ಬಂಟ್ವಾಳ: ತ್ರಿಪುರಾದಲ್ಲಿ ಮುಸ್ಲಿಮರ ಮೇಲಿನ ದಾಳಿ ಖಂಡಿಸಿ ಪಾಪ್ಯುಲರ್ ಫ್ರಂಟ್ ಪ್ರತಿಭಟನೆ

Prasthutha|

ಬಂಟ್ವಾಳ: ತ್ರಿಪುರಾದಲ್ಲಿ ಮುಸ್ಲಿಮರ ಮೇಲಿನ ಸರಕಾರಿ ಪ್ರೇರಿತ ದಾಳಿಯನ್ನು ನಿಲ್ಲಿಸುವಂತೆ ಒತ್ತಾಯಿಸಿ ಪಾಪ್ಯುಲರ್ ಫ್ರಂಟ್ ರಾಷ್ಟ್ರವ್ಯಾಪಿ ಕರೆ ನೀಡಿದ್ದ ಪ್ರತಿಭಟನೆಯ ಅಂಗವಾಗಿ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಬಿ.ಸಿ ರೋಡು ಕೈಕಂಬ ಜಂಕ್ಷನ್ ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.

- Advertisement -

ಈ ಸಂದರ್ಭದಲ್ಲಿ ಮಾತನಾಡಿದ ಪಾಪ್ಯುಲರ್ ಫ್ರಂಟ್ ಬಂಟ್ವಾಳ ತಾಲೂಕು ಸಮಿತಿ ಸದಸ್ಯ ಶರೀಫ್ ಅಮ್ಮೆಮ್ಮಾರ್, ಯಾವುದೇ ಧರ್ಮ, ಇತರ ಧರ್ಮಗಳನ್ನು ಅವಹೇಳಿಸಲು ಅಥವಾ ಇತರ ಧರ್ಮದ ಅನುಯಾಯಿಗಳ ಮೇಲೆ ಆಕ್ರಮಣ ನಡೆಸಲು ಅನುಮತಿಸುವುದಿಲ್ಲ. ತ್ರಿಪುರದಲ್ಲಿ ಮುಸ್ಲಿಮರ ಮಸೀದಿ, ಮನೆಗಳ ಮೇಲೆ ದಾಳಿ ನಡೆಸಿದ ಸಂಘ ಪರಿವಾರದ ದುಷ್ಕೃತ್ಯದಿಂದ ಅಲ್ಲಿ ಪ್ರಕ್ಷುಬ್ಧತೆಯ ವಾತಾವರಣ ಸೃಷ್ಟಿಯಾಗಿದೆ. ಸಂವಿಧಾನ ನೀಡಿದ ಎಲ್ಲಾ ಹಕ್ಕುಗಳನ್ನು ಉಪಯೋಗಿಸಿ ಸಂಘಪರಿವಾರದ ಆಕ್ರಮಣವನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಬೇಕಾಗಿದೆ ಎಂದು ಹೇಳಿದರು.

ಪ್ರತಿಭಟನೆಯ ನೇತೃತ್ವವನ್ನು ಪಾಪ್ಯುಲರ್ ಫ್ರಂಟ್ ಬಂಟ್ವಾಳ ತಾಲೂಕು ಅಧ್ಯಕ್ಷ ಸಲೀಮ್ ಕೆ ವಹಿಸಿದ್ದರು, ದ.ಕ ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್, ಎಸ್.ಡಿ.ಪಿ.ಐ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಎಸ್.ಎಚ್ ಹಾಗೂ ಹನೀಫ್ ಮುಸ್ಲಿಯಾರ್, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಜಿಲ್ಲಾ ಮುಖಂಡರಾದ ಎ.ಕೆ ಪೈಝಿ ಈ ಸಂದರ್ಭದಲ್ಲಿ ಮಾತನಾಡಿದರು.
ಪ್ರತಿಭಟನಕಾರರು ತ್ರಿಪುರದಲ್ಲಿ ನಡೆದ ಹಿಂಸೆಯನ್ನು ಖಂಡಿಸಿ ಘೋಷಣೆ ಕೂಗಿದರು. ಖಾದರ್ ಅಮ್ಮೆಮ್ಮಾರ್ ಸ್ವಾಗತಿಸಿ ಕಬೀರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.



Join Whatsapp