ಮಂಗಳೂರು: ‘ನಕ್ಸಲ್’ ಜೊತೆಗಿನ ಸಂಬಂಧ ಆರೋಪ ಪ್ರಕರಣ | ವಿಠಲ ಮಲೆಕುಡಿಯ ದೋಷ ಮುಕ್ತ

Prasthutha|

ಮಂಗಳೂರು: ನಕ್ಸಲ್ ಚಟುವಟಿಕೆ ಜೊತೆ ಸಂಬಂಧ ಹೊಂದಿದ್ದಾಗಿ ಆರೋಪಿಸಿ ಬಂಧಿಸಲ್ಪಟ್ಟು ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದ್ದ ವಿಠಲ ಮಲೆಕುಡಿಯ, ಆತನ ತಂದೆ ದೊಷ ಮುಕ್ತರಾಗಿದ್ದಾರೆ. ಪ್ರಕರಣ ಸಂಬಂಧ ಇಂದು ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಅಂತಿಮ ತೀರ್ಪು ಪ್ರಕಟಿಸಿದೆ.

- Advertisement -

ಬೆಳ್ತಂಗಡಿ ತಾಲೂಕಿನ ಕುತ್ಲೂರು ನಿವಾಸಿಯಾಗಿದ್ದ ವಿಠಲ ಮಲೆಕುಡಿಯ ಅವರನ್ನು ಮಾರ್ಚ್ 3, 2012 ರಂದು ನಕ್ಸಲ್ ನಿಗ್ರಹ ದಳವು ಬಂಧಿಸಿತ್ತು. ಬಳಿಕ ನ್ಯಾಯಾಲಯಕ್ಕೆ ಸಲ್ಲಿಸಲಾದ ದೋಷಾರೋಪ ಪಟ್ಟಿಯಲ್ಲಿ ವಿಠಲ ಮಲೆಕುಡಿಯ ಅವರನ್ನು 6ನೇ ಆರೋಪಿಯನ್ನಾಗಿ ಹಾಗೂ ಅವರ ತಂದೆ ಲಿಂಗಣ್ಣ ಮಲೆಕುಡಿಯ ಅವರನ್ನು 7ನೇ ಆರೋಪಿಯನ್ನಾಗಿಸಲಾಗಿತ್ತು. ಬಂಧನದ ವೇಳೆ ವಿಠಲ ಮಲೆಕುಡಿಯ ಅವರ ಬಳಿ ಇದ್ದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಕುರಿತ ಪುಸ್ತಕಗಳನ್ನ ವಶಪಡಿಸಿಕೊಳ್ಳಲಾಗಿತ್ತು ಎಂದು ಜೈಲಿನಿಂದ ಬಿಡುಗಡೆಗೊಂಡ ಸಮಯದಲ್ಲಿ ವಿಠಲ ಮಲೆಕುಡಿಯ ಹೇಳಿದ್ದರು.
ಸಿಪಿಐಎಂ ಪಕ್ಷದ ಜೊತೆ ಗುರುತಿಸಿಕೊಂಡ ಹಿನ್ನೆಲೆ ಎಡಪಂಥೀಯ ನಾಯಕರು ವಿಠಲ ಮಲೆಕುಡಿಯ ಪರ ಕಾನೂನು ಹೋರಾಟಕ್ಕೆ ಕೈ ಜೋಡಿಸಿದ್ದರು. ಬಂಧನ ಸಮಯದಲ್ಲಿ ವಿಠಲ ಮಲೆಕುಡಿಯ ಮಂಗಳೂರು ವಿವಿಯ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದರು. ಜೈಲಿನಲ್ಲಿದ್ದ ಸಮಯದಲ್ಲಿ ಪರೀಕ್ಷೆಗೆ ಹಾಜರುಪಡಿಸಿದ್ದ ಪೊಲೀಸರು ಕೈಕೋಳ ತೊಟ್ಟು ಪರೀಕ್ಷೆ ಬರೆಯುವಂತೆ ಮಾಡಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು

Join Whatsapp