ತಲವಾರು ಝಳಪಿಸಿದವರ ವಿರುದ್ಧ ಲಘು ಸೆಕ್ಷನ್ ಗಳಡಿ ಪ್ರಕರಣ ದಾಖಲು: ವ್ಯಾಪಕ ಆಕ್ರೋಶ

Prasthutha|

ಬೆಳಗಾವಿ: ಆಯುಧ ಪೂಜೆಯ ದಿನ ಬಹಿರಂಗವಾಗಿ ತಲವಾರು ಝಳಪಿಸಿ ನಗರದಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕಠಿಣವಲ್ಲದ ಸೆಕ್ಷನ್ ನಡಿ ಪ್ರಕರಣ ದಾಖಲಿಸಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

- Advertisement -

ಬೆಳಗಾವಿಯ ಬ್ರಹ್ಮ ನಗರದ ಹನುಮಾನ್ ಮಂದಿರದಲ್ಲಿ ಅಕ್ಟೋಬರ್ 15 ರಂದು ಆಯುಧ ಪೂಜೆಯ ದಿನದಂದು 50ರಿಂದ 100 ರಷ್ಟಿದ್ದ ಸಂಘಪರಿವಾರದ ಕಾರ್ಯಕರ್ತರು ತಲವಾರು ಝಳಪಿಸುತ್ತಾ ಅಶಾಂತಿ ಸೃಷ್ಟಿಗೆ ಯತ್ನಿಸಿದ್ದರು. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಬೆಳಗಾವಿಯಲ್ಲಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಶಸ್ತ್ರಾಸ್ತ್ರ ಕಾಯ್ದೆ, ಐಪಿಸಿಯ ಕಠಿಣ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸದೆ ಠಾಣೆಯಲ್ಲೇ ಜಾಮೀನು ಸಿಗುವ ಪ್ರಕರಣ ದಾಖಲಿಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಬೆಳಗಾವಿಯ ಉದಯಂಬಾಗ್ ಪೊಲೀಸ್ ಠಾಣೆಯಲ್ಲಿ ಸಾಗರ್ ಎಂಬ ಪೊಲೀಸ್ ಸಿಬ್ಬಂದಿ ನೀಡಿದ ದೂರಿನ ಆಧಾರದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ.

- Advertisement -

100ಕ್ಕೂ ಅಧಿಕ ಮಂದಿ ತಲವಾರು ಝಳಪಿಸಿದ್ದರೂ ಅಲ್ಲಿ ಕೇವಲ 25 ಮಂದಿ ಮಾತ್ರ ಅಲ್ಲಿದ್ದರು ಎಂದು ಎಫ್ಐಆರ್ ನಲ್ಲಿ ತಿಳಿಸಲಾಗಿದೆ. ಐಪಿಸಿ ಸೆಕ್ಷನ್ 290 ಮತ್ತು 336 ಗಳಡಿ ಸಾರ್ವಜನಿಕ ಶಾಂತಿ ಭಂಗದಂತಹ ಸಾಮಾನ್ಯ ಸೆಕ್ಷನ್ ಗಳನ್ನು ಹಾಕಲಾಗಿದೆ.

ಇನ್ನು ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಬೆಳಗಾವಿಯ ಕಾನೂನು ಸುವ್ಯವಸ್ಥೆಯ ಡಿಸಿಪಿ ವಿಕ್ರಂ ಅಮ್ಟೆ ಅವರನ್ನು ಸಂಪರ್ಕಿಸುವ ಪ್ರಯತ್ನ ನಡೆಸಲಾಯಿತಾದರೂ ಅವರ ಸಂಪರ್ಕ ಸಾಧ್ಯವಾಗಿಲ್ಲ.

ಬೆಳಗಾವಿ ನಗರ ಆಯುಕ್ತ ಡಾ. ತ್ಯಾಗರಾಜನ್ ಅವರೊಂದಿಗೆ ಈ ಕುರಿತು ಪ್ರಶ್ನಿಸಿದಾಗ ಮೊದಲು ಅವರು, ನಾನು ಈ ಕುರಿತು ಯಾವ ಮಾಹಿತಿ ನೀಡುವುದಿಲ್ಲ ಎಂದು ಕರೆ ಸ್ಥಗಿತಗೊಳಿಸಿದರು. ಆ ಬಳಿಕ ಮತ್ತೆ ಕರೆ ಮಾಡಿ ಉದಯಂಬಾಗ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಸ್ವಯಂಪ್ರೇರಿತ ಪ್ರಕರಣದ ಕುರಿತು ಪ್ರಶ್ನಿಸಿದಾಗ, ದೇವಸ್ಥಾನಗಳಲ್ಲೂ ತಲವಾರುಗಳಿವೆ, ನಮ್ಮ ಪೊಲೀಸರ ಬಳಿಯೂ ಆಯುಧಗಳಿವೆ. ಆಯುಧ ಪೂಜೆಯ ಸಮಯದಲ್ಲಿ ಅವುಗಳನ್ನು ಪೂಜಿಸುತ್ತೇವೆ ಎಂದು ಉತ್ತರಿಸಿದ್ದಾರೆ.

ತಲವಾರು ಝಳಪಿಸಿದವರ ವಿರುದ್ಧ ಲಘು ಸೆಕ್ಷನ್ ಗಳ ಪ್ರಕರಣ ದಾಖಲಿಸಿರುವುದರ ಬಗ್ಗೆ ಕೇಳಿದಾಗ ಸೂಕ್ತವಾಗಿ ಉತ್ತರಿಸದೆ ಕರೆ ಸ್ಥಗಿತಗೊಳಿಸಿದ್ದಾರೆ.



Join Whatsapp