ನವದೆಹಲಿ: ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ಭಾರತ ಸರ್ಕಾರ ನೀಡುವ ನಾಲ್ಕನೇ ಅತೀ ದೊಡ್ಡ ನಾಗರಿಕ ಪ್ರಶಸ್ತಿ ‘ಪದ್ಮಶ್ರೀ’ ಪ್ರದಾನ ಮಾಡಲಾಯಿತು.
ಸೋಮವಾರ ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಕ್ಷರ ಸಂತನಿಗೆ ಪದ್ಮಶ್ರೀ ಪ್ರದಾನ ಮಾಡಿದರು.
ಇದೇ ವೇಳೆ ಹಲವು ಸಾಧಕರಿಗೆ ಪದ್ಮಶ್ರೀ ಪ್ರದಾನ ಮಾಡಲಾಯಿತು. ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಎಂ,ವೆಂಕಯ್ಯ ನಾಯ್ಡು, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಸಚಿವ ಸಂಪುಟದ ಸದಸ್ಯರು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡದ ಸಾಂಪ್ರದಾಯಿಕ ವಸ್ತ್ರವಾದ ಬಿಳಿ ಪಂಚೆ ಹಾಗೂ ಬಿಳಿ ಅಂಗಿ ಧರಿಸಿದ್ದ ಹಾಜಬ್ಬ ಅವರು ರಾಷ್ಟ್ರಪತಿಯವರಿಂದ ಪ್ರಶಸ್ತಿ ಸ್ವೀಕರಿಸಿದರು.
ಕಿತ್ತಳೆ ವ್ಯಾಪಾರಿಯಾಗಿದ್ದ ಹರೇಕಳ ಹಾಜಬ್ಬ ಅವರು ಅದರಿಂದ ದೊರೆತ ಹಣವನ್ನು ಶೇಖರಿಸಿಟ್ಟು ಬಡ ಮಕ್ಕಳಿಗಾಗಿ ಶಾಲೆಯೊಂದನ್ನು ನಿರ್ಮಿಸಿದ್ದರು. ಈಗಾಗಲೇ ಹಾಜಬ್ಬ ಅವರಿಗೆ ಹಲವು ಪ್ರಶಸ್ತಿಗಳು ಲಭಿಸಿವೆ.