ಅಹ್ಮದಾಬಾದ್: ದೇವಸ್ಥಾನಕ್ಕೆ ಪ್ರವೇಶಿಸಿದ್ದಾರೆ ಎಂಬ ನೆಪದಲ್ಲಿ ದಲಿತ ಕುಟುಂಬದ ಮೇಲೆ ಮೇಲ್ವರ್ಗದವರು ಎನ್ನಲಾದ ಗುಂಪೊಂದು ತೀವ್ರವಾಗಿ ಹಲ್ಲೆ ನಡೆಸಿರುವ ಘಟನೆ ಗುಜರಾತಿನ ಕಛ್ ಜಿಲ್ಲೆಯಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿ ಐವರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ದೇವಸ್ಥಾನ ಪ್ರವೇಶಿಸದಂತೆ ಆರೋಪಿಗಳ ಪೈಕಿ ಒಬ್ಬಾತ ಎಚ್ಚರಿಕೆ ನೀಡಿದ್ದ ಎಂದು ದಲಿತ ಕುಟುಂಬದ ಸದಸ್ಯರಾದ ಗೋವಿಂದ ವಘೇಲಾ ಆರೋಪಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸದೆ ಅವರು ಮತ್ತು ಅವರ ಕುಟುಂಬದ ಸದಸ್ಯರು ದೇವಸ್ಥಾನಕ್ಕೆ ಪ್ರವೇಶಿಸಿ, ಅಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದ್ದರು. ಇದರಿಂದ ಆಕ್ರೋಶಗೊಂಡ ಮೇಲ್ಜಾತಿ ಗುಂಪು ನಮ್ಮ ಮೇಲೆ ಕೊಡಲಿ ಮತ್ತು ರಾಡ್ ಗಳಿಂದ ಹಲ್ಲೆ ನಡೆಸಿದೆ ಎಂದು ಅವರು ಆರೋಪಿಸಿದ್ದಾರೆ.
ಹೊಲದಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ದುಷ್ಕರ್ಮಿಗಳು ನಮ್ಮ ಮೇಲೆ ದಾಳಿ ನಡೆಸಿ, ನನ್ನ ಬಳಿಯಿದ್ದ ಫೋನ್, ನಗದನ್ನು ಲೂಟಿ ಮಾಡಿ ಆಟೋರಿಕ್ಷಾವನ್ನು ಪುಡಿಗಟ್ಟಿದ್ದಾರೆ. ಮಾತ್ರವಲ್ಲ ಮನೆಯಲ್ಲಿದ್ದ ತಂದೆಯನ್ನು ಕೊಲ್ಲುವ ಉದ್ದೇಶದಿಂದ ಅಲ್ಲಿಗೆ ತೆರಳಿದ್ದರು ಎಂದು ವಘೇಲಾ ಮಾಧ್ಯಮಕ್ಕೆ ತಿಳಿಸಿದ್ದಾರೆ. ಈ ಸಂಬಂಧ ದುಷ್ಕರ್ಮಿಗಳ ದಾಳಿಯಿಂದಾಗಿ ನನ್ನ ತಲೆ, ಕೈ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ತಿಳಿಸಿದರು.
ಸದ್ಯ ಪೊಲೀಸರು ಆರೋಪಿಗಳ ವಿರುದ್ಧ ಕೊಲೆಯತ್ನ, ಅಕ್ರಮ ಪ್ರವೇಶ, ಕ್ರಿಮಿನಲ್ ಚಟುವಟಿಕೆಗೆ ಪಿತೂರಿ ಮತ್ತು ಷಡ್ಯಂತ್ರ್ಯ, ಎಸ್.ಸಿ/ ಎಸ್.ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.