ಲಕ್ನೋ: ಲಖಿಂಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ನನ್ನು ಶನಿವಾರ ತಡರಾತ್ರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಸ್ತುತ ಆತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಲಖಿಂಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸುಮಾರು 12 ಗಂಟೆಗಳ ವಿಚಾರಣೆಯ ಬಳಿಕ ವೈದ್ಯಕೀಯ ತಂಡ ಪರೀಕ್ಷಿಸಿದ ನಂತರ ಆಶಿಶ್ ನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.
ಈ ಮಧ್ಯೆ ಆರೋಪಿ ಆಶಿಶ್ ನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಬೇಕೆಂದು ಸಲ್ಲಿಸಿದ ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ಅವರು ಸೋಮವಾರ ವಿಚಾರಣೆ ನಡೆಸಲಿದ್ದಾರೆ.
ಕಳೆದ ವಾರ ಉತ್ತರಪ್ರದೇಶದ ಲಖಿಂಪುರದಲ್ಲಿ ನಾಲ್ವರು ರೈತರು ಸೇರಿದಂತೆ 8 ಮಂದಿಯ ಹತ್ಯೆಗೆ ಕಾರಣವಾದ ಪ್ರಕರಣದಲ್ಲಿ ಆಶಿಶ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಸಾಕಷ್ಟು ವಿವಾದಕ್ಕೆ ಸಾಕ್ಷಿಯಾಗಿದ್ದ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಆಶಿಶ್ ಬಂಧನಕ್ಕೆ ರೈತ ಮುಖಂಡರು ಮತ್ತು ವಿರೋಧ ಪಕ್ಷಗಳು ಒತ್ತಾಯಿಸಿದ್ದವು.