ಧ್ವಜ ವಿವಾದ | ಮೆಹಬೂಬಾ ಮುಫ್ತಿ ವಿರುದ್ಧ ‘ದೇಶದ್ರೋಹ’ದ ಆರೋಪ | ಬಂಧನಕ್ಕೆ ಒತ್ತಾಯ

Prasthutha|

ಶ್ರೀನಗರ : ಗೃಹ ಬಂಧನದಿಂದ ಬಿಡುಗಡೆಯಾದ ಬಳಿಕ ತಮ್ಮ ಮೊದಲ ಅಧಿಕೃತ ಪತ್ರಿಕಾ ಹೇಳಿಕೆಯಲ್ಲಿ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ, ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ರಾಷ್ಟ್ರಧ್ವಜಕ್ಕೆ ಅವಮಾನಿಸಿದ್ದಾರೆ, ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು ಮತ್ತು ಬಂಧಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮೆಹಬೂಬಾ ಮುಫ್ತಿ ಜಮ್ಮು-ಕಾಶ್ಮೀರದ ಧ್ವಜ ಹಿಡಿದು, “ಇದು ನನ್ನ ಧ್ವಜ’’ ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

- Advertisement -

ರಾಜ್ಯದ ಧ್ವಜವನ್ನು ಮರಳಿ ಹಾರಿಸಲು ತಾವು ಹೋರಾಟ ಮಾಡುವುದಾಗಿ ಮೆಹಬೂಬಾ ಹೇಳಿದ್ದಾರೆ. ಅಲ್ಲದೆ, ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ಮರಳಿ ಪಡೆಯಲು ಪ್ರಯತ್ನಿಸುವುದಾಗಿ ಘೋಷಿಸಿದ್ದಾರೆ.

“ಇದು ನನ್ನ ಧ್ವಜ, ಈ ಧ್ವಜ ಮರಳಿ ಬಂದಾಗ, ನಾವು ಆ ಧ್ವಜ (ಭಾರತೀಯ ತ್ರಿವರ್ಣ ಧ್ವಜ)ವನ್ನೂ ಹಾರಿಸುತ್ತೇವೆ’’ ಎಂದು ಮೆಹಬೂಬಾ ಹೇಳಿದ್ದಾರೆ. “ನಮ್ಮ ಧ್ವಜ ಮರಳಿ ದೊರೆಯುವವರೆಗೆ, ನಾವು ಬೇರೆ ಯಾವುದೇ ಧ್ವಜ ಹಾರಿಸುವುದಿಲ್ಲ. ಆ ಧ್ವಜದೊಂದಿಗೆ ಈ ಧ್ವಜದ ಜೊತೆ ನಮ್ಮ ಸಂಬಂಧ ಬೆಸೆದಿದೆ’’ ಎಂದು ಅವರು ಹೇಳಿದ್ದಾರೆ.

- Advertisement -

ಇದನ್ನು ಖಂಡಿಸಿರುವ ಬಿಜೆಪಿ ಜಮ್ಮು-ಕಾಶ್ಮೀರ ಅಧ್ಯಕ್ಷ ರವೀಂದರ್ ರೈನಾ, ಕಾಶ್ಮೀರದ ಜನತೆಯನ್ನು ಮೆಹಬೂಬಾ ಪ್ರಚೋದಿಸುತ್ತಿದ್ದಾರೆ. ಏನಾದರೂ ಸಮಸ್ಯೆಗಳಾದಲ್ಲಿ ಪರಿಣಾಮ ಎದುರಿಸಲು ಆಕೆ ಸಿದ್ಧರಿರಬೇಕು ಎಂದು ಹೇಳಿದ್ದಾರೆ. ಆಕೆಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ, ಆಕೆಯನ್ನು ಜೈಲಿಗೆ ಕಳುಹಿಸುವಂತೆ ಅವರು ಒತ್ತಾಯಿಸಿದ್ದಾರೆ.

Join Whatsapp