ಬೆಂಗಳೂರು: ಮಾಹಿತಿ ಹಕ್ಕು ಕಾಯಿದೆ (ಆರ್ ಟಿಐ) ಅಡಿಯಲ್ಲಿ ಪೊಲೀಸರ ತನಿಖಾ ವರದಿ ಪಡೆಯಲು ಅವಕಾಶವಿದೆ ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ಆದೇಶಿಸಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತನಿಖಾ ವರದಿಯ ಪ್ರತಿಯನ್ನು ಆರ್ ಟಿಐ ಅಡಿಯಲ್ಲಿ ನೀಡುವಂತೆ ರಾಜ್ಯ ಮಾಹಿತಿ ಹಕ್ಕು ಆಯೋಗ ನೀಡಿದ ಆದೇಶವನ್ನು ಪ್ರಶ್ನಿಸಿ ಅಪರಾಧ ತನಿಖಾ ವಿಭಾಗದ (ಸಿಐಡಿ) ಮಾಹಿತಿ ಹಕ್ಕು ಅಧಿಕಾರಿ ಮತ್ತು ಪೊಲೀಸ್ ಮಹಾ ನಿರ್ದೇಶಕರು ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಎನ್ ಎಸ್ ಸಂಜಯ್ ಗೌಡ ನೇತೃತ್ವದ ಏಕ ಸದಸ್ಯ ಪೀಠವು ಮೇಲಿನಂತೆ ಆದೇಶ ಮಾಡಿದೆ.
ತನಿಖಾ ಹಂತದಲ್ಲಿ ಯಾವುದೇ ಪ್ರಕರಣದ ಮಾಹಿತಿಯನ್ನು ನೀಡಲು ನಿರ್ಬಂಧವಿದೆ. ಆದರೆ, ತನಿಖೆಯ ಪೂರ್ಣಗೊಂಡ ನಂತರ ಪೊಲೀಸರ ತನಿಖಾ ವರದಿಯ ಪ್ರತಿಯನ್ನು ಮಾಹಿತಿ ಹಕ್ಕು ಕಾಯಿದೆ ಅಡಿ ನೀಡಬಹುದಾಗಿದೆ. ಈ ಕುರಿತು ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತರು ನೀಡಿದ ಆದೇಶವು ನ್ಯಾಯಸಮ್ಮತವಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಸಿಐಡಿ ಪೊಲೀಸರು ಪ್ರಕರಣವೊಂದರ ಸಂಬಂಧ ತನಿಖೆ ನಡೆಸಿ ಅಧೀನ ನ್ಯಾಯಾಲಯಕ್ಕೆ ಬಿ ವರದಿ ಸಲ್ಲಿಸಿದ್ದರು. ಬಿ ವರದಿ ಪ್ರತಿ ಒದಗಿಸುವಂತೆ ಕೋರಿ ಧಾರವಾಡದ ಮಲ್ಲೇಶಪ್ಪ ಎಂ.ಚಿಕ್ಕೇರಿ ಎಂಬುವರು ಸಿಐಡಿಗೆ ಮಾಹಿತಿ ಹಕ್ಕು ಕಾಯಿದೆ ಅಡಿ ಅರ್ಜಿ ಸಲ್ಲಿಸಿದ್ದರು. ಆದರೆ, ತನಿಖಾ ವರದಿಯನ್ನು ನೀಡಲು ಸಾಧ್ಯವಿಲ್ಲ ಎಂದು ಸಿಐಡಿಯ ಮಾಹಿತಿ ಹಕ್ಕು ಅಧಿಕಾರಿ ತಿಳಿಸಿದ್ದರು.
ಹೀಗಾಗಿ, ಮಲ್ಲೇಶಪ್ಪ ಅವರು ರಾಜ್ಯ ಮಾಹಿತಿ ಹಕ್ಕು ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ಅದನ್ನು ಮಾನ್ಯ ಮಾಡಿದ್ದ ಆಯೋಗದ ಆಯುಕ್ತರು, ಮಲ್ಲೇಶಪ್ಪ ಅವರ ಕೋರಿಕೆಯಂತೆ ತನಿಖಾ ವರದಿಯ ಪ್ರತಿ ಒದಗಿಸುವಂತೆ ಸಿಐಡಿಗೆ ಸೂಚಿಸಿ ಆದೇಶ ಮಾಡಿದ್ದರು. ಈ ಆದೇಶವನ್ನು ಪ್ರಶ್ನಿಸಿ ಸಿಐಡಿಯ ಮಾಹಿತಿ ಹಕ್ಕು ಅಧಿಕಾರಿ ಮತ್ತು ಪೊಲೀಸ್ ಮಹಾ ನಿರ್ದೇಶಕರು ಹೈಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಆರ್ಟಿಐ ಅಡಿಯಲ್ಲಿ ಪೊಲೀಸರ ತನಿಖಾ ವರದಿಯ ಪ್ರತಿಯನ್ನು ಪಡೆಯುವ ಹಕ್ಕು ಇದೆ ಎಂದು ಆದೇಶಿಸಿದೆ.
(ಕೃಪೆ: ಬಾರ್ & ಬೆಂಚ್)