ಕಠ್ಮಂಡು: ಮುಗು ಜಿಲ್ಲೆಯಲ್ಲಿನ ನದಿಯೊಂದಕ್ಕೆ ಬಸ್ ವೊಂದು ಉರುಳಿ ಬಿದ್ದ ಪರಿಣಾಮ 28 ಪ್ರಯಾಣಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಅಲ್ಲದೇ ಘಟನೆಯಲ್ಲಿ 10 ಮಂದಿ ತೀವ್ರ ಗಾಯಗೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿನ ರಾರಾ ಸರೋವರಕ್ಕೆ ಖ್ಯಾತಿಯಾದ ಮುಗು ಜಿಲ್ಲೆಯಲ್ಲಿ 38 ಮಂದಿಯನ್ನು ಕರೆದೊಯ್ಯುತ್ತಿದ್ದ ಬಸ್ ನದಿಗೆ ಮಗುಚಿ ಬಿದ್ದಿದೆ.
ರಾರಾ ಪುರಸಭೆ ವ್ಯಾಪ್ತಿಯಲ್ಲಿರುವ ಪಿನಾ ಝ್ಯಾರಿ ನದಿಗೆ ಉರುಳಿ ಬಿದ್ದಿದ್ದು, ನೇಪಾದಳ ಗುಂಜ್ನಿಂದ ಮುಗು ಜಿಲ್ಲೆಯ ಜಿಲ್ಲಾ ಕೇಂದ್ರವಾದ ಗಾಮಗಧಿಯತ್ತ ತೆರಳುತ್ತಿದ್ದ ವೇಳೆ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ರಕ್ಷಣಾ ಕಾರ್ಯಾಚರಣೆಗೆ ತುರ್ತಾಗಿ ನೇಪಾಳ ಸೇನೆಯ ಹೆಲಿಕಾಪ್ಟರ್ ಅನ್ನು ಸುರಖೇಟಿನಿಂದ ಅಪಘಾತ ಸಂಭವಿಸಿದ ಸ್ಥಳಕ್ಕೆ ಕಳುಹಿಸಲಾಗಿದೆ. ದಸರಾ ಹಬ್ಬದ ಪ್ರಯುಕ್ತ ಹೆಚ್ಚಿನ ಪ್ರಯಾಣಿಕರು ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.