ಬಾಗಲಕೋಟೆ: ಜಿಲ್ಲೆಯ ಇಳಕಲ್ ಎಂಬಲ್ಲಿ ಟೋಪಿ ಧರಿಸಿದ ನೆಪವೊಡ್ಡಿ ಮೂವರು ವಿದ್ಯಾರ್ಥಿಗಳ ಮೇಲೆ ಸಂಘಪರಿವಾರದ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸೋಮವಾರ ನಡೆದಿದೆ.
ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಬಳಿಕವೂ ಪೊಲೀಸರ ಸಮ್ಮುಖದಲ್ಲೇ ಆಸ್ಪತ್ರೆಯಲ್ಲಿಯೂ ಅದೇ ತಂಡ ಹಲ್ಲೆ ನಡೆಸಿದೆ ಎಂದು ತಿಳಿದುಬಂದಿದೆ. ಮುಸ್ಲಿಮ್ ವಿದ್ಯಾರ್ಥಿಗಳು ತಲೆಗೆ ಟೋಪಿ ಹಾಕಿಕೊಂಡು ಹೋಗುತ್ತಿದ್ದಾಗ ತಡೆದು ನಿಲ್ಲಿಸಿದ ಸಂಘಪರಿವಾರದ ಕಾರ್ಯಕರ್ತರ ಗುಂಪೊಂದು ಅವಾಚ್ಯಶಬ್ಧಗಳಿಂದ ನಿಂದಿಸಿ, ದೊಣ್ಣೆಯಿಂದ ಹಲ್ಲೆ ನಡೆಸಿದೆ ಎಂದು ಗಾಯಗೊಂಡ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಈ ಬಗ್ಗೆ ಇಳಕಲ್ ಪೊಲೀಸರಿಗೆ ದೂರು ನೀಡಲಾಗಿದೆ.
ಕ್ಯಾಂಪಸ್ ಫ್ರಂಟ್ ಖಂಡನೆ
ಸಂಘಪರಿವಾರದ ಗೂಂಡಾಗಳಿಂದ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಮಾತ್ರವಲ್ಲದೆ ಆಸ್ಪತ್ರೆಗೆ ದಾಖಲಾದವರ ಮೇಲೆಯೂ ಪೋಲಿಸ್ ಬೆಂಗಾವಳಿನೊಂದಿಗೆ ನುಗ್ಗಿ ಹಲ್ಲೆ ನಡೆಸಿರುವುದನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬಾಗಲಕೋಟೆ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.
ಜಿಲ್ಲೆಯಲ್ಲಿ ಸಂಘಪರಿವಾರ ಪ್ರಾಯೋಜಿತ ಗೂಂಡಾಗಿರಿಯು ಮಿತಿಮೀರುತ್ತಿದ್ದು ಆಡಳಿತ ವ್ಯವಸ್ಥೆ ಮತ್ತು ಪೋಲೀಸ್ ಇಲಾಖೆಯು ಗೂಂಡಾಗಳಿಗೆ ಸಹಕಾರವನ್ನು ನೀಡುತ್ತಿರುವುದು ಕಂಡುಬರುತ್ತಿದೆ.
ಧರ್ಮ ನಿಂದನೆಗೈದು ಪೋಲಿಸ್ ಪಡೆಯ ಸಮ್ಮುಖದಲ್ಲಿಯೇ ವಿದ್ಯಾರ್ಥಿಗಳಿಗೆ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಹಲ್ಲೆ ನಡೆಸಿರುವಾಗ ರಾಜ್ಯದಲ್ಲಿ ಆರಾಜಕತೆ ಸೃಷ್ಟಿಯಾಗುತ್ತಿದೆ.
ಪೋಲಿಸ್ ಇಲಾಖೆಯು ತಕ್ಷಣವೇ ಎಲ್ಲಾ ಗೂಂಡಾಗಳ ವಿರುದ್ಧ ಕಠಿಣ ಸೆಕ್ಷನ್ನಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಬೇಕು. ಜಿಲ್ಲೆಯಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಪೋಲಿಸ್ ಬಂದೂಬಸ್ತ್ ಏರ್ಪಡಿಸಬೇಕೆಂದು ಕ್ಯಾಂಪಸ್ ಫ್ರಂಟ್ ಬಾಗಲಕೋಟೆ ಜಿಲ್ಲಾಧ್ಯಕ್ಷ ಮುಜೀಬ್ ಬನಹಟ್ಟಿ ಆಗ್ರಹಿಸಿದ್ದಾರೆ.