ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಥಳೀಯ ಕಾರ್ಮಿಕರಿಗೆ ಅವಕಾಶವಿಲ್ಲ : ಮುನೀರ್ ಕಾಟಿಪಳ್ಳ

Prasthutha|

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅದಾನಿ ಕಂಪೆನಿ ಮಾರಾಟ ಮಾಡಿಕೊಂಡ ನಂತರ ವಿಮಾನ ನಿಲ್ದಾಣದ ಗುತ್ತಿಗೆ ಕಂಪೆನಿಗಳ ಅಡಿ ದುಡಿಯುತ್ತಿದ್ದ ಸ್ಥಳೀಯ ಕಾರ್ಮಿಕರನ್ನು ಹಲವು ನೆಪಗಳನ್ನು ಮುಂದಿಟ್ಟು ಕೈ ಬಿಡಲಾಗುತ್ತಿದೆ. ಹೊರ ರಾಜ್ಯದ ಗುತ್ತಿಗೆ ಕಾರ್ಮಿಕರ ಸೇರ್ಪಡೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಡಿವೈಎಫ್ ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದರು.

- Advertisement -


ಈ ಬಗ್ಗೆ ಮಾತನಾಡಿದ ಅವರು ʻಈ ನಡುವೆ ಮಂಗಳೂರು ವಿಮಾನ ನಿಲ್ದಾಣದ ಅಗ್ನಿಶಾಮಕ ದಳಕ್ಕೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಅಗ್ನಿಶಾಮಕ ದಳ ಸಿಬ್ಬಂದಿಯನ್ನು ಗುತ್ತಿಗೆ ನೀಡಲು ಅವಕಾಶ ಇಲ್ಲದಿರುವುದರಿಂದ ಅದಾನಿ ಕಂಪೆನಿ ನೇರ ನೇಮಕಾತಿ ಮಾಡಬೇಕಿದೆ. ಮಂಗಳೂರು ವಿಮಾನ ನಿಲ್ದಾಣ ಅಗ್ನಿಶಾಮಕ ದಳದ ಸಿಬ್ಬಂದಿ ನೇಮಕಾತಿಯ ಕುರಿತು ಕೆಲವು ಮಾಹಿತಿಗಳು ಹೊರ ಬಂದಿದ್ದು ಸ್ಥಳೀಯರಿಗೆ ಆಘಾತಕಾರಿಯಾಗಿದೆ. 80 ಸಿಬ್ಬಂದಿಗಳ ನೇಮಕಾತಿಯ ಅಗತ್ಯ ಇದ್ದರೂ ಸದ್ಯ 20 ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಇಲ್ಲಿ ಆಘಾತಕಾರಿ ಸಂಗತಿಯೆಂದರೆ ಎಸ್ ಎಸ್ ಎಲ್ ಸಿ ವಿದ್ಯಾಭ್ಯಾಸ ಸಾಕಾಗುವ ಅಗ್ನಿ ಶಾಮಕ ದಳದ ಸಿಬ್ಬಂದಿಯಂತಹ ಸಾಮಾನ್ಯ ಹುದ್ದೆಗೂ ಆದಾನಿ ಕಂಪೆನಿ ಸ್ಥಳೀಯರಿಗೆ ಆದ್ಯತೆ, ಅವಕಾಶ ನೀಡುತ್ತಿಲ್ಲʼ ಎಂದು ಆರೋಪಿಸಿದರು.


ಸದ್ಯದ ಬೆಳವಣಿಗೆ ಪ್ರಕಾರ ಅದಾನಿ ಕಂಪೆನಿಯು ಸ್ಥಳೀಯರಿಗೆ ಆದ್ಯತೆ ನೀಡಿ ಪಾರದರ್ಶಕವಾಗಿ ನೇಮಕಾತಿ ಪ್ರಕ್ರಿಯೆ ನಡೆಸುತ್ತಿಲ್ಲ. ಬದಲಿಗೆ ತನಗೆ “ಅನುಭವಸ್ಥರು” ಬೇಕು ಎಂದು ಹೊರ ರಾಜ್ಯಗಳಲ್ಲಿ ಸಿಬ್ಬಂದಿಗಳ ಹುಡುಕಾಟ ನಡೆಸುತ್ತಿದೆ. ವಿಮಾನ ನಿಲ್ದಾಣಕ್ಕೆ ಜಮೀನು ನೀಡಿದವರು, ತುಳುನಾಡಿನವರು, ಬಿಡಿ ಇಡೀ ಕರುನಾಡಿನವರೂ ಅದಾನಿ ಕಂಪೆನಿಯವರು “ಹುಡುಕಾಟ” ನಡೆಸುತ್ತಿರುವ ಅನುಭವಸ್ಥರ ಪಟ್ಟಿಯಲ್ಲಿ ಇಲ್ಲ ಎಂಬುದು ವಿಮಾನ ನಿಲ್ದಾಣದ ಒಳಗಡೆಯಿಂದ ನುಸುಳಿ ಬರುತ್ತಿರುವ ಸುದ್ದಿಯಾಗಿದೆ.
ಅಗ್ನಿಶಾಮಕ ದಳಕ್ಕೆ ಸಾಮಾನ್ಯವಾಗಿ ನೇಮಕಾತಿ ನಡೆಯುವುದು ಎಸ್ಎಸ್ಎಲ್ಸಿ ಪ್ರಮಾಣಪತ್ರ ಹಾಗೂ ದೈಹಿಕ ದೃಢಕಾಯ ಹೊಂದಿರುವವರ ಆಧಾರದಲ್ಲಿ. ನೇಮಕಾತಿಯ ನಂತರ ತರಬೇತಿ ನೀಡಿ ಅವರನ್ನು ವೃತ್ತಿಗೆ ಸಿದ್ಧಗೊಳಿಸಲಾಗುತ್ತದೆ. ಆದರೆ ಅದಾನಿ ಕಂಪೆನಿ ಮಾತ್ರ ತುಳುನಾಡಿನವರನ್ನು ಮಾತ್ರ ಅಲ್ಲ ಇಡೀ ಕರ್ನಾಟಕದವರನ್ನೇ ಹೊರಗಿಡಲು “ಅನುಭವೀ ಸಿಬ್ಬಂದಿ” ಎಂಬ ಸೂತ್ರವನ್ನು ಮುಂದಿಟ್ಟು ತುಳುವರನ್ನು ವಂಚಿಸಲು ಹೊರಟಿದೆ.

- Advertisement -


ದೇಶದ ಬೇರೆ ಬೇರೆ ಮಹಾ ನಗರಗಳಲ್ಲಿ ಉದ್ಯೋಗ ಕಳೆದು ಕೊಂಡು ತುಳುವರು ತಮ್ಮ ತವರು ಜಿಲ್ಲೆಗೆ ವಾಪಾಸಾಗುತ್ತಿರುವ, ನಿರುದ್ಯೋಗ ಭೀಕರ ಸ್ವರೂಪ ತಾಳುತ್ತಿರುವ ಸಂದರ್ಭ ಹೊಸ ಉದ್ಯೋಗವಾಕಾಶಗಳು ತುಳುನಾಡಿನಲ್ಲಿ ಸೃಷ್ಟಿಯಾಗಬೇಕಿತ್ತು. ದುರಂತ ಏನೆಂದರೆ, ಹೊಸ ಉದ್ಯೋಗಗಳ ಸೃಷ್ಟಿಗೆ ಸರಕಾರ ಇಲ್ಲಿ ಯಾವ ಯೋಜನೆಯನ್ನೂ ಹೊಂದಿಲ್ಲ. ಬದಲಿಗೆ ಇರುವ ಉದ್ಯೋಗಗಳನ್ನೂ ಸ್ಥಳೀಯರಿಗೆ ವಂಚಿಸಿ ಹೊರ ರಾಜ್ಯದವರ ಪಾಲಾಗುವಂತೆ ಮಾಡಲಾಗುತ್ತಿದೆ. ಅದಾನಿ ಕಂಪೆನಿ ವಿಮಾನ ನಿಲ್ದಾಣದಲ್ಲಿ ಮಾಡುತ್ತಿರುವುದು ಅದನ್ನೆ. ಜಿಲ್ಲಾಡಳಿತ ಕಣ್ಣು ಮುಚ್ಚಿದೆʼ ಎಂದು ಹೇಳಿದ್ದಾರೆ.


ಇನ್ನು ಮೂರು ವರ್ಷ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಅದಾನಿ ಕಂಪೆನಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜೊತೆಯಾಗಿ ಕಾರ್ಯ ನಿರ್ವಹಿಸಲಿದೆ. ಅಷ್ಟರಲ್ಲಿ ಅದಾನಿ ಕಂಪೆನಿಗೆ ವಿಮಾನ ನಿಲ್ದಾಣ ನಿರ್ವಹಣೆ ತರಬೇತಿಯನ್ನು ಪೂರ್ತಿಗೊಳಿಸಿ ವಿಮಾನ ನಿಲ್ದಾಣ ಪ್ರಾಧಿಕಾರದ ಸಿಬ್ಬಂದಿಗಳು ಅಲ್ಲಿಂದ ಹೊರ ನಡೆಯಲಿದ್ದಾರೆ. ಅದರ ಭಾಗವಾಗಿ ಅದಾನಿ ಕಂಪೆನಿ ಸುಮಾರು ನೂರರ ಹತ್ತಿರ ಸಿಬ್ಬಂದಿಗಳನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ಕರೆ ತಂದಿದೆ. ಈಗ ಇರುವ ಮಾಹಿತಿ ಪ್ರಕಾರ ಇದರಲ್ಲಿ ಒಬ್ಬರೂ ತುಳುನಾಡಿನವರಿಲ್ಲ. ಕರುನಾಡಿನವರೂ ಇರುವುದು ಅನುಮಾನ. ಎಲ್ಲ ಉತ್ತರ ಭಾರತ ಮಯವಾಗುತ್ತಿದೆ ಎಂದರು.



Join Whatsapp