಬೆಲೆ ಈಗ 83 ಅಮೆರಿಕನ್ ಡಾಲರ್ ಆಗಿದೆ. ವಿದೇಶಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗಿದೆ ಎಂದು ಬಿಜೆಪಿ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದರು.

Join Whatsapp