ಯಡಿಯೂರಪ್ಪ ಕಣ್ಣೀರಿಗೆ ಬಿಜೆಪಿ ಕೊಚ್ಚಿ ಹೋಗುತ್ತದೆ: ಡಿ.ಕೆ.ಶಿವಕುಮಾರ್

Prasthutha|

ಹಾನಗಲ್: ‘ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಯಡಿಯೂರಪ್ಪ ಅವರನ್ನು ಈಗ ಯಾವ ನದಿ, ಯಾವ ಡ್ಯಾಂ, ಯಾವ ಸಮುದ್ರಕ್ಕೆ ಎಸೆದಿದ್ದೀರಿ’ ಎಂದು ಬಿಜೆಪಿ ಮುಖಂಡರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.

- Advertisement -

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ಕ್ಷೇತ್ರದ ಮತದಾರರು ಕಟ್ಟಿ ಕೆಆರೆಸ್ ಡ್ಯಾಂಗೆ ಎಸೆದಿದ್ದಾರೆ ಎಂದು ಅಭ್ಯರ್ಥಿ ಶಿವರಾಜ್ ಸಜ್ಜನ ಸೇರಿದಂತೆ ಬಿಜೆಪಿ ಮುಖಂಡರು ಟೀಕೆ ಮಾಡಿದ್ದ ಹಾನಗಲ್ ವಿಧಾನಸಭೆ ಕ್ಷೇತ್ರದಲ್ಲೇ ಅವರಿಗೆ ಡಿ.ಕೆ. ಶಿವಕುಮಾರ್ ಅವರು ಸೋಮವಾರ ತಿರುಗೇಟು ನೀಡಿದ್ದಾರೆ.

‘ದಕ್ಷಿಣ ಭಾರತದಲ್ಲಿ ಬಿಜೆಪಿ ಸರಕಾರದ ಹೆಬ್ಬಾಗಿಲು ತೆರೆದಿದ್ದೇ ಯಡಿಯೂರಪ್ಪನವರು ಎಂದು ಹೇಳುತ್ತಿದ್ದ ಬಿಜೆಪಿಯವರು ಅವರನ್ನು ಈಗೇಕೆ ಹೀನಾಯವಾಗಿ ನಡೆಸಿಕೊಂಡರು? ಅವರನ್ಯಾಕೆ ಮೂಲೆಗುಂಪು ಮಾಡಿದರು? ಅವರು ಕಣ್ಣೀರು ಹಾಕಿಕೊಂಡು ಮನೆಗೆ ಹೋಗುವಂತೆ ಮಾಡಿದರು’ ಎಂದು ಕೆಲವರಕೊಪ್ಪದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರ ಪರ ಚುನಾವಣೆ ಪ್ರಚಾರ ಸಭೆಯಲ್ಲಿ ಪ್ರಶ್ನಿಸಿದರು.

- Advertisement -

‘ಯಡಿಯೂರಪ್ಪ ಅವರ ಕಣ್ಣೀರು ಬಿಜೆಪಿಯವರನ್ನು ಸುಮ್ಮನೆ ಬಿಡುವುದಿಲ್ಲ. ಈ ಸರಕಾರ ಅವರ ಕಣ್ಣೀರಿನಲ್ಲೇ ಕೊಚ್ಚಿಕೊಂಡು ಹೋಗುತ್ತದೆ’ ಎಂದೂ ಶಿವಕುಮಾರ್ ಹೇಳಿದರು. ಒಟ್ಟಾರೆ ಅವರು ಹೇಳಿದ್ದಿಷ್ಟು:

‘ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರಕಾರಗಳು ನಾಡಿಗೆ ಒಂದು ಶಾಪ. ಕರ್ನಾಟಕದವರೇ ಕೇಂದ್ರದಲ್ಲಿ ಕಲ್ಲಿದ್ದಲು ಮಂತ್ರಿ. ಆದರೆ ಇಲ್ಲಿ ಕಲ್ಲಿದ್ದಲ ಕೊರತೆ ಇದೆ. ಕರ್ನಾಟಕದವರೇ ಕೇಂದ್ರದಲ್ಲಿ ಗೊಬ್ಬರದ ಮಂತ್ರಿ. ಆದರೆ ಕರ್ನಾಟಕದಲ್ಲಿ ಗೊಬ್ಬರದ ಕೊರತೆ ಇದೆ. ಜತೆಗೆ ಬೆಲೆಯೂ ಹೆಚ್ಚಳವಾಗಿದೆ. ಕರ್ನಾಟಕದಿಂದ ರಾಜ್ಯಸಭೆಗೆ ಹೋದ ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವರು. ಆದರೆ ರಾಜ್ಯಕ್ಕೆ ಬರಬೇಕಾದ ಜಿಎಸ್ಟಿ ಪಾಲಾಗಲಿ, ಆರ್ಥಿಕ ಅನುದಾನವಾಗಲಿ, ನೆರೆ ಪರಿಹಾರವಾಗಲಿ ಬರಲಿಲ್ಲ. ಇದು ನಮ್ಮ ರಾಜ್ಯದ ಹಣೆಬರಹ.

ಸಿಎಂ ಬಸವರಾಜ ಬೊಮ್ಮಾಯಿ ಅವರು ವೀರಾವೇಶದಿಂದ ಮಾತಾಡಿದ್ದಾರೆ. ಕ್ಷೇತ್ರದಲ್ಲಾಗಿರೋ ಅಭಿವೃದ್ಧಿ ಕೆಲಸ ನೋಡಿ ಎಂದು ಸವಾಲು ಹಾಕಿದ್ದಾರೆ. ನೋಡೋಣ ಎಂದು ಈಗ ನಿಮ್ಮೂರಿಗೆ ಕಾರಿಳಿದು ನಡೆದುಕೊಂಡೇ ಬಂದೆ. ರೋಡ್ ಕಣಿವೆ ಇದ್ದಂತಿದೆ. ಅದಕ್ಕೆ ನೀವೇ ಸಾಕ್ಷಿ. ಇದೇನಾ ಅಭಿವೃದ್ಧಿ ಕೆಲಸ ಅಂದ್ರೆ..? ಎಂದು ಪ್ರಶ್ನಿಸಿದರು.

ಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ, ರಾಜ್ಯದ ಮಾಜಿ ಸಚಿವರಾದ ಎಚ್.ಕೆ. ಪಾಟೀಲ್, ಎ.ಎಂ. ಹಿಂಡಸಗೇರಿ, ಅಲ್ಲಂ ವೀರಭದ್ರಪ್ಪ, ಮನೋಹರ್ ತಹಶೀಲ್ದಾರ್, ಪಿ.ಟಿ. ಪರಮೇಶ್ವರ ನಾಯಕ್, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಅಭ್ಯರ್ಥಿ ಶ್ರೀನಿವಾಸ ಮಾನೆ, ಮಾಜಿ ಸಂಸದ ಚಂದ್ರಪ್ಪ, ಮುಖಂಡ ಅನಿಲ್ ಪಾಟೀಲ್ ಮತ್ತಿತರರು

Join Whatsapp