ನವದೆಹಲಿ: ಏರ್ ಇಂಡಿಯಾ ಖಾಸಗೀಕರಣ ಪೂರ್ಣಗೊಂಡ ಬಳಿಕ ಇದೀಗ ಅದರ ನಾಲ್ಕು ಇತರ ಅಂಗಸಂಸ್ಥೆಗಳ ಮಾರಾಟಕ್ಕೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಅಲಾಯನ್ಸ್ ಏರ್ ಸೇರಿದಂತೆ 14,700 ಕೋಟಿ ರೂ. ಮೀರಿದ ಭೂಮಿ ಹಾಗೂ ಕಟ್ಟಡಗಳನ್ನು ಮಾರಾಟ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ (ದೀಪಮ್) ಈ ಸಂಬಂಧ ಯೋಜನೆಗಳನ್ನು ಸಿದ್ಧಪಡಿಸುತ್ತಿದೆ ಎನ್ನಲಾಗಿದೆ. ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಿ ಏರ್ ಇಂಡಿಯಾದ ಅಂಗ ಸಂಸ್ಥೆಗಳ ಮಾರಾಟಕ್ಕೆ ಇದೀಗ ಸರಕಾರ ಸಿದ್ಧತೆ ನಡೆಸಿದೆ.
ಏರ್ ಇಂಡಿಯಾದ ನಾಲ್ಕು ಅಂಗ ಸಂಸ್ಥೆಗಳಾದ ಏರ್ ಇಂಡಿಯಾ ಸಾರಿಗೆ ಸೇವೆಗಳು (AIATSL), ಏರ್‌ಲೈನ್ ಅಲಾಯ್ಡ್ ಸರ್ವೀಸಸ್ ಲಿ, ಏರ್ ಇಂಡಿಯಾ ಇಂಜಿನಿಯರಿಂಗ್ ಸರ್ವೀಸಸ್ ಲಿ ಮತ್ತು ಹೊಟೇಲ್ ಕಾರ್ಪೋರೇಷನ್ ಆಫ್ ಇಂಡಿಯಾಗಳನ್ನು ಮಾರಲು ಸರಕಾರ ಮುಂದಾಗಿದೆ. ಇವು 2019ರಲ್ಲಿ ಸ್ಥಾಪಿಸಲ್ಪಟ್ಟ ಏರ್ ಇಂಡಿಯಾದ ಅಸೆಟ್ಸ್ ಹೋಲ್ಡಿಂಗ್ ಲಿ (ಎಐಎಎಚ್‌ಎಲ್) ಎಂಬ ಹೆಸರಿನಡಿಯಲ್ಲಿ ಕಾರ್ಯಾಚರಿಸುತ್ತಿದ್ದವು. ಗ್ರೌಂಡ್ ನಿರ್ವಹಣೆ, ಇಂಜಿನಿಯರಿಂಗ್ ಹಾಗೂ ಅಲಾಯನ್ಸ್ ಏರ್‌ಗಳು ಏರ್ ಇಂಡಿಯಾದ ಅಂಗಸಂಸ್ಥೆಗಳಾಗಿವೆ, ಇವೆಲ್ಲವನ್ನೂ ಖಾಸಗೀಕರಣಗೊಳಿಸಬೇಕಿದೆ ಎಂದು ದೀಪಂ ಕಾರ್ಯದರ್ಶಿ ತುಹಿನ್ ಕಾಂತಾ ಪಾಂಡೆ ಹೇಳಿದ್ದಾರೆ.
ಏರ್ ಇಂಡಿಯಾವನ್ನು ಬಿಡ್ ಮೂಲಕ ಟಾಟಾ ಸಮೂಹ ಸಂಸ್ಥೆ ಖರೀದಿ ಮಾಡಿದೆ. ಸಾಲಪೀಡಿತ ಏರ್ ಇಂಡಿಯಾವನ್ನು 18,000 ಕೋಟಿಗೆ ಟಾಟಾ ತನ್ನದಾಗಿಸಿದೆ. 2,700 ಕೋಟಿ ರೂ.ಗಳನ್ನು ನಗದು ಪಾವತಿ ರೂಪದಲ್ಲಿ ಹಾಗೂ 15,300 ಕೋಟಿ ರೂ.ಗಳ ಸಾಲದ ಮೂಲಕ ರ್ ಇಂಡಿಯಾವನ್ನು ಟಾಟಾ ಸಂಸ್ಥೆ ಖರೀದಿ ಮಾಡಿದೆ.