ಬೆಂಗಳೂರು: ದೇಶದ ಗಡಿಯೊಳಗೆ ಚೀನಾ ಹಳ್ಳಿಯನ್ನೇ ನಿರ್ಮಿಸಿದರೂ, ಪ್ರಧಾನಿ ನರೇಂದ್ರ ಮೋದಿ ಮೌನವಹಿಸಿದ್ದಾರೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಬಿಜೆಪಿ ಸೋಲಿಸಿ, ಭಾರತವನ್ನು ಉಳಿಸಿ ಎಂಬ ಟ್ವಿಟರ್ ಅಭಿಯಾನ ನಡೆಸುತ್ತಿರುವ ಕಾಂಗ್ರೆಸ್ ಪೋಸ್ಟರ್ ಒಂದನ್ನು ಟ್ವೀಟ್ ಮಾಡಿದ್ದು, ‘ಅಂಕೆಯಿಲ್ಲದ ಭಾಷಣಗಳಲ್ಲಿ ಚೀನಾ ಅತಿಕ್ರಮಣವನ್ನು ಉಲ್ಲೇಖಿಸಲು ವಿಫಲರಾಗಿರುವ ಪ್ರಧಾನಿ ಮೋದಿ’ ಎಂದು ಟೀಕಿಸಿದೆ.
‘ಸೇನಾ ನೆಲೆಯಂತೆ ಸಹಕರಿಸಬಲ್ಲ ಹಳ್ಳಿಯೊಂದನ್ನು ಅರುಣಾಚಲ ಪ್ರದೇಶದಲ್ಲಿ ಚೀನಾ ನಿರ್ಮಿಸಿದೆ. ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಚೀನಾ ನಿರ್ಮಿಸಿಕೊಂಡಿರುವ ಅಂತಹ ಹಳ್ಳಿಗಳ ಪೈಕಿ ಇದೊಂದು. ಈ ಬಗ್ಗೆ ಪೆಂಟಗಾನ್ ಕೂಡ ಉಲ್ಲೇಖಿಸಿದೆ. ಇದು ಕಳವಳಕ್ಕೆ ಕಾರಣವಾಗಿದೆ’ ಎಂದು ಕಾಂಗ್ರೆಸ್ ಹೇಳಿದೆ.