ಟ್ರಂಪ್ ‘ಕೊಳಕು ಭಾರತ” ಹೇಳಿಕೆ: ಟ್ವಿಟ್ಟರ್ ನಲ್ಲಿ ಟ್ರೆಂಡ್ ಆದ “ಹೌಡಿ ಮೋದಿ!”

Prasthutha|

ಹೊಸದಿಲ್ಲಿ: ಶುಕ್ರವಾರದ ಅಧ್ಯಕ್ಷೀಯ ಚರ್ಚೆಯ ವೇಳೆ ಭಾರತದಲ್ಲಿ ‘ಕೊಳಕು ಗಾಳಿ’ ಇದೆಯೆಂಬ ಡೊನಾಲ್ಡ್ ಟ್ರಂಪ್ ಹೇಳಿಕೆಯು ಟ್ವಿಟ್ಟರ್ ನಲ್ಲಿ ತೀವ್ರ ಪ್ರತಿಕ್ರಿಯೆಗಳು ಹರಿದು ಬರಲು ಕಾರಣವಾಗಿದೆ. ದೇಶದಲ್ಲಿ ಹೆಚ್ಚಿರುವ ಮಾಲಿನ್ಯ, ಟ್ರಂಪ್ ಜೊತೆ ಮೋದಿ ಸ್ನೇಹ, ಕಳೆದ ವರ್ಷದ ‘ಹೌಡಿ ಮೋದಿ’ ಕಾರ್ಯಕ್ರಮ – ಇವೆಲ್ಲವನ್ನು ಟ್ವಿಟ್ಟರ್ ನಲ್ಲಿ ಕೆದಕಲಾಗಿದೆ.

ಟ್ರಂಪ್ ಕಳೆದ ತಿಂಗಳು ಪ್ರಧಾನಿ ಮೋದಿಯವರನ್ನು ‘ಶ್ರೇಷ್ಠ ಸ್ನೇಹಿತ’ ಎಂದು ಹೊಗಳಿದ್ದರು ಮತ್ತು ಮುಂದಿನ ತಿಂಗಳು ನಡೆಯಲಿರುವ ಚುನಾವಣೆಯಲ್ಲಿ ಭಾರತೀಯ ಅಮೆರಿಕನ್ನರ ಬೆಂಬಲವಿದೆ ಎಂದು ಪ್ರತಿಪಾದಿಸಿದ್ದರು. ಇಂದು ನಡೆದ ಚರ್ಚೆಯಲ್ಲಿ ಪ್ಯಾರಿಸ್ ಒಪ್ಪಂದದಿಂದ ಅಮೆರಿಕಾ ಹಿಂದೆ ಸರಿದ ಕುರಿತು ಮಾತುಕತೆಗಳು ನಡೆಯುವಾಗ ಭಾರತವನ್ನು ‘ಕೊಳಕು ಗಾಳಿ’ ಯ ರಾಷ್ಟ್ರವೆಂದು ಉಲ್ಲೇಖಿಸಿದ್ದರು.

- Advertisement -

ಅವರ ಹೇಳಿಕೆಯ ಕಾರಣದಿಂದ ಟ್ವಿಟ್ಟರ್ ನಲ್ಲಿ “#FilthyIndia”  (ಕೊಳಕು ಭಾರತ) ಮತ್ತು “Howdy, Modi” ಟ್ರೆಂಡಿಂಗ್ ಆಗುತ್ತಿದೆ. ಹಲವರು ಮಾಲಿನ್ಯಯುತ ನಗರ ಪ್ರದೇಶಗಳ ಚಿತ್ರಗಳನ್ನು ಪೋಸ್ಟ್ ಮಾಡಿ ನೆಟ್ಟಿಗರು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಓರ್ವ ಟ್ವಿಟ್ಟರ್ ಬಳಕೆದಾರ, ಸರಕಾರ ‘ಮಂದಿರ’, ಮೂರ್ತಿಗಳಿಗಾಗಿ ಮಾಡುವ ಖರ್ಚನ್ನು ಕುಗ್ಗಿಸಿ ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಲಹೆಯಿತ್ತಿದ್ದಾರೆ.

ಇನ್ನೋರ್ವ ಬಳಕೆದಾರ ಮೋದಿ, ಟ್ರಂಪ್ ರನ್ನು ತಬ್ಬಿಕೊಳ್ಳುವ ಚಿತ್ರವೊಂದನ್ನು ಪೋಸ್ಟ್ ಮಾಡಿ, “ಈ ಕಾರ್ಯಕ್ರಮದ ಬಳಿಕ (‘ಹೌಡಿ ಮೋದಿ!”ಯನ್ನು ಉಲ್ಲೇಖಿಸಿ) ಟ್ರಂಪ್ ಭಾರತವನ್ನು ಕೊಳಕು ಎಂದು ಕರೆದರು” ಎಂದು ಬರೆದಿದ್ದಾರೆ.

ಇನ್ನೋರ್ವ ಬಳಕೆದಾರ ಟ್ರಂಪ್ ಭೇಟಿಯ ವೇಳೆ ನಗರವನ್ನು ಸುಂದರಗೊಳಿಸಲು ಸರಕಾರ ಅಗಾಧ ಪ್ರಮಾಣದ ಹಣವನ್ನು ಬಳಸಿರುವುದನ್ನು ಉಲ್ಲೇಖಿಸಿದ್ದಾರೆ.

- Advertisement -