ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇನ್ನಿಲ್ಲ

Prasthutha|

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ (46) ಅವರಿಗೆ ಹೃದಯಾಘಾತವಾಗಿದ್ದು, ಇಂದು  ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

- Advertisement -

ಇಂದು ಬೆಳಿಗ್ಗೆ ಜಿಮ್ ಕಸರತ್ತು ನಡೆಸುತ್ತಿದ್ದಾಗ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆಂದು ಮೂಲಗಳು ತಿಳಿಸಿವೆ.

ಕನ್ನಡ ಸಿನಿಮಾ ರಂಗದಲ್ಲಿ ಪವರ್ ಸ್ಟಾರ್ ಎಂದೇ ಹೆಸರುಗಳಿಸಿರುವ ಪುನೀತ್, ಅವರು ಮೇರು ನಟ ರಾಜ್ ಕುಮಾರ್ ಅವರ ಪುತ್ರರಾಗಿದ್ದಾರೆ. ಅವರು 17  ಮಾರ್ಚ್ 1975 ಜನಿಸಿದರು. ಅವರು ಒಬ್ಬ ನಟ ಗಾಯಕ ನಿರ್ಮಾಪಕ ದೂರದರ್ಶನ ನಿರೂಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

- Advertisement -

ಪುನೀತ್ ಸಿನಿಮಾ ಜೀವನ

1975, ಮಾರ್ಚ್ 17 ರಂದು ಚೆನ್ನೈನ ಕಲ್ಯಾಣಿ ಆಸ್ಪತ್ರೆಯಲ್ಲಿ ವರನಟ ಡಾ.ರಾಜಕುಮಾರ್ ಮತ್ತು ಪಾರ್ವತಮ್ಮರವರ ಕಿರಿಯ ಪುತ್ರನಾಗಿ ಜನಿಸಿದರು. ಇವರ ಹಿರಿಯ ಸಹೋದರರಾದ ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಕೂಡ ಕನ್ನಡ ಚಿತ್ರರಂಗದ ಯಶಸ್ವಿ ನಾಯಕ ನಟರು.

ಇವರು ರಾಜ್ ದಂಪತಿ ಕಿರಿಯ ಮಗುವಾಗಿದ್ದರಿಂದ ಬಹು ಅಕ್ಕರೆಯಲ್ಲಿ ಬೆಳೆದರು. ಪುನೀತ್ ಮತ್ತು ಸಹೋದರಿ ಪೂರ್ಣಿಮಾರನ್ನು,ರಾಜ್ ತಮ್ಮ ಬಹುತೇಕ ಚಿತ್ರಗಳ ಶೂಟಿಂಗ್‌ ಗೆ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಹೀಗಾಗಿ ಬಾಲ್ಯದಿಂದಲೇ ಕಲೆಯ ಜೊತೆಗಿನ ನಂಟು ಆರಂಭವಾಯಿತು.

ಪುನೀತ್ ಆರು ತಿಂಗಳು ಮಗುವಿದ್ದಾಗ 1976 ರಲ್ಲಿ ತೆರೆಕಂಡ `ಪ್ರೇಮದ ಕಾಣಿಕೆ’ ಚಿತ್ರದ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡರು. ನಂತರ ಬಂದ `ಸನಾದಿ ಅಪ್ಪಣ್ಣ’,`ತಾಯಿಗೆ ತಕ್ಕ ಮಗ’,`ವಸಂತ ಗೀತ’,`ಭೂಮಿಗೆ ಬಂದ ಭಗವಂತ’,`ಭಾಗ್ಯವಂತರು’ ಮುಂತಾದ ಚಿತ್ರಗಳಲ್ಲಿ ನಟಿಸಿ ತಮ್ಮ ಅಭಿನಯ ಪ್ರೌಢಿಮೆ ಮೆರೆದರು.

ಭಾಗ್ಯವಂತ ಚಿತ್ರದ `ಬಾನ ದಾರಿಯಲ್ಲಿ ಸೂರ್ಯ’, ಚಲಿಸುವ ಮೋಡಗಳು ಚಿತ್ರದ `ಕಾಣದಂತೆ ಮಾಯವಾದನೋ’,ಯಾರಿವನು ಚಿತ್ರದ `ಕಣ್ಣಿಗೆ ಕಾಣುವ ದೇವರು’ ಮುಂತಾದ ಗೀತೆಗಳನ್ನು ಹಾಡಿ ಹಿನ್ನೆಲೆ ಗಾಯಕರಾಗಿಯೂ ಪ್ರಶಂಸೆ ಪಡೆದರು. `ಚಲಿಸುವ ಮೋಡಗಳು’ ಮತ್ತು `ಎರಡು ನಕ್ಷತ್ರಗಳು’ ಚಿತ್ರದ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದರು.

ಗಾಯಕನಾಗಿ ಸುಮಾರು ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಡಿರುವ ಪುನೀತ್, ಗಾಯನದಿಂದ ಬರುವ ಸಂಪೂರ್ಣ ಹಣವನ್ನು ಸಮಾಜಸೇವೆಗೆ ವಿನಿಯೋಗಿಸುತ್ತಾರೆ. ಕಿರುತೆರೆಯಲ್ಲಿ ನಿರೂಪಕರಾಗಿ ಕನ್ನಡದ ಕೋಟ್ಯಧಿಪತಿಯ ಎರಡು ಸೀಸನ್‌ ಗಳನ್ನು ಮತ್ತು ಫ್ಯಾಮಿಲಿ ಪವರ್ ಎಂಬ ರಿಯಾಲಿಟಿ ಶೋಗಳನ್ನು ನಿರೂಪಿಸಿದ್ದಾರೆ. ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದ ಮೊಟ್ಟಮೊದಲ ಅತಿಥಿಯಾಗಿ ಭಾಗವಹಿಸಿದ್ದು ವಿಶೇಷ.

ಮೈಸೂರಿನ ಶಕ್ತಿ ಧಾಮ ಆಶ್ರಮದ ಮೂಲಕ ಸಮಾಜ ಸೇವೆಯಲ್ಲಿ ತೊಡಗಿರುವ ಪುನೀತ್ `ಬೆಂಗಳೂರು ಪ್ರೀಮೀಯರ್ ಪುಟ್‌ ಬಾಲ್ ತಂಡದ ಒಡೆತನವನ್ನು ಹೊಂದಿದ್ದಾರೆ. ಕರ್ನಾಟಕ ಸರ್ಕಾರದ ನಂದಿನಿ ಹಾಲು ಉತ್ಪನ್ನಗಳು ಮತ್ತು LED ಬಲ್ಬ್‌ಗಳ ರಾಯಭಾರಿಯಾಗಿ ಕೂಡ ಪ್ರಸ್ತುತರು. ಒಂದು ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಾಯಭಾರಿಯಾಗಿದ್ದರು.

1999 ರಲ್ಲಿ ಚಿಕ್ಕಮಗಳೂರಿನವರಾದ ಅಶ್ವಿನಿಯವರನ್ನು ಕೈಹಿಡಿದರು. ಈ ದಂಪತಿಗೆ ಧೃತಿ ಮತ್ತು ವಂದಿತಾ ಎಂಬ ಪುತ್ರಿಯರಿದ್ದಾರೆ.

ಪುನೀತ್ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಪ್ರಮುಖರು, ರಾಜಕೀಯ ನಾಯಕರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆಗೊಳಿಸಲಾಗಿದೆ. ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.



Join Whatsapp