ಡ್ರಗ್ಸ್ ನಿಯಂತ್ರಣದ ಹೆಸರಿನಲ್ಲಿ ಸಾರ್ವಜನಿಕರ ಮೊಬೈಲ್ ಪರಿಶೀಲಿಸುತ್ತಿರುವ ಪೊಲೀಸರು: ವ್ಯಾಪಕ ವಿರೋಧ

Prasthutha|

► ರಸ್ತೆಯಲ್ಲಿ ತಡೆದು ನಿಲ್ಲಿಸಿ ವಾಟ್ಸಾಪ್ ಸಂದೇಶ ಪರಿಶೀಲನೆ

- Advertisement -

ಹೈದರಾಬಾದ್: ಹೈದರಾಬಾದ್ ನಿಂದ ಗಾಂಜಾ ಸಂಪೂರ್ಣವಾಗಿ ಇಲ್ಲವಾಗುವವರೆಗೆ ವಿರಮಿಸುವುದಿಲ್ಲ ಎಂದು ಸಂಕಲ್ಪ ಮಾಡಿರುವ ಹೈದರಾಬಾದ್ ಪೊಲೀಸರು ಈ ನಿಟ್ಟಿನಲ್ಲಿ ವ್ಯಾಪಕ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ನಗರದಲ್ಲಿ ಬಂಧನಕ್ಕೆ ಸಿಲುಕಿದ ಎಲ್ಲ ಗಾಂಜಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಂದೇಶಗಳು, ಚಾಟ್ ಗಳು, ಮಾತುಕತೆಗಳನ್ನು ಹುಡುಕುವುದರಲ್ಲಿ ಪೂರ್ಣವಾಗಿ ತೊಡಗಿಕೊಂಡಿದ್ದಾರೆ.


ಕಳೆದ ಕೆಲವು ದಿನಗಳಿಂದ ನಗರ ಪೊಲೀಸ್ ಆಯುಕ್ತರ ಆದೇಶದಂತೆ ಎಲ್ಲ ಪೊಲೀಸ್ ಠಾಣೆ ಸಿಬ್ಬಂದಿ ಗಾಂಜಾ ಕಳ್ಳ ಸಾಗಣೆ, ವಿತರಣೆ, ಮಾರಾಟ, ಸೇವನೆಗಳ ಮೇಲೆ ಕಣ್ಣಿಟ್ಟು ದಾಳಿಗಳಲ್ಲಿ ತೊಡಗಿಕೊಂಡಿದ್ದಾರೆ. ಆ ಸಂಬಂಧ ಒಂದು ವೀಡಿಯೋ ಈಗ ವೈರಲ್ ಆಗಿದೆ. ಅದರಲ್ಲಿ ಪೊಲೀಸರು ತಪಾಸಣೆಗೆ ಮೊಬೈಲ್ ಫೋನ್ ಕೇಳುತ್ತಿರುವ ದೃಶ್ಯಗಳಿವೆ. ಫೋನುಗಳ ಸರ್ಚ್ ಬಾಕ್ಸ್ ನಲ್ಲಿ ಅವರು ಗಾಂಜಾದಂಥ ಸರ್ಚ್ ನೀಡಿ ಹುಡುಕುತ್ತಾರೆ. ಅದನ್ನು ಹೇಗೆಲ್ಲ ಕರೆಯುತ್ತಾರೆ ಎನ್ನುವುದರ ಮೇಲೆ ಹುಡುಕು ಕೆಲಸ ನಡೆಸುತ್ತಾರೆ. ಆ ಬಗೆಗಿನ ಚಾಟ್ ಗಳನ್ನು ಪತ್ತೆ ಹಚ್ಚುವುದು ಅವರ ಮೊದಲ ಆದ್ಯತೆಯಾಗಿದೆ.

- Advertisement -


ದಕ್ಷಿಣ ವಲಯದ ಉಪ ಕಮಿಷನರ್ ಗಜರಾವ್ ಭೂಪಾಲ್ ಅವರು ಪೊಲೀಸರು ಮೊಬೈಲ್ ಗಳನ್ನು ಪರಿಶೀಲಿಸುತ್ತಿರುವುದು ನನಗೆ ಗೊತ್ತಿದೆ ಎಂದು ಸ್ಪಷ್ಟ ಪಡಿಸಿದರು. “ಫೋನ್ ಚೆಕ್ ಮಾಡುತ್ತಿರುವ ವಿಷಯ ನನ್ನ ಅರಿವಿಗೆ ಬಂದಿದೆ. ಆದರೆ ನಾವು ಯಾರನ್ನೂ ಒತ್ತಾಯಿಸುವುದಿಲ್ಲ ಇಲ್ಲವೇ ಫೋನ್ ಕಿತ್ತುಕೊಳ್ಳುವುದಿಲ್ಲ. ಜನರು ಸಹಕಾರ ನೀಡುತ್ತಿದ್ದಾರೆ, ಯಾವುದೇ ದೂರು ಇಲ್ಲ. ಆದ್ದರಿಂದ ಇದರಲ್ಲಿ ಕಾನೂನು ಬಾಹಿರವಾದುದು ಇದೆ ಎಂದು ನಾನು ತಿಳಿಯುವುದಿಲ್ಲ” ಎಂದು ಅವರು ಹೇಳುತ್ತಾರೆ.


ಒಂದು ವೇಳೆ ಪೊಲೀಸರು ಕೇಳಿದಾಗ ಸಾರ್ವಜನಿಕರು ಫೋನ್ ನೀಡಲು ನಿರಾಕರಿಸಿದರೆ ಎಂಬ ಪ್ರಶ್ನೆಗೆ ಡಿಸಿಪಿ ಹೀಗೆ ಹೇಳಿದರು. “ಸಾರ್ವಜನಿಕರು ಫೋನ್ ನೀಡಲು ನಿರಾಕರಿಸಬಹುದು. ಆಗ ನಾವು ಕಾನೂನುಬದ್ಧವಾಗಿ ಯಾವ ದಾರಿ ಇದೆ ಎಂಬುದರ ಬಗೆಗೆ ಆಲೋಚಿಸುತ್ತೇವೆ. ಇಲ್ಲಿಯವರೆಗೆ ಅಂಥ ಪ್ರಮೇಯವೇನೂ ಬಂದಿಲ್ಲ. ಈ ಬಗೆಗೆ ಯಾವ ವಿಶೇಷ ಸೂಚನೆಯನ್ನೂ ನೀಡಿಲ್ಲ ಮತ್ತು ಇಲ್ಲಿಯವರೆಗೆ ಯಾವುದೇ ಸಮಸ್ಯೆ ಎದುರಾಗಿಲ್ಲ.” ಎಂದೂ ಅವರು ಹೇಳಿದರು.


ಆದರೆ ಸಾಮಾಜಿಕ ಕಾರ್ಯಕರ್ತರು ಇದನ್ನು ಖಂಡಿಸಿದ್ದಾರೆ. ಇದು ಕಾನೂನು ಬಾಹಿರ ಮಾತ್ರವಲ್ಲ. ಅಸಾಂವಿಧಾನಿಕ ಎಂಬುದು ಅವರ ವಾದ. ಸುಪ್ರೀಂ ಕೋರ್ಟು 2017ರಲ್ಲಿ ಖಾಸಗಿತನ ಪ್ರತಿಯೊಬ್ಬರ ಮೂಲಭೂತ ಹಕ್ಕು ಎಂದು ಹೇಳಿದೆ. ಈ ತೀರ್ಪು ಭಾರತೀಯರ, ನಾಗರಿಕರ ಹಕ್ಕುಗಳ ಬಗೆಗೆ ಸ್ಪಷ್ಟ ಸೂಚನೆಯನ್ನು ನೀಡಿದೆ. ಈ ಬಗೆಗೆ ಅಪೆಕ್ಸ್ ಕೋರ್ಟಿನ 9 ಮಂದಿ ಜಸ್ಟಿಸ್ ಗಳ ಪೀಠವು ಒಮ್ಮತದ ತೀರ್ಪು ನೀಡಿದೆ. ಖಾಸಗಿತನ ಎಂಬುದು ಸಂವಿಧಾನದ 21ನೇ ಅನುಚ್ಛೇದದಂತೆ ಪ್ರತಿಯೊಬ್ಬರ ಆಂತರಿಕ ವಿಷಯವಾಗಿದ್ದು, ಈ ಸ್ವಾತಂತ್ರ್ಯವನ್ನು ಸಂವಿಧಾನದ III ನೆಯ ಭಾಗವು ಖಾತರಿಪಡಿಸಿದೆ ಎಂದು ಈ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.


ಹೈದರಾಬಾದ್ ಪೊಲೀಸರು ಮಾಡುತ್ತಿರುವುದು ಖಾಸಗಿತನ ರಕ್ಷಣೆಯ ಉಲ್ಲಂಘನೆಯಾಗಿದೆ ಎಂದು ತೆಲಂಗಾಣ ಹೈಕೋರ್ಟಿನ ವಕೀಲ ಕರಂ ಕೋಮಿರೆಡ್ಡಿ ಹೇಳಿದರು. “ಖಾಸಗಿತನದ ಹಕ್ಕು ಸಂವಿಧಾನಾತ್ಮಕವಾದುದಾಗಿದೆ; ಅದರ ಚೌಕಟ್ಟಿನೊಳಗೆ ಬರುತ್ತದೆ. ಅನುಚ್ಛೇದ 21ರಂತೆ ಮೂಲಭೂತ ಹಕ್ಕುಗಳು ಸ್ವಾತಂತ್ರ್ಯದ ಭಾಗವಾಗಿದ್ದು ಅದರಲ್ಲಿ ಖಾಸಗಿತನ ಅಡಕವಾಗಿದೆ ಎಂದು ಸುಪ್ರೀಂ ಕೋರ್ಟು ಸ್ಪಷ್ಟವಾಗಿ ತನ್ನ ತೀರ್ಪಿನಲ್ಲಿ ಹೇಳಿದೆ. ಪೊಲೀಸರಿಗೆ ದಿಢೀರನೆ ಯಾರದೇ ಫೋನು ಚೆಕ್ ಮಾಡುವ ಅಧಿಕಾರ ಇಲ್ಲ. ಪೊಲೀಸರು ಹಾಗೆ ಮಾಡಬೇಕೆಂದರೆ ಕಾನೂನಿನ ನಿಯಮಾವಳಿಗಳನ್ನು ಪಾಲಿಸಬೇಕು. ಹೈದರಾಬಾದ್ ಪೊಲೀಸರು ಈಗ ಮಾಡುತ್ತಿರುವುದು ಅನಗತ್ಯದ, ಕಾನೂನುಬಾಹಿರ, ಅಸಾಂವಿಧಾನಿಕ ಕೆಲಸವಾಗಿದ್ದು, ನಾಗರಿಕರ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದರು.


ಹಿಂದೆಯೂ ಹೈದರಾಬಾದ್ ಪೊಲೀಸರು ಆಪರೇಶನ್ ಚಬೂತ್ರ ಹೆಸರಿನಲ್ಲಿ ಜನರ ಫೋಟೋ ಮತ್ತು ಬೆರಳಚ್ಚು ಸಂಗ್ರಹಿಸಿದ್ದರು; ಆ ಮೂಲಕ ವಿವಾದಕ್ಕೆ ಗುರಿಯಾಗಿದ್ದರು. ಆಗಲೂ ಜನರು ಬೆರಳಿನ ಗುರುತು ನೀಡಲು ಇಲ್ಲವೇ ಫೋಟೋ ನೀಡಲು ನಿರಾಕರಿಸಬಹುದು ಎಂದು ಪೊಲೀಸರು ಸಮಜಾಯಿಸಿ ನೀಡಿದ್ದರು. ಆದರೆ ಪೊಲೀಸರು ಅಂಥ ಯಾವುದೇ ಅವಕಾಶ ನೀಡದೆ ಒತ್ತಾಯದಿಂದ ಬೆರಳ ಗುರುತು, ಫೋಟೋ ತೆಗೆದುಕೊಂಡಿದ್ದಾರೆ ಎಂದು ಸಾಕಷ್ಟು ಜನರು ದೂರು ನೀಡಿದ್ದರು.


ವಾರಂಟ್ ಇಲ್ಲದೆ, ಯಾವುದೇ ಮೊಕದ್ದಮೆ ಇಲ್ಲದೆ ಇನ್ನೊಬ್ಬರ ಮೊಬೈಲ್ ಪರಿಶೀಲಿಸುವುದು ಪೂರ್ಣ ಕಾನೂನು ವಿರೋಧಿ ಕೃತ್ಯ ಎನ್ನುತ್ತಾರೆ ವಿಷಯ ತಜ್ಞರು. ಮೊಬೈಲ್ ಎನ್ನುವುದು ಕೂಡ ಒಬ್ಬರ ಅವಿಭಾಜ್ಯ ಖಾಸಗಿತನವಾಗಿದ್ದು ಸರಿಯಾದ ಕಾರಣ, ಸರಿಯಾದ ವಿಧಾನ ಅನುಸರಿಸದೆ ಅದನ್ನು ಯಾರೂ ಪರಿಶೀಲಿಸುವಂತಿಲ್ಲ ಎಂದು ತಜ್ಞರು ವಿವರಿಸುತ್ತಾರೆ.



Join Whatsapp