ಹೋಂ ವರ್ಕ್ ಮಾಡದಕ್ಕಾಗಿ ಬಾಲಕನನ್ನು ಕ್ರೂರವಾಗಿ ಥಳಿಸಿ ಕೊಂದ ಶಿಕ್ಷಕ

Prasthutha|

ರಾಜಸ್ತಾನ: ಶಿಕ್ಷಕನೋರ್ವ ಏಳನೇ ತರಗತಿ ವಿದ್ಯಾರ್ಥಿಯೋರ್ವನನ್ನು ಮನಬಂದಂತೆ ಥಳಿಸಿ ಕೊಲೆ ಮಾಡಿದ ಆಘಾತಕಾರಿ ಘಟನೆ ರಾಜಸ್ತಾನದ ಚುರು ಜಿಲ್ಲೆಯ ಸಲಸರ್ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲಾಸಾರ್ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. ಹೋಮ್ವರ್ಕ್ ಮಾಡಿಲ್ಲ ಎಂದು ಶಿಕ್ಷಕ ಮಗುವನ್ನು ನೆಲಕ್ಕೆ ಹಾಕಿ ಒದ್ದು, ಮುಷ್ಟಿಕಟ್ಟಿ ರಾಕ್ಷಸೀಯವಾಗಿ ಹೊಡೆದಿದ್ದಾನೆ. 13 ವರ್ಷದ ಬಾಲಕ ಹೊಡೆತದ ತೀವ್ರತೆಗೆ ಪ್ರಾಣ ಬಿಟ್ಟಿದ್ದಾನೆ.

- Advertisement -

ತುಂಬಾ ಹೊಡೆತದ ಬಳಿಕ ಬಾಲಕನ ಮೂಗಿನಿಂದ ರಕ್ತ ಬರಲಾರಂಭಿಸಿದೆ. ಆ ಬಳಿಕ ಆತ ಮೂರ್ಛೆ ಹೋಗಿದ್ದಾನೆ. ಮಗುವಿಗೆ ಪ್ರಜ್ಞೆ ಮರಳದಿದ್ದಾಗ ಅದೇ ಶಿಕ್ಷಕ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಅಲ್ಲಿ ವೈದ್ಯರು ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ. ಕೋಲಾಸಾರ್ ಗ್ರಾಮದ ನಿವಾಸಿ 13 ವರ್ಷದ ಗಣೇಶ್ ಅನ್ಯಾಯವಾಗಿ ಮೃತಪಟ್ಟ ವಿದ್ಯಾರ್ಥಿ.

ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಬುಧವಾರ ಬೆಳಗ್ಗೆ 13 ವರ್ಷದ ಬಾಲಕ ಶಾಲೆಗೆ ಹೋಗಿದ್ದಾನೆ. ಹೋಮ್ವರ್ಕ್ ಮಾಡಲಿಲ್ಲ ಎಂದು ಶಿಕ್ಷಕ ಮನೋಜ್ ಹಿಂಸೆಗಿಳಿದು ಬೀದಿ ಗೂಂಡಾ ರೀತಿ ತನ್ನ ಪುಟ್ಟ ವಿದ್ಯಾರ್ಥಿಗೆ ಮನಬಂದಂತೆ ಹೊಡೆದು ಪರಮ ಕ್ರೌರ್ಯ ಮೆರೆದಿದ್ದಾನೆ. ಹೊಡೆತ ತಾಳಲಾರದೆ ಅಮೂಲ್ಯ ಜೀವವು ಬಲಿಯಾಗಿ ಹೋಗಿದೆ. ಪೋಷಕರ ಆಕ್ರದಂನ ಮುಗಿಲು ಮುಟ್ಟುವಂತಿತ್ತು. ನಾಗರಿಕರು ಆಕ್ರೋಶಿತರಾಗಿದ್ದಾರೆ. ಶಿಕ್ಷಕನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಸಲಸಾರ್ ಎಸ್ ಎಚ್ ಒ ಸಂದೀಪ್ ವಿಷ್ಣೋಯ್ ಹೇಳಿದ್ದಾರೆ.ರಾಜಸ್ಥಾನ ಶಿಕ್ಷಣ ಸಚಿವ ಗೋವಿಂದ್ ಸಿಂಗ್ ದೋಟಾಸ್ರಾ ಈ ಕ್ರೂರ ಘಟನೆಯನ್ನು ಖಂಡಿಸಿದ್ದಾರೆ.



Join Whatsapp